ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

35ಕ್ಕೇರಲಿದೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ

20ರಿಂದ ಕ್ಷೇತ್ರ ಪುನರ್‌ವಿಂಗಡಣೆ ಆರಂಭ, ಒಟ್ಟು ತಾಲ್ಲೂಕು ಪಂಚಾಯಿತಿ ಸ್ಥಾನಗಳು 90
Last Updated 12 ಫೆಬ್ರುವರಿ 2021, 13:41 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರ ಪುನರ್‌ವಿಂಗಡಣೆಗೆ ಚುನಾವಣಾ ಆಯೋಗ ಸೂಚಿಸಿದ್ದು, ಈಗಾಗಲೇ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಪುನರ್‌ವಿಂಗಡಣೆ ನಂತರ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 31ರಿಂದ 35ಕ್ಕೇರಲಿದೆ.

ಇದೇ ತಿಂಗಳ 20ರಿಂದ ಜಿಲ್ಲೆಯಲ್ಲಿ ಕ್ಷೇತ್ರ ಪುನರ್‌ವಿಂಗಡಣಾ ಕಾರ್ಯ ಆರಂಭವಾಗಲಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರ್ಪಡೆಯಾಗಿರುವ, ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆ ಏರಿರುವ ಗ್ರಾಮಗಳು, ಗ್ರಾಮ ಪಂಚಾಯಿತಿಗಳನ್ನು ಪ್ರತ್ಯೇಕಿಸಿ ಹೊಸದಾಗಿ ಕ್ಷೇತ್ರ ರಚಿಸಲಾಗುತ್ತಿದೆ. ವಿಂಗಡಣೆ ಮಾಡುವಾಗ ಗ್ರಾಮ ಪಂಚಾಯಿತಿಗಳನ್ನು ವಿಂಗಡಿಸದೇ ಪ್ರತಿ ಗ್ರಾಮ ಪಂಚಾಯಿತಿಯ ಎಲ್ಲ ಹಳ್ಳಿಗೂ ಒಂದೇ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವಂತೆ ಗಮನ ಹರಿಸಲು, ಭೌಗೋಳಿಕ ಅಸ್ಮಿತೆ, ಸಂಪರ್ಕ ಮಾರ್ಗಗಳನ್ನೂ ಗಣನೆಗೆ ತೆಗೆದುಕೊಳ್ಳಲು ಸೂಚಿಸಲಾಗಿದೆ.

ಚುನಾವಣಾ ಕ್ಷೇತ್ರಗಳ ಮಧ್ಯೆ ಜನಸಂಖ್ಯೆಯಲ್ಲಿ ಭಾರಿ ವ್ಯತ್ಯಾಸಗಳಾಗದಂತೆ ನೋಡಿಕೊಳ್ಳಬೇಕಿದೆ. ತಾಲ್ಲೂಕಿನ ಒಳಗೆ ರಚಿಸುವ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಒಳಗೆ ಅದೇ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಇರುವಂತೆ ಗಮನ ಹರಿಸಬೇಕಿದೆ. ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರವು ಎರಡು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮಧ್ಯೆ ಹಂಚಿಹೋಗದಂತೆ ನೊಡಿಕೊಳ್ಳಬೇಕಿದೆ. ಹೊಸದಾಗಿ ರಚನೆಯಾಗುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ಆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಗ್ರಾಮದ ಹೆಸರು ಇಡಬೇಕಿದೆ. ಯಾವುದೇ ಪಂಚಾಯಿತಿಯ ಸದಸ್ಯರ ಸಂಖ್ಯೆ ಅಲ್ಲಿನ ಜನ ಸಂಖ್ಯೆಗೆ ಅನುಗುಣವಾಗಿ ಇದ್ದರೆ ಅದನ್ನು ಪುನರ್‌ವಿಂಗಡಣೆ ಮಡುವ ಅಗತ್ಯವಿಲ್ಲ ಎಂದು ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಆರ್‌. ಚಂದ್ರಶೇಖರ್‌ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇನೈಸರ್ಗಿಕ ಸಂಪನ್ಮೂಲಗಳ ದತ್ತಾಂಶ ನಿರ್ವಹಣಾ ವ್ಯವಸ್ಥೆ ಅಡಿ ತಾಲ್ಲೂಕುವಾರು ವೈಜ್ಞಾನಿಕ ತಂತ್ರಜ್ಞಾನದಿಂದ ತಯಾರಿಸಿರುವ ಗ್ರಾಮ ಗಡಿಗಳ ನಕ್ಷೆ ಇರುವುದರಿಂದ ಕ್ಷೇತ್ರದ ಪುನರ್ ವಿಂಗಡಣೆ ಸಕಾಲದಲ್ಲಿ, ವೈಜ್ಞಾನಿಕವಾಗಿ ನಿಶ್ಚಿತವಾಗಿ ತಯಾರಿಸಲು ಸಾಧ್ಯವಾಗಲಿದೆ.

2016ರಲ್ಲಿ 31 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 15, ಕಾಂಗ್ರೆಸ್ 8, ಜೆಡಿಎಸ್ 7, ಒಬ್ಬರು ಪಕ್ಷೇತರರು ಆಯ್ಕೆಯಾಗಿದ್ದರು.ಕಾಂಗ್ರೆಸ್, ಜೆಡಿಎಸ್‌ ಒಪ್ಪಂದ ಮೇಲೆ ಜೆಡಿಎಸ್‌ ಸದಸ್ಯೆ ಭದ್ರಾವತಿ ತಾಲ್ಲೂಕು ಹಿರಿಯೂರು ಕ್ಷೇತ್ರದ ಜ್ಯೋತಿ ಎಸ್‌.ಕುಮಾರ್ ಅಧ್ಯಕ್ಷೆಯಾಗಿ, ಹಸೂಡಿ ಕ್ಷೇತ್ರದ ಪಕ್ಷೇತರ ಸದಸ್ಯೆ ವಿಜಯಕುಮಾರ್ ಉಪಾಧ್ಯಕ್ಷೆಯಾಗಿ ಪೂರ್ಣಾವಧಿ ಕಾರ್ಯನಿರ್ವಹಿಸಿದ್ದಾರೆ. ಕೊನೆಯ ವರ್ಷ ಬಿಜೆಪಿ ಜಿಲ್ಲಾ ಪಂಚಾಯಿತಿ ಮೇಲೆ ಹಿಡಿತ ಸಾಧಿಸಿತ್ತು.

ವೈಜ್ಞಾನಿಕವಾಗಿ ಕ್ಷೇತ್ರಗಳ ರಚನೆ ಕಾರ್ಯ ಪೂರ್ಣಗೊಳಿಸಲಾಗುವುದು
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಕ್ಷೇತ್ರಗಳ ಪುನರ್‌ವಿಂಗಡಣಾ ಕಾರ್ಯ ನಡೆಯಲಿದೆ. ಚುನಾವಣಾ ಆಯೋಗ, ಸರ್ಕಾರದ ನಿರ್ದೇಶನದಂತೆ ವೈಜ್ಞಾನಿಕವಾಗಿ ಕ್ಷೇತ್ರಗಳ ರಚನೆ ಕಾರ್ಯ ಪೂರ್ಣಗೊಳಿಸಲಾಗುವುದು.
-ಎಂ.ಎಲ್‌. ವೈಶಾಲಿ, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT