ಭಾನುವಾರ, ಮೇ 16, 2021
23 °C
ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ಸರಸ್ವತಿ ಚಿಮ್ಮಲಗಿ ಪ್ರಶ್ನೆ

ಶತಮಾನದ ಸಾಹಿತ್ಯ ಪರಿಷತ್ತಿಗೆ ಮಹಿಳೆ ಆಪಥ್ಯವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕದ ಮಹಿಳೆಯರು ಸಾಧನೆ ಮಾಡಿದ್ದಾರೆ. ಶತಮಾನ ಪೂರೈಸಿದ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದುವರೆಗೂ ಒಬ್ಬ ಮಹಿಳೆಯೂ ಅಧ್ಯಕ್ಷರಾಗಿ ಆಯ್ಕೆಯಾಗಿಲ್ಲ. ಈ ಬಾರಿ ತಮ್ಮನ್ನು ಬೆಂಬಲಿಸುವ ಮೂಲಕ ಇತಿಹಾಸಕ್ಕೆ ಸಾಕ್ಷಿಯಾಗಬೇಕು ಎಂದು ಸಾಹಿತಿ ಡಾ.ಸರಸ್ವತಿ ಚಿಮ್ಮಲಗಿ ಕೋರಿದರು.

ಮೇ 9ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ 20 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮಹಿಳಾ ಅಭ್ಯರ್ಥಿ ತಾವೊಬ್ಬರೆ ಇರುವುದು. ಕನ್ನಡ ಸಾಹಿತ್ಯ ಪರಿಷತ್ತಿಗೆ ಇದುವರೆಗೂ 25 ಜನರು ಅಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಮಹಿಳಾ ಸಾಹಿತಿಗಳು ಇದ್ದರೂ ಒಮ್ಮೆಯೂ ಅವಕಾಶ ದೊರೆತಿಲ್ಲ. ಸಾಹಿತ್ಯ ಪರಿಷತ್ತಿನ ಎಲ್ಲ ಮಹಿಳಾ ಸದಸ್ಯರು ಹಾಗೂ ಮಹಿಳೆಯನ್ನು ಗೌರವಿಸುವ, ಅವರ ಶ್ರೇಯಸ್ಸು ಬಯಸುವ ಎಲ್ಲ ಪುರುಷರೂ ಬೆಂಬಲಿಸಬೇಕು. ಗೆಲ್ಲಿಸಬೇಕು ಎಂದು ಅಭ್ಯರ್ಥಿ ಡಾ.ಸರಸ್ವತಿ ಚಿಮ್ಮಲಗಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಶತಮಾನದ ಪರಿಷತ್ತಿನಲ್ಲಿ ಮಹಿಳೆಗೆ ಅವಕಾಶ ದೊರಕದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ. ಕನ್ನಡ ಸಾಹಿತ್ಯ ಪರಿಷತ್ತು ಮಹಿಳೆಯರನ್ನು ದೂರ ಇಡುತ್ತಿದೆ ಎನ್ನುವ ಆರೋಪಕ್ಕೆ ಇದು ಸಾಕ್ಷಿ. ತಾವು ಮಹಿಳೆ ಎಂಬ ಕಾರಣಕ್ಕೆ ಸ್ಪರ್ಧಿಸುತ್ತಿಲ್ಲ. ಸಾಹಿತ್ಯ, ರಂಗಕ್ಷೇತ್ರದಲ್ಲೂ ಕೃಷಿ ಮಾಡಿರುವೆ. ಸಾಮಾಜಿಕ ಸೇವೆ, ಶೋಷಿತರ ಪರ ಹೋರಾಟ, ಮಾನವೀಯ ಕಾಳಜಿಗಳನ್ನು ಮೈಗೂಡಿಸಿಕೊಂಡಿರುವೆ. ಹಲವು ವರ್ಷಗಳಿಂದ ನಿರಂತರವಾಗಿ ಸಾಹಿತ್ಯ ಸೇವೆ ಮಾಡಿಕೊಂಡು ಬಂದಿರುವೆ. ಸಂಘಟಿಯಾಗಿ, ಲೇಖಕಿಯಾಗಿ, ಕಲಾವಿದೆಯಾಗಿಯೂ ಕೆಲಸ ಮಾಡಿದ್ದೇನೆ ಎಂದು ವಿವರ ನೀಡಿದರು.

ನಾಡು, ನುಡಿ, ನೆಲ, ಜಲ, ಗಡಿ ಸಮಸ್ಯೆಗಳತ್ತ ಗಮನ ಹರಿಸುವುದು. ಮಹಿಳೆಯರಿಗೆ ಆಧ್ಯತೆ ನೀಡುವುದು. ತಾಲ್ಲೂಕು ಅಧ್ಯಕ್ಷರ ಆಯ್ಕೆ ಸೇರಿದಂತೆ ಬೈಲಾದಲ್ಲಿ ಕೆಲವು ತಿದ್ದುಪಡಿ ಮಾಡುವುದು. ಸಾಕಷ್ಟು ಸಮ್ಮೇಳನಗಳನ್ನು ಆಯೋಜಿಸುವುದು. ಗಡಿನಾಡು ಸಮ್ಮೇಳನಗಳಿಗೆ ಹೆಚ್ಚಿನ ಆದ್ಯತೆ ನೀಡುವುದು. ರಾಜ್ಯಮಟ್ಟದಿಂದ ಹಳ್ಳಿಯವರೆಗೆ ಸಾಹಿತ್ಯ ಸರಸ್ವತಿಯ ಕಂಪು ಹರಡುವ ಗುರಿ ಇಟ್ಟುಕೊಂಡಿರುವೆ ಎಂದರು.

ನಿವೃತ್ತ ಪ್ರಾಧ್ಯಾಪಕಿ ಪ್ರೊ.ಕಿರಣ್ ದೇಸಾಯಿ ಮಾತನಾಡಿ, ಡಾ.ಸರಸ್ವತಿ ಅವರು ಪ್ರಜ್ಞಾವಂತೆ. ಶ್ರೇಷ್ಠ ಪ್ರಾಧ್ಯಾಪಕಿಯಾಗಿದ್ದರು. ಹೋರಾಟಗಾರ್ತಿ, ವಿಚಾರವಂತ ಮಹಿಳೆ, ಮಾನವತವಾದಿ, ರಂಗಭೂಮಿ ಕಲಾವಿದೆ. ಆದರ್ಶದ ವ್ಯಕ್ತಿತ್ವ ಹೊಂದಿದ್ದಾರೆ. ಅವರನ್ನು ಶಿವಮೊಗ್ಗದ ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸಂಘದ ಗೌರ ಕಾರ್ಯದರ್ಶಿ ಎಂ.ಆಶಾಲತಾ, ಅಶ್ವಿನಿ ತಳವಾರ್, ಶಾರದಾ ಮಾಳೇನವರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು