ಗುರುವಾರ , ಸೆಪ್ಟೆಂಬರ್ 29, 2022
28 °C
ಪತ್ರಿಕಾ ಸಂವಾದದಲ್ಲಿ ದೇಸಿ ಚಿಂತಕ ಪ್ರಸನ್ನ ಒತ್ತಾಯ

ಸುಧಾರಣೆ ಕಾರ್ಯಕ್ರಮ ಗ್ರಾಮೀಣಕ್ಕೂ ವಿಸ್ತರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಆರ್ಥಿಕ ಸುಧಾರಣೆಯ ಕಾರ್ಯಕ್ರಮಗಳನ್ನು ಈಗ ಕೇವಲ ನಗರ ಪ್ರದೇಶದಲ್ಲಿರುವ ಉದ್ಯಮಗಳಿಗೆ ಮಾತ್ರ ತಲುಪುತ್ತಿದೆ. ಅದು ಗ್ರಾಮೀಣ ಕೈಗಾರಿಕೆಗಳಿಗೂ ತಲುಪುವಂತಾದರೆ ಮಾತ್ರ ನೇಕಾರಿಕೆಯಂತಹ ಉದ್ಯೋಗ ಉಳಿಯಲು ಸಾಧ್ಯ ಎಂದು ಚರಕ ಸಂಸ್ಥೆಯ ದೇಸಿ ಚಿಂತಕ ಪ್ರಸನ್ನ ಹೇಳಿದರು.

ಸಮೀಪದ ಹೊನ್ನೇಸರ ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ಪ್ರೆಸ್‌ಟ್ರಸ್ಟ್ ಆಫ್ ಸಾಗರ ಹಾಗೂ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಏರ್ಪಡಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ‘ಪ್ರಸ್ತುತ ವ್ಯವಸ್ಥೆಯ ವೈಪರೀತ್ಯಗಳು’ ಎಂಬ ಕುರಿತು ಅವರು ಮಾತನಾಡಿದರು.

‘ಗ್ರಾಮೀಣ ಕೈಗಾರಿಕೆಗಳು ಉದ್ಯೋಗ ನೀಡುವ ಜತೆಗೆ ಪರಿಸರ ಸ್ನೇಹಿ ಕೂಡ ಆಗಿದೆ. ಆದಾಗ್ಯೂ ಈ ಕೈಗಾರಿಕೆಗಳನ್ನು ‘ಸಾಯುತ್ತಿರುವ ಉದ್ಯಮ’ ಎಂದು ಅಧಿಕಾರಿಗಳು ಪರಿಗಣಿಸುತ್ತಿದ್ದಾರೆ. ನಮ್ಮ ಗ್ರಾಮೀಣ ಪರಂಪರೆಯ ಬಗ್ಗೆ ನಾವು ತೋರುತ್ತಿರುವ ಅಸಡ್ಡೆಯ ಸಂಕೇತ ಇದು’ ಎಂದು ಬೇಸರಿಸಿದರು.

‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪವಿತ್ರವಸ್ತ್ರ ಯೋಜನೆಗೆ ₹ 1.5 ಕೋಟಿ ಮಂಜೂರು ಮಾಡಿ ₹ 33 ಲಕ್ಷ ಹಣವನ್ನು ಮೊದಲ ಕಂತಿನಲ್ಲಿ ಬಿಡುಗಡೆ ಮಾಡಿದ್ದರು. ಆದರೆ ಆ ಹಣ ಪಡೆಯಲು ಅಧಿಕಾರಿಗಳು 3 ವರ್ಷ ಸತಾಯಿಸಿದ್ದಾರೆ. ಇಂತಹ ಸನ್ನಿವೇಶವನ್ನು ಸರ್ಕಾರ ಬದಲಿಸದೆ ಇದ್ದರೆ ಯಾವ ಗ್ರಾಮೀಣ ಸಂಸ್ಥೆಯೂ ಉಳಿಯಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ನೇಕಾರರಿಗೆ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ ಕೂಡ ಅಧಿಕಾರಿಗಳ ವಿಳಂಬ ಹಾಗೂ ದ್ವಿಮುಖ ಧೋರಣೆಯಿಂದ ನನೆಗುದಿಗೆ ಬಿದ್ದಿದೆ. ಅಧಿಕಾರಿಗಳ ಸೂಚನೆಯ ಮೇರೆಗೆ ಗೃಹ ನಿರ್ಮಾಣ ಸಹಕಾರ ಸಂಘ ಸ್ಥಾಪಿಸಿದ್ದರೂ ಅದರ ಉದ್ದೇಶ ಈಡೇರಿಲ್ಲ. ಫಲಾನುಭವಿಗಳಿಗೆ ನೇರವಾಗಿ ಹಣ ತಲುಪಿಸಿದ್ದರೂ ಚರಕ ಸಂಸ್ಥೆಯ ಮೇಲೆ ಹಣ ದುರುಪಯೋಗದ ಆರೋಪ ಬರುವಂತೆ ಅಧಿಕಾರಿಗಳು ವರ್ತಿಸಿದ್ದಾರೆ‘ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬ್ರಿಟಿಷರು ಇದ್ದಾಗ ಖಾದಿಗೆ ತೆರಿಗೆ ವಿಧಿಸಿರಲಿಲ್ಲ. ಈಗಿನ ಸರ್ಕಾರ ಖಾದಿಗೆ ಶೇ 5ರಷ್ಟು ಜಿಎಸ್‌ಟಿ ವಿಧಿಸಿದೆ. ನೂಲಿನ ಬೆಲೆ ಶೇ 70ರಷ್ಟು ಹೆಚ್ಚಾಗಿದೆ ಎಂದರು.

ವಾಸ್ತವದ ಜೊತೆಗೆ ನಮ್ಮ ಸಂಕೇತಗಳನ್ನು ಕೂಡ ಹಾಳುಮಾಡಲಾಗುತ್ತಿದೆ ಎಂಬುದಕ್ಕೆ ‘ಹರ್ ಘರ್ ತಿರಂಗಾ’ ಸಾಕ್ಷಿ. ವಿದೇಶಿ ವಸ್ತ್ರ ಬಳಕೆಯ ಬಾವುಟಕ್ಕೂ ಅವಕಾಶ ನೀಡಿರುವುದು ಅಪಾಯಕಾರಿ. ಸಂಸತ್ತಿನಲ್ಲಿ ಚರ್ಚೆ ಮಾಡದೆ ಧ್ವಜ ಸಂಹಿತೆಗೆ ತಿದ್ದುಪಡಿ ತಂದಿರುವುದು ಸರಿಯಲ್ಲ ಎಂದರು.

‘ನನ್ನ ಧರ್ಮ ಉಳಿಯಲು ಮತ್ತೊಂದು ಧರ್ಮ ಸಾಯಬೇಕು ಎಂಬ ನಿಲುವು ಅಪಾಯಕಾರಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಕರ್ತರಾದ ಎಚ್.ವಿ. ರಾಮಚಂದ್ರ, ಎ.ಡಿ.ರಾಮಚಂದ್ರ ಭಟ್, ಎಸ್.ವಿ. ಹಿತಕರ ಜೈನ್, ರಮೇಶ್ ಹೆಗಡೆ ಗುಂಡೂಮನೆ, ಗಣಪತಿ ಶಿರಳಗಿ ಇದ್ದರು.

ಹರ್ ಘರ್ ತಿರಂಗಾ: ಕ್ವಿಟ್ ಇಂಡಿಯಾ ಸಮಯದ ಘೋಷಣೆ

ಸ್ವಾತಂತ್ರ್ಯ ಮಹೋತ್ಸವ ಆಚರಣೆ ಸಂದರ್ಭದಲ್ಲಿ ನಡೆದ ಹರ್ ಘರ್ ತಿರಂಗಾ ಘೋಷಣೆ ಹೊಸದೇನೂ ಅಲ್ಲ. ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲೇ ಈ ಘೋಷಣೆ ಬಳಕೆಯಾಗಿತ್ತು ಎಂದು ಪ್ರಸನ್ನ ತಿಳಿಸಿದರು.

‘ಯುವ ಸಮುದಾಯ ನಮ್ಮ ನೆಲದ ಜಾನಪದ ಸಂಸ್ಕೃತಿಯ ಸೊಗಡಿನಿಂದ ಸಂಪೂರ್ಣವಾಗಿ ದೂರಾಗುತ್ತಿದ್ದಾರೆ. ಮೆರವಣಿಗೆಯಲ್ಲಿ ಡಿಜೆ ಮ್ಯೂಸಿಕ್ ಎದುರು ಕುಣಿಯುವುದೆ ನಮ್ಮ ಸಂಸ್ಕೃತಿ ಎಂದು ಬಿಂಬಿಸಲಾಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.