ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜೆ ಕಾಲೇಜು ಆರಂಭಕ್ಕೆ ಅನುಮತಿ

ಪ್ರಥಮ ದರ್ಜೆ ಕಾಲೇಜು: ಕೆಲಸದ ಜತೆಗೆ ಕಲಿಕೆ ಮಾಡಬಯಸುವವರಿಗೆ ಸುವರ್ಣ ಅವಕಾಶ
Last Updated 4 ಸೆಪ್ಟೆಂಬರ್ 2021, 3:53 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಬಾಪೂಜಿ ನಗರದಲ್ಲಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಂಜೆ ಕಾಲೇಜು ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಕೆಲಸದ ಜತೆಗೆ ವ್ಯಾಸಂಗವನ್ನೂ ಮಾಡಬೇಕು ಎಂದುಕೊಂಡಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ ದೊರಕಿದಂತಾಗಿದೆ.

ಸರ್ಕಾರಿ ಸಂಜೆ ಪ್ರಥಮದರ್ಜೆ ಕಾಲೇಜುಗಳಲ್ಲಿ ಬಿಸಿಎ ಮತ್ತು ಬಿಕಾಂ ಕೋರ್ಸ್‌ ಮಾತ್ರ ಇರುತ್ತವೆ. ಈ ಎರಡು ಕೋರ್ಸ್‌ಗಳನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ದೊರೆಯುತ್ತಿರುವುದರಿಂದ ಶಿಕ್ಷಣ ಇಲಾಖೆಯು ಆರಂಭಿಕವಾಗಿ ಈ ಕೋರ್ಸ್‌ಗೆ ಅವಕಾಶ ಕಲ್ಪಿಸಿದೆ.

‘ರಾಷ್ಟ್ರೀಯ ಶಿಕ್ಷಣ ನೀತಿಯಂತೆ 4 ವರ್ಷಗಳ ಹಾನರ್ಸ್‌ ಪದವಿಯನ್ನು ಆರಂಭಿಸಲಾಗುತ್ತಿದೆ. ಸಂಜೆ ಕಾಲೇಜಿಗೂ ಇದು ಅನ್ವಯವಾಗಲಿದೆ. ಹೀಗಾಗಿ ಮೊದಲ ವರ್ಷ ಪೂರೈಸಿದ ವಿದ್ಯಾರ್ಥಿಗೆ ಸರ್ಟಿಫಿಕೇಟ್‌, ಎರಡನೇ ವರ್ಷಕ್ಕೆ ಡಿಪ್ಲೊಮಾ, ಮೂರು ವರ್ಷ ಪೂರೈಸಿದರೆ ಪದವಿ ಹಾಗೂ 4 ವರ್ಷ ಪೂರೈಸಿದರೆ ಹಾನರ್ಸ್‌ ಪದವಿ ನೀಡಲಾಗುತ್ತದೆ. ಹಾನರ್ಸ್‌ ಪಡೆದವರು ನೇರವಾಗಿ ಪಿಎಚ್‌ಡಿ ಅಧ್ಯಯನಕ್ಕೆ ಪ್ರವೇಶ ಪಡೆಯಬಹುದು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಡಿ.ಎಸ್.ಅರುಣ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಾಪೂಜಿ ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಲಾಗುತ್ತಿದೆ. ಸ್ಮಾರ್ಟ್‌ ಕ್ಲಾಸ್ ಕೊಠಡಿಗಳಿವೆ. ಗ್ರಂಥಾಲಯ, ಪ್ರಯೋಗಾಲಯ ಇವೆ. ಅನುಭವಿ ಉಪನ್ಯಾಸಕರ ದೊಡ್ಡ ಬಳಗವೇ ಇದೆ. ಸರ್ಕಾರಿ ಕಾಲೇಜು ಆದರೂ, ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಿಂದ ಪಾಳಿ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಹೆಚ್ಚಿದ ವಿದ್ಯಾರ್ಥಿಗಳ ಸಂಖ್ಯೆ: ‘2006ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭವಾದಾಗ ಕೇವಲ 120 ವಿದ್ಯಾರ್ಥಿಗಳು ಮಾತ್ರ ವ್ಯಾಸಂಗ ಮಾಡುತ್ತಿದ್ದರು. ಈಗ 2,617 ವಿದ್ಯಾರ್ಥಿಗಳಿದ್ದಾರೆ. ನಿರೀಕ್ಷೆ ಮೀರಿ ವಿದ್ಯಾರ್ಥಿಗಳು ಕಾಲೇಜಿಗೆ ದಾಖಲಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಕಾಲೇಜಿನಲ್ಲಿ ನಮಗೆ ಸೀಟು ಕೊಡಿ ಎಂದು ಶಿಫಾರಸು ಮಾಡುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ’ ಎಂದು ಹೇಳಿದರು.

ಸೆ. 6ರಿಂದ ಪ್ರಸಕ್ತ ಸಾಲಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಲಿದೆ. 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರಿಗೂ ಪ್ರವೇಶ ನೀಡುವುದು ಕಷ್ಟವಾಗಬಹುದು. ಇದಕ್ಕಾಗಿ ಅಂಕಗಳು ಮತ್ತು ಮೀಸಲಾತಿ ಆಧಾರದಲ್ಲಿ ಸೀಟು ನೀಡುವುದು ಅನಿವಾರ್ಯವಾಗಬಹುದು ಎಂದು ಡಿ.ಎಸ್‌.ಅರುಣ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸುರೇಖಾ ಮುರಳೀಧರ್, ಅನಂತಶಾಸ್ತ್ರಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಚನ್ನೇಶ್, ವಾಣಿಜ್ಯ ವಿಭಾಗದ ಉಪನ್ಯಾಸಕ ಎಸ್.ಎಚ್.ಪ್ರಸನ್ನ, ಇಂಗ್ಲಿಷ್ ಉಪನ್ಯಾಸಕ ವಿಜಯಕುಮಾರ್, ಗ್ರಂಥಪಾಲಕ ಶಿವಾನಂದಪ್ಪ, ಮ್ಯಾನೇಜರ್ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT