ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹ್ಯಾದ್ರಿ ಕಾಲೇಜು ಅಭಿವೃದ್ಧಿಗೆ ₹1 ಕೋಟಿ

ಸಹ್ಯಾದ್ರಿ ಕಾಲೇಜು ವಿಸ್ತರಣಾ ಕಟ್ಟಡ ಸಮಾರಂಭದಲ್ಲಿ ಮುಖ್ಯಮಂತ್ರಿ ಘೋಷಣೆ
Last Updated 29 ನವೆಂಬರ್ 2020, 15:01 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿರುವ ಸಹ್ಯಾದ್ರಿ ಕಾಲೇಜಿನ ಅಭಿವೃದ್ಧಿಗೆ ಶೀಘ್ರವೇ ₹ 1 ಕೋಟಿ ಅನುದಾನವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದರು.

ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಸ್ತರಣಾ ಕಟ್ಟಡ, ಕಲಾ ಕಾಲೇಜಿನ ಪ್ರವೇಶದ್ವಾರ, ವಿದ್ಯಾರ್ಥಿ ನಿಲಯದ ವಿಸ್ತರಣಾ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೈಸೂರಿನ ಜಯಚಾಮರಾಜ ಒಡೆಯರಿಂದ ಸ್ಥಾಪಿಸಲ್ಪಟ್ಟ ಸಹ್ಯಾದ್ರಿ ಕಾಲೇಜು 80 ವರ್ಷಗಳ ಇತಿಹಾಸ ಹೊಂದಿದೆ. ಈ ಕಾಲೇಜಿನಲ್ಲಿ ಕಲಿತ ಪ್ರೊ.ಸಿ.ಎನ್.ಆರ್. ರಾವ್, ಜಸ್ಟೀಸ್ ರಾಮಾ ಜೋಯಿಸ್, ಶಾಂತವೇರಿ ಗೋಪಾಲಗೌಡ, ಪೂರ್ಣಚಂದ್ರ ತೇಜಸ್ವಿ, ಕೆ.ಎಸ್‌. ನಿಸಾರ್ ಅಹಮ್ಮದ್, ಬಿ.ಕೆ. ಸುಮಿತ್ರ ಸೇರಿ ಹಲವರು ದೇಶಕ್ಕೆ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಇಂತಹ ಇತಿಹಾಸ ಹೊಂದಿದ ಕಾಲೇಜಿನ ಹೊರಾಂಗಣ ಕ್ರೀಡಾಂಗಣ, ಪ್ರಯೋಗಾಲಯ, ಗ್ರಂಥಾಲಯ ಸೇರಿ ಹಲವು ಉನ್ನತೀಕರಣ ಕಾಮಗಾರಿಗಳಿಗೆ ಸದ್ಯಕ್ಕೆ ₹ 1 ಕೋಟಿ ಬಿಡುಗಡೆ ಮಾಡಲಿದ್ದು, ಉಳಿದ ಹಣವನ್ನು ಬಜೆಟ್ ನೋಡಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ಕೊರೊನಾ ಸಂಕಷ್ಟದಲ್ಲೂ ಅಭಿವೃದ್ಧಿ ಕಾಮಗಾರಿ:

ಕೊರೊನಾದಂತಹ ಸಂಕಷ್ಟ ಸಂದರ್ಭದಲ್ಲೂ ಅಭಿವೃದ್ಧಿ ಕಾಮಗಾರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಶಿವಮೊಗ್ಗದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸೇತುವೆ ನಿರ್ಮಾಣ, ವಿಮಾನ ನಿಲ್ದಾಣ, ರಸ್ತೆ ಕಾಮಗಾರಿ, ನೀರಾವರಿ ಯೋಜನೆಗಳು ಭರದಿಂದ ಸಾಗುತ್ತಿದೆ. ನಗರದ ವಾಹನ ದಟ್ಟಣೆ ತಗ್ಗಿಸಲು ₹ 450 ಕೋಟಿ ವೆಚ್ಚದಲ್ಲಿ ಹೊರವರ್ತುಲ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.

ಸೋಗಾನೆಯ ವಿಮಾನ ನಿಲ್ದಾಣ 2022ರಲ್ಲಿ ಪೂರ್ಣಗೊಳ್ಳಲಿದ್ದು, ವಿಮಾನ ಹಾರಾಟ ಪ್ರಾರಂಭವಾಗಲಿದೆ. 3,200 ಮೀಟರ್ ಉದ್ದದ ರನ್ ವೇ ಹೆಚ್ಚಿಸಲಾಗಿದೆ. ಹೊಳೆ ಹನಸವಾಡಿಯಲ್ಲಿ ತುಂಗಾ ಏತ ನೀರಾವರಿ ಯೋಜನೆಗೆ ಉದ್ದೇಶಿಸಲಾಗಿದ್ದು, 20 ಕೆರೆಗಳು ತುಂಬಿಸುವ ಯೋಜನೆ ಇದಾಗಿದೆ ಎಂದು ಮಾಹಿತಿ ನೀಡಿದರು.

ವಿಮಾನ ನಿಲ್ದಾಣ ಎರಡನೇ ಹಂತದ ಕಾಮಗಾರಿಗೆ ಅನುಮೋದನೆ ನೀಡಲಾಗಿದ್ದು, ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಭರದಿಂದ ಸಾಗುತ್ತಿದ್ದು, ಶೀಘ್ರ ಕಾಮಗಾರಿ ಮುಗಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಮಾತನಾಡಿದರು. ಶಾಸಕರಾದ ಆರಗ ಜ್ಞಾನೇಂದ್ರ, ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್, ಎಸ್.ಎಲ್. ಬೋಜೇಗೌಡ, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ, ಕುಲಸಚಿವ ಎಸ್.ಎಸ್. ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT