ಬುಧವಾರ, ಸೆಪ್ಟೆಂಬರ್ 29, 2021
20 °C
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್ ಸಲಹೆ

ಶಿವಮೊಗ್ಗ: ಶಾಲಾ ಹಂತದಲ್ಲೇ ವಿದ್ಯಾರ್ಥಿಗಳ ವ್ಯಸನಕ್ಕೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ತಂಬಾಕು ಉತ್ಪನ್ನಗಳ ಚಟಕ್ಕೆ ಯುವಕರು ಮಾರುಹೋಗುತ್ತಿದ್ದಾರೆ. ಶಾಲಾ ಹಂತದಿಂದಲೇ ಸೂಕ್ತ ಮಾರ್ಗದರ್ಶನ ಮಾಡದಿದ್ದರೆ ಭವಿಷ್ಯದಲ್ಲಿ ಸಂಕಷ್ಟ ಎದುರಿಸುವರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್ ಎಚ್ಚರಿಸಿದರು.

ನಗರದ ಐಎಂಎ ಸಭಾಂಗಣದಲ್ಲಿ ಮಂಗಳವಾರ ತಂಬಾಕು ಉತ್ಪನ್ನಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳು ಹಾಗೂ ಕೋಟ್ಪಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಕುರಿತು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಗೆ ಬುನಾದಿಯಾಗಬೇಕಾದ ಮಕ್ಕಳು ಮತ್ತು ಯುವಜನರು ತಂಬಾಕು ಉತ್ಪನ್ನಗಳ ಚಟ, ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಮಕ್ಕಳು ಚಟಗಳಿಗೆ ದಾಸರಾಗುವ ಆರಂಭದಲ್ಲೇ ಕಂಡು ಹಿಡಿದು, ಮೂಲದಲ್ಲೇ ಅವರನ್ನು ರಕ್ಷಿಸಬೇಕಿದೆ. ಶಾಲಾ ಹಂತದಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಚಟುವಟಿಕೆ, ನಡವಳಿಕೆಗಳ ಮೇಲೆ ನಿಗಾವಹಿಸಿದರೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಮಕ್ಕಳು ಸಾಮಾನ್ಯವಾಗಿ ಒಂದು ಹೊಸ ಅನುಭವ, ಸ್ವಾದ ಅನುಭವಿಸಲು ಹಾಗೂ ಇತರೆ ಕಾರಣಗಳಿಂದ ಸಿಗರೇಟು ಅಥವಾ ತಂಬಾಕು ಸೇವನೆಗೆ ತೊಡಗುತ್ತಾರೆ. ಮುಂದೆ ಮಾದಕ ದ್ರವ್ಯಗಳ ಸೇವನೆಗೆ ಮಾರುಹೋಗುತ್ತಾರೆ. 14ರಿಂದ 18 ವಯಸ್ಸಿನ ಮಕ್ಕಳು ಹೆಚ್ಚು ವ್ಯಸನಕ್ಕೆ ಒಳಗಾಗುತ್ತಾರೆ. ಇಂತಹ ಹವ್ಯಾಸಗಳು ಜೀವನದ ಪೂರ್ತಿ ಉಳಿಯುತ್ತವೆ. ಈ ವಯಸ್ಸಿನಲ್ಲಿ ಅವರು ಮಾದಕ ವ್ಯಸನಕ್ಕೆ ಒಳಗಾಗದಂತೆ ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ನಿಗಾ ವಹಿಸಬೇಕು ಎಂದು ಸೂಚಿಸಿದರು.

ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಚಲನವಲನ, ಚಟುವಟಿಕೆಗಳ ಕುರಿತು ಅರಿವು ಮೂಡಿಸಬೇಕು. ಮಕ್ಕಳು ಮಾತು ಕೇಳದಿದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರೂ ತಮ್ಮ ಠಾಣಾ ವ್ಯಾಪ್ತಿಯ ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು. ಮಕ್ಕಳಿಗೆ ಮಾದಕ ವ್ಯಸನ ದುಷ್ಪರಿಣಾಮ ಕುರಿತು ಮನವರಿಕೆ ಮಾಡಿಕೊಡಬೇಕು ಎಂದರು.

ಬಹುತೇಕ ಅಪರಾಧ ಪ್ರಕರಣಗಳ ಆರೋಪಿಗಳು ಮಾದಕ ವ್ಯಸನಿಗಳಾಗಿರುತ್ತಾರೆ. ವಾರ್ಷಿಕವಾಗಿ ಸರಾಸರಿ 5,500 ಅಪರಾಧ ಪ್ರಕರಣ ದಾಖಲಾಗುತ್ತಿದ್ದು,  ಶೇ 90 ಅಪರಾಧಿಗಳು ಶಾಲೆ ಬಿಟ್ಟ ಮಕ್ಕಳೇ ಇದ್ದಾರೆ. ಮಕ್ಕಳು ಶಾಲೆ ಬಿಡದಂತೆ ನೋಡಿಕೊಳ್ಳಬೇಕು. ಶೈಕ್ಷಣಿಕವಾಗಿ ಮುಂದುವರಿಯುವಂತೆ ಶಿಕ್ಷಕರು ಕ್ರಮ ವಹಿಸಬೇಕು. ಶಾಲಾ ಸುತ್ತಮುತ್ತ ಮತ್ತು ಎಲ್ಲೆಡೆ ಕೋಟ್ಪಾ ಕಾಯ್ದೆ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಮಲ್ಲಪ್ಪ ಮಾತನಾಡಿ, ಶಿಕ್ಷಕರು, ವೈದ್ಯರು, ಪೊಲೀಸರು, ಹೋಟೆಲ್, ಬಾರ್, ರೆಸ್ಟೋರೆಂಟ್ ಮಾಲೀಕರು ಸೇರಿದಂತೆ ವಿವಿಧ ವಲಯದ ಅಧಿಕಾರಿ, ಸಿಬ್ಬಂದಿಗೆ ಕಾಯ್ದೆ ಮತ್ತು ತಂಬಾಕು ದುಷ್ಪರಿಣಾಮದ ಕುರಿತು ತರಬೇತಿ ನೀಡಲಾಗುವುದು. ಪ್ರತಿ ವರ್ಷ ಶೇ 17ರಿಂದ 20ರಷ್ಟು  ಮಕ್ಕಳು ತಂಬಾಕು ಚಟಕ್ಕೆ ಬಲಿಯಾಗುತ್ತಿದ್ದಾರೆ. ಮಕ್ಕಳಿಗೆ ತಂಬಾಕಿನ ದುಷ್ಪರಿಣಾಮ ಕುರಿತು ಚಿತ್ರಕಲೆ, ಪ್ರಬಂಧ ಚಟುವಟಿಕೆ ಹಮ್ಮಿಕೊಂಡು ಪ್ರಶಸ್ತಿ, ಬಹುಮಾನ ನೀಡಲಾಗುತ್ತಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಮೇಶ್, ಶಿಕ್ಷಕರು ಮಕ್ಕಳಿಗೆ ಮಾದರಿಯಾಗುವಂತೆ ಉತ್ತಮ ಮಾರ್ಗದರ್ಶನ ನೀಡಬೇಕು. ಮಕ್ಕಳು ದುಶ್ಚಟಗಳಿಗೆ ಬಲಿಯಾಗುವುದು ತಪ್ಪುತ್ತದೆ. ನಗರದ ಶಾಲೆಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.