ಮಂಗಳವಾರ, ಮಾರ್ಚ್ 28, 2023
25 °C
ಮೆಸ್ಕಾಂನಿಂದ ಅವೈಜ್ಞಾನಿಕ ಅಲ್ಯೂಮಿನಿಯಂ, ಕಾಪರ್ ವೈರ್ ಜೋಡಣೆ

ಶಾರ್ಟ್‌ ಸರ್ಕಿಟ್‌ ಭಯದಲ್ಲಿ ವಿದ್ಯುತ್‌ ಬಳಕೆದಾರರು

ನಿರಂಜನ ವಿ. Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ಮುಂಗಾರು ಆರಂಭವಾಗುತ್ತಿದ್ದಂತೆಯೇ ತಾಲ್ಲೂಕಿನಲ್ಲಿ ವಿದ್ಯುತ್‌ ಪೂರೈಕೆಯಲ್ಲಿನ ಸಮಸ್ಯೆ ಹೆಚ್ಚುತ್ತಿದೆ. ಮೊದಲ ಮಳೆಗೇ ಸಣ್ಣಪುಟ್ಟ ತಾಂತ್ರಿಕ ದೋಷಗಳಿದ್ದ ಪರಿವರ್ತಕ ಸೇರಿ ಅನೇಕ ಉಪಕರಣಗಳು ಹಾಳಾಗಿವೆ. ಇದರ ಜೊತೆಗೆ ಗ್ರಾಹಕರ ಮನೆಗಳಿಗೆ ತರಾತುರಿಯಲ್ಲಿ ಅಳವಡಿಸಿರುವ ಮೀಟರ್‌ನಲ್ಲಿನ ಲೋಪದಿಂದ ಗ್ರಾಹಕರು ತೊಂದರೆಗೆ ಸಿಲುಕುವಂತಾಗಿದೆ.

ದೀನ್‌ ದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (ಡಿಡಿಯುಜಿವೈ) ಅಡಿಯಲ್ಲಿ ಉಪಪ್ರಸರಣ, ವಿತರಣಾ ಮಾರ್ಗ ಬಲಪಡಿಸುವಿಕೆ, ಫೀಡರ್ ಸೆಗ್ರಿಗೇಷನ್, ಮೀಟರಿಂಗ್, ಗ್ರಾಮೀಣ ವಿದ್ಯುದ್ದೀಕರಣ, ಸಂಸದ್ ಆದರ್ಶ ಗ್ರಾಮ ಯೋಜನೆ ಮುಂತಾದ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಅವಸರದ ಕಾಮಗಾರಿ ಹಲವು ಸಮಸ್ಯೆಗೆ ಕಾರಣವಾಗಿದೆ.

ವಿದ್ಯುತ್‌ ಬಳಕೆ ಮಾಪನಕ್ಕೆ ತೊಂದರೆಯಾಗುತ್ತಿದ್ದ ಮೀಟರ್‌ಗಳನ್ನು ಈ ಯೋಜನೆಯಡಿ ಕಣ್ಣಿಗೆ ಕಾಣಿಸುವ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಮರದ ಹಲಗೆಯ ಮೇಲಿದ್ದ ಮೀಟರ್‌ಗಳನ್ನು ಕಬ್ಬಿಣದ ಬಾಕ್ಸ್‌ಗಳಿಗೆ ಸೇರಿಸಲಾಗಿದೆ. ಮೆಸ್ಕಾಂನ ಕೆಲವು ಸಿಬ್ಬಂದಿ ಮಾಡಿದ ಯಡವಟ್ಟುಗಳಿಂದ ವಿದ್ಯುತ್‌ ಅವಘಡ, ಶಾರ್ಟ್‌ ಸರ್ಕಿಟ್‌ ಭಯ ಗ್ರಾಹಕರನ್ನು ಆವರಿಸಿದೆ.

ಅವಘಡದ ಭಯ: ‘ಮೀಟರ್‌ ಅಳವಡಿಕೆ ಸಂದರ್ಭ ಫೀಡರ್‌ ಮೂಲಕ ಬಂದಿರುವ ವೈರ್‌ ಮತ್ತು ಮನೆ ಬಳಕೆಯ ವೈರ್‌ಗಳನ್ನು ನೇರವಾಗಿ ಜೋಡಣೆ ಮಾಡಲಾಗಿದೆ. ಅಲ್ಯೂಮಿನಿಯಂ, ಕಾಪರ್‌ ವೈರ್‌ಗಳನ್ನು ಅವೈಜ್ಞಾನಿಕವಾಗಿ ಜೋಡಿಸಿದ್ದು ಮಳೆಗಾಲದ ಶೀತ ವಾತಾವರಣಕ್ಕೆ ಸಡಿಲ ಸಂಪರ್ಕ (ಲೂಸ್‌ ಕಾಂಟ್ಯಾಕ್ಟ್‌) ಆಗುತ್ತಿದೆ. ಈ ಎರಡು ಬಗೆಯ ವೈರ್‌ ಗುಣ ಮತ್ತು ಸ್ವಭಾವದಿಂದ ಹೊಂದಿಕೆಯಾಗುವುದಿಲ್ಲ. ಇದರಿಂದ ಕಬ್ಬಿಣದ ಬಾಕ್ಸ್‌ಗಳಿಗೂ ವಿದ್ಯುತ್‌ ತಗುಲುವಂತಿದ್ದು, ಮೀಟರ್‌ಗೆ ಬೆಂಕಿ ತಗುಲಿ ಹಾನಿಗೀಡಾಗುತ್ತಿದೆ. ಹೆಚ್ಚಿನ ವೋಲ್ಟೇಜ್‌ ಬಳಕೆಯಾದ ವೇಳೆ ಮನೆಯಲ್ಲಿರುವ ವಿದ್ಯುತ್‌ ಚಾಲಿತ ಯಂತ್ರಗಳು ಹಾಳಾಗುತ್ತಿವೆ’ ಎಂದು ಮಿಥುನ್‌ ಕುರುವಳ್ಳಿ ದೂರುತ್ತಾರೆ.

‘ಆಧುನಿಕ ಮಾದರಿಯ ವೈಜ್ಞಾನಿಕ ಉಪಕರಣಗಳು ಸರಬರಾಜು ಆಗುತ್ತಿಲ್ಲ. ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಿದ್ದು, ಇರುವ ವ್ಯವಸ್ಥೆಯಲ್ಲೇ ಕೆಲಸ ಮಾಡಿ ಮುಗಿಸುವ ಅನಿವಾರ್ಯತೆ ಇದೆ. ಮೇಲಧಿಕಾರಿಗಳ ವಿಳಂಬ ಧೋರಣೆ ಪರಿಣಾಮ ಉಪಕರಣ ಪೂರೈಕೆ ಸರಿಯಾಗಿ ನಡೆಯುತ್ತಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ತಿಳಿಸಿದರು.

* ಅಲ್ಯೂಮಿನಿಯಂ, ಕಾಪರ್‌ ವೈಯರ್‌ ನೇರ ಜೋಡಣೆ ತಪ್ಪು. ಲೋಡ್‌ ನೀಡುವಾಗ ಜಾಗ್ರತೆ ವಹಿಸಬೇಕು. ಈ ಬಗ್ಗೆ ದೂರು ಬಂದಿಲ್ಲ. ಸಿಬ್ಬಂದಿಗೆ ಜೋಡಣೆ ಸಂಬಂಧ ಸೂಚನೆ ನೀಡಲಾಗುವುದು.

-ಪ್ರಶಾಂತ್‌,  ಮೆಸ್ಕಾಂ ಎಇಇ, ತೀರ್ಥಹಳ್ಳಿ

* ತಾಂತ್ರಿಕ ಕಾರಣದಿಂದ ಮೀಟರ್‌ಗಳು ಹೆಚ್ಚು ಕಾಲ ಬಾಳಿಕೆ ಬರುತ್ತಿಲ್ಲ. ಈ ಕುರಿತು ಮೆಸ್ಕಾಂಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಬಳಕೆದಾರರಿಗೆ ಲೋಪದ ಮಾಹಿತಿ ಇಲ್ಲದಿರುವುದರಿಂದ ಅನಾಹುತ ಹೆಚ್ಚುತ್ತಿದೆ.

-ಮಿಥುನ್‌, ಕುರುವಳ್ಳಿ

* ವಿದ್ಯುತ್‌ ವ್ಯತ್ಯಯದಿಂದ ಟಿವಿ, ಮಿಕ್ಸಿ, ಐರನ್‌ ಬಾಕ್ಸ್‌, ಫ್ರಿಡ್ಜ್‌, ವಾಷಿಂಗ್‌ ಮಷಿನ್‌ ಮುಂತಾದವು ಹಾಳಾಗುತ್ತಿವೆ. ಹೆಚ್ಚಿನ ಅವಘಡ ಸಂಭವಿಸುವ ಮುನ್ನ ಮೆಸ್ಕಾಂ ಇತ್ತ ಗಮನಹರಿಸಿ ಸರಿಪಡಿಸಬೇಕು.

-ನಾಗರಾಜ್, ಸೌಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು