ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಸಿದ್ಧತೆ

ಪುರಸಭೆ: ಹೊಸ ಅಧ್ಯಕ್ಷರ ಆಯ್ಕೆಗೆ ಒಗ್ಗಟ್ಟಿನ ಪ್ರದರ್ಶನ, ಸ್ವಪಕ್ಷೀಯರ ಬಂಡಾಯ
Last Updated 5 ಸೆಪ್ಟೆಂಬರ್ 2021, 6:09 IST
ಅಕ್ಷರ ಗಾತ್ರ

ಸೊರಬ: ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್ ಅವರ ಪದಚ್ಯುತಿಗೆ ಆಗ್ರಹಿಸಿ 11 ಜನ ಸದಸ್ಯರು ಅವಿಶ್ವಾಸ ಗೊತ್ತುವಳಿಗೆ ನಿಗದಿಪಡಿಸಿದ ಕಾಲಾವಧಿ ಪೂರ್ಣಗೊಂಡಿದೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದ ಕಾರಣ ಸೆ.6ರಂದು ಉಪಾಧ್ಯಕ್ಷ ಮಧುರಾಯ್ ಶೇಟ್ ಅವರಿಗೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸದಸ್ಯರು ಮನವಿ ಮಾಡಲು ಸಿದ್ಧತೆ ನಡೆದಿದೆ.

ತಮ್ಮ ವಿರುದ್ಧ ಸ್ವಪಕ್ಷದವರೇ ಬಂಡಾಯವೆದ್ದು ಅಧ್ಯಕ್ಷ ಸ್ಥಾನಕ್ಕೆ ಕುತ್ತು ತಂದಿರುವುದರಿಂದ ಉಮೇಶ್ ಬಹುತೇಕ ಸಭೆಗೆ ಗೈರಾಗುವ ಸಾಧ್ಯತೆ ಇದೆ.

ಸರ್ವಾಧಿಕಾರಿ ಧೋರಣೆ ಹೊಂದಿರುವ ಅಧ್ಯಕ್ಷ ಎಂ.ಡಿ.ಉಮೇಶ್ ಅವರು ಯಾವುದೇ ಸದಸ್ಯರಿಗೆ ಬೆಲೆ ನೀಡುತ್ತಿಲ್ಲ. ಅನುದಾನ ನೀಡುವಲ್ಲಿ ತಾರತಮ್ಯ ಎಸಗುತ್ತಿದ್ದ ಕಾರಣ ಅವರ ಆಡಳಿತ ವೈಫಲ್ಯ ಖಂಡಿಸಿ 10 ಜನ ಸದಸ್ಯರು ಆಗಸ್ಟ್ 19ರಂದು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಬಿಜೆಪಿಗೆ ಪುರಸಭೆಯಲ್ಲಿ ಸ್ಪಷ್ಟ ಬಹುಮತವಿದ್ದರೂ ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ತಮ್ಮ ನಂಬುಗೆಯ ಮುಖಂಡ ಎಂ.ಡಿ.ಉಮೇಶ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವಲ್ಲಿ ಹೈರಾಣಾಗಿದ್ದರು. ಮೂಲ ಹಾಗೂ ವಲಸಿಗ ಬಿಜೆಪಿಯಲ್ಲಿನ ವೈಷಮ್ಯ, ವೈಮನಸ್ಸು ಅಧ್ಯಕ್ಷರ ಆಯ್ಕೆಗೆ ಕಗ್ಗಂಟಾಗಿತ್ತು. ಈ ಎಲ್ಲ ಬೆಳವಣಿಗೆಯನ್ನು ಮೆಟ್ಟಿನಿಂತು ಶಾಸಕರು ಎಂ.ಡಿ.ಉಮೇಶ್ ಅವರಿಗೆ ಅಧ್ಯಕ್ಷ ಸ್ಥಾನ ದೊರಕಿಸಿಕೊಡುವಲ್ಲಿ ಚಾಣಾಕ್ಷತೆ ಮೆರೆದಿದ್ದರು.

ಮೊದಲ ಬಾರಿಗೆ ಪುರಸಭೆ ಅಧಿಕಾರವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ಪೂರ್ಣಾವಧಿ ಅಧಿಕಾರವನ್ನು ನಡೆಸಲು ಆಡಳಿತ ಪಕ್ಷದ ಸದಸ್ಯರೇ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿರುವುದು ಶಾಸಕ ಕುಮಾರ್ ಬಂಗಾರಪ್ಪ ಅವರ ವಿರುದ್ಧದ ಭಿನ್ನಮತ ಸ್ಫೋಟಗೊಳ್ಳಲು ಕಾರಣವಾಗಿದೆ.

ಮೊದಲ ಅವಧಿಯಲ್ಲಿಯೇ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷೆಗಳಾಗಿದ್ದ ವೀರೇಶ್ ಮೇಸ್ತ್ರಿ, ಜಿಲ್ಲಾ ಸಮಿತಿ ಮುಂದೆ ಬೇಡಿಕೆ ಮುಂದಿಟ್ಟಿದ್ದರು. ಆದರೆ ಜಿಲ್ಲಾ ಮುಖಂಡರು ಶಿಸ್ತಿನ ಪಕ್ಷದಲ್ಲಿ ಬಂಡಾಯಕ್ಕೆ ಬೆಲೆ ನೀಡದ ಕಾರಣ ಉಮೇಶ್ ಅವರನ್ನುಬೆಂಬಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT