ಶನಿವಾರ, ಅಕ್ಟೋಬರ್ 16, 2021
29 °C

ಶಿವಮೊಗ್ಗ: ಸಕ್ಕರೆ ಕಾರ್ಖಾನೆ ಮಾರಾಟಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ತುಂಗಭದ್ರಾ ಸಕ್ಕರೆ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಪರಭಾರೆ ಮಾಡಬಾರದು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ ಒತ್ತಾಯಿಸಿದರು.

‘ತುಂಗಭದ್ರಾ ಸಕ್ಕರೆ ಕಾರ್ಖಾನೆ ಜಿಲ್ಲೆಯ ಜೀವನಾಡಿಯಾಗಿತ್ತು. ಕಾರ್ಖಾನೆ ನಿಂತುಹೋದ ಮೇಲೆ ಸರ್ಕಾರವೇ ಸ್ವಾಧೀನಪಡಿಸಿಕೊಳ್ಳಲು ರಾಷ್ಟ್ರಪತಿಯಿಂದ ಆದೇಶವಾಗಿತ್ತು. ಆದರೆ, ಮದ್ರಾಸ್ ಹೈಕೋರ್ಟ್‌ಗೆ ಇದನ್ನು ನಡೆಸಲು ಸಾಧ್ಯವಿಲ್ಲ ಎಂದು ಸರ್ಕಾರ ಪತ್ರ ಬರೆದು ಕೈತೊಳೆದುಕೊಂಡಿತ್ತು. ಕಾರ್ಮಿಕರಿಗೆ ಮತ್ತು ರೈತರಿಗೆ ಬರಬೇಕಾದ ಹಣವೇ ಇನ್ನೂ ಬಂದಿಲ್ಲ. ಈಗ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಮಜ್ದೂರ್ ಸಂಘದ ಕಾರ್ಮಿಕ ಮುಖಂಡ ರಾಘವನ್ ಮಾತನಾಡಿ, ‘ಮದ್ರಾಸ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಈ ಕಾರ್ಖಾನೆಯನ್ನು ಮಾರಾಟ ಮಾಡಲಾಗುತ್ತಿದೆ. ತುಂಗಭದ್ರಾ ಶುಗರ್ ವರ್ಕ್‌ನ ಎಂಡಿಯಾಗಿದ್ದ ಮಣಿವೇಲನ್ ಅವರು ಕಾನೂನುಬಾಹಿರವಾಗಿ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಇದನ್ನು ಮಾರಾಟ ಮಾಡುವ ಹಕ್ಕು ಅವರಿಗಿಲ್ಲ’ ಎಂದು ಅವರು ಹೇಳಿದರು.

ತುಂಗಭದ್ರಾ ಶುಗರ್ ಕಂಪನಿಯಾಗಲಿ, ದೇವಿ ಶುಗರ್ ಕಂಪನಿ ಎಂಬ ಹೆಸರಿನವರಾಗಲಿ ಯಾರೂ ಆಸ್ತಿಯನ್ನು ಯಾರಿಗೂ ಪರಭಾರೆ ಮಾಡದಂತೆ ಉಪ ನೋಂದಣಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಒಂದು ಪಕ್ಷ ಆಸ್ತಿ ಪರಭಾರೆ ಮಾಡಿದ್ದರೆ ಅದರ ನೋಂದಣಿಯನ್ನು ರದ್ದು ಮಾಡಬೇಕು ಎಂದು ಅಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಪ್ರಮುಖರಾದ ಡಾ. ಬಿ.ಎಂ. ಚಿಕ್ಕಸ್ವಾಮಿ, ಇ.ಬಿ. ಜಗದೀಶ್, ಡಿ.ಎಸ್. ಜಯಣ್ಣ, ಕಾರ್ಮಿಕ ಮುಖಂಡರಾದ ಕೆ. ಚಂದ್ರು, ದೇವೇಂದ್ರಪ್ಪ, ನೀತಿಗೆರೆ ಮಹೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.