ಮಂಗಳವಾರ, ಜನವರಿ 25, 2022
28 °C

ಸಾವಯವ ಕೃಷಿ ಜೊತೆಗೆ ಹೈನುಗಾರಿಕೆ: ಹೊಸಕೊಪ್ಪದ ರೈತ ಎಚ್.ಎನ್. ರತ್ನಾಕರ್ ಸಾಧನೆ

ಹೊಸಕೊಪ್ಪ ಶಿವು Updated:

ಅಕ್ಷರ ಗಾತ್ರ : | |

Prajavani

ಕೋಣಂದೂರು: ತಮಗಿರುವ 6 ಎಕರೆ ಕೃಷಿ ಜಮೀನಿನಲ್ಲಿ ಹೊಸ ಹೊಸ ಪ್ರಯೋಗಗಳೊಂದಿಗೆ ಹೈನುಗಾರಿಕೆ ಯನ್ನು ಉದ್ಯಮ ವನ್ನಾಗಿಸಿಕೊಂಡಿದ್ದಾರೆ ಹಾದಿಗಲ್ಲು ಸಮೀಪದ ಹೊಸಕೊಪ್ಪದ ಎಚ್.ಎನ್.ರತ್ನಾಕರ್.

ಹೊಸಕೊಪ್ಪದ ರತ್ನಾಕರ್ ಮತ್ತು ಸುಧಾಕರ್ ಅವರದು ಅವಿಭಕ್ತ ಕುಟುಂಬ. ಸಹೋದರಿಬ್ಬರೂ ಸೇರಿ ತಮಗಿರುವ 6 ಎಕರೆ ಜಮೀನಿನಲ್ಲಿ ಭತ್ತ, ಅಡಿಕೆ, ತೆಂಗು, ಬಾಳೆ, ಕಾಳು ಮೆಣಸನ್ನು ಬೆಳೆಯುತ್ತಿದ್ದಾರೆ. ನೀರಿಗಾಗಿ 2 ಕೊಳವೆ ಬಾವಿಗಳನ್ನು ನಿರ್ಮಿಸಿದ್ದಾರೆ. 5 ಎಕರೆ ಜಮೀನಿನಲ್ಲಿ ನೀಲಗಿರಿಯನ್ನು ಸಹ ಬೆಳೆದಿದ್ದಾರೆ. ಆದರೆ ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿ ಹೊಸತನವನ್ನು ಸೃಷ್ಟಿಸಿ ಮಾದರಿ ರೈತರೆಂದು ಜನಪ್ರಿಯರಾಗಿದ್ದಾರೆ.

ಸುಸಜ್ಜಿತ ಕಟ್ಟಡದಲ್ಲಿ ನಿರ್ಮಿಸಿರುವ ಕೊಟ್ಟಿಗೆಯಲ್ಲಿ ಎಚ್.ಎಫ್. ತಳಿಯ 14 ಹಸುಗಳನ್ನು ಸಾಕಿದ್ದು, ಅವುಗಳಿಗೆ ಸುಸಜ್ಜಿತ ನೆಲ ಹಾಸು, ಸೊಳ್ಳೆ ಪರದೆ, ವ್ಯವಸ್ಥಿತ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ. ಹಸುಗಳ ಪೋಷಣೆಗಾಗಿ ನೇಪಿಯರ್ ಹುಲ್ಲನ್ನು ಬೆಳೆಸಿದ್ದಾರೆ. ಈ ಹಸುಗಳಿಂದ ದಿನವೊಂದಕ್ಕೆ 80 ಲೀಟರ್ ಹಾಲು ಸಿಗುತ್ತದೆ. ಹತ್ತಿರದ ಹಾಲಿನ ಡೇರಿಗೆ ಹಾಗೂ ಸ್ಥಳೀಯವಾಗಿ ಹಾಲನ್ನು ಮಾರುವ ಮೂಲಕ ಒಂದಿಷ್ಟುಸಂಪಾದಿಸುವ ಮೂಲಕ ನೆಮ್ಮದಿಯ ಜೀವನ ರೂಪಿಸಿಕೊಂಡಿದ್ದಾರೆ.

ಹಾಲು ಕರೆಯಲು ₹ 75 ಸಾವಿರ ಮೌಲ್ಯದ ಒಂದು ಯಂತ್ರವನ್ನು ಖರೀದಿಸಿದ್ದಾರೆ. ಇದರಿಂದ ಏಕಕಾಲದಲ್ಲಿ 2 ಹಸುಗಳ ಹಾಲು ಕರೆಯಬಹುದಾಗಿದೆ. ವಿದ್ಯುತ್ ಇಲ್ಲದಿದ್ದಾಗ ಜನರೇಟರ್ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ. ಹಸುಗಳಿಂದ ಬರುವ ಗಂಜಲವನ್ನು ಒಂದು ಕೃತಕ ಬಾವಿಯಲ್ಲಿ ಸಂಗ್ರಹಿಸಿ, ಪೈಪ್‌ನ ಮೂಲಕ ಅಡಿಕೆ ತೋಟಕ್ಕೆ ಹಾಯಿಸುವ ಮೂಲಕ ವಿಶಿಷ್ಟ ರೀತಿಯ ಕೃಷಿ ಪ್ರಯೋಗವನ್ನು ನಡೆಸುತ್ತಿದ್ದಾರೆ.

ಸಂಪೂರ್ಣ ಸಾವಯವ ಕೃಷಿಯ ಮೂಲಕ ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ. ಹೈನುಗಾರಿಕೆಯ ಜೊತೆಗೆ ಕೋಳಿ ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ. 15ರಿಂದ 20 ಪೈಟ್ರಾ ಮತ್ತು ಗಿರಿರಾಜ ಜಾತಿಯ ಕೋಳಿಗಳನ್ನು ಸಾಕಿದ್ದಾರೆ. ಎರಡು ಮೊಲಗಳನ್ನೂ ಪ್ರೀತಿಯಿಂದ ಸಲಹುತ್ತಿದ್ದಾರೆ. ಜೊತೆಗೆ ಡ್ಯಾಶ್ ಎಂಡ್ ಹಾಗೂ ಡಾಬರ್‌ಮನ್ ಜಾತಿಯ ನಾಯಿಗಳನ್ನು ಸಾಕುತ್ತಿದ್ದಾರೆ.

ಎಚ್.ಎನ್.ರತ್ನಾಕರ್ ಅವರಿಗೆ ಈ ಬಾರಿಯ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಲಭಿಸಿದೆ.

‘ಕುಟುಂಬದ ಸದಸ್ಯರ ಅನ್ಯೋನ್ಯತೆ, ಅವಿಭಕ್ತ ಕುಟುಂಬದ ಸತತ ಪರಿಶ್ರಮ ನಾವು ಇತರ ರೈತರಿಗಿಂತ ವಿಭಿನ್ನವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ’ ಎನ್ನುತ್ತಾರೆ ಎಚ್.ಎನ್.ರತ್ನಾಕರ್.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು