ಗುರುವಾರ , ಮೇ 26, 2022
30 °C

ಗಡಿ ಭಾಗ ನೆಲ್ಲೂರು ಗ್ರಾಮದಲ್ಲಿ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೊರಬ: ಜನರ ಸಮಸ್ಯೆಗಳಿಗೆ ಧ್ವನಿಯಾಗುವ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ತಾಲ್ಲೂಕಿನ ಗಡಿ ಭಾಗ ನೆಲ್ಲೂರು ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

ಸಭೆಯಲ್ಲಿ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರೆತರೆ, ಕೆಲ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ನೀಡುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದರು.

ಸ್ಥಳದಲ್ಲಿಯೇ ಸಾಮಾಜಿಕ ಭದ್ರತೆ ಯೋಜನೆಯಡಿ 22 ಜನರ ಅರ್ಜಿಗಳನ್ನು ಇತ್ಯರ್ಥ ಮಾಡಿ, ವೇತನದ ಮಂಜೂರಾತಿ ಆದೇಶದ ಪ್ರತಿಯನ್ನು ನೀಡಲಾಯಿತು.

ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 36 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಕಾಯಂ ಶಿಕ್ಷಕರ ಕೊರತೆ ಇದೆ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಾಯಂ ಶಿಕ್ಷಕರನ್ನು ನೇಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.

ತಕ್ಷಣವೇ ಜಿಲ್ಲಾಧಿಕಾರಿ ಬಿಇಒ ಎಸ್.ಸಿ. ನಂಜರಾಜ್ ಅವರಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವಲ್ಲಿ ಅಧಿಕ ಶಿಕ್ಷಕರಿದ್ದರೆ ಕೂಡಲೇ ಶಾಲೆ ಆರಂಭವಾಗುವ ಮುನ್ನವೇ ಕಾಯಂ ಶಿಕ್ಷಕರ ನಿಯೋಜನೆ ಮಾಡುವಂತೆ ಸೂಚಿಸಿದರು. 

ಸರ್ವೆ ನಂ–36ರಲ್ಲಿ 10 ಕುಟುಂಬಗಳು ಸಾಗುವಳಿ ಮಾಡಿಕೊಂಡು ಬಂದಿವೆ. ಕಿರು ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವುದರಿಂದ ಹಕ್ಕುಪತ್ರ ದೊರೆಯದೇ ಸಮಸ್ಯೆ ಎದುರಿಸುತ್ತಿರುವ ಕುರಿತು ರೈತರು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಹರೀಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಣ್ಣ ಪುಟ್ಟ ದಿನಸಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಗ್ರಾಮದಲ್ಲಿ ಮಹಿಳೆಯರು ನಿರ್ಭಿತಿಯಿಂದ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಎಂದು ಗ್ರಾಮದ ಮಹಿಳೆಯರು ದೂರಿದರು.

ಅಬಕಾರಿ ಅಧಿಕಾರಿಗಳಿಗೆ ತರಾಟೆಗೆ ತಗೆದುಕೊಂಡ ಜಿಲ್ಲಾಧಿಕಾರಿ ಸಮಸ್ಯೆ ಇರುವುದು ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಅಬಕಾರಿ ಅಧಿಕಾರಿ, ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದವರ ಮೇಲೆ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದರು.

ತಕ್ಷಣವೇ ಚಂದ್ರಗುತ್ತಿ ಗ್ರಾಮಸ್ಥರೊಬ್ಬರು ಚಂದ್ರಗುತ್ತಿಯಲ್ಲಿ ಸಿಎಲ್-2 ಪರವಾನಗಿ ಪಡೆದು ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು. ಜಿಲ್ಲಾ ಮಟ್ಟದ ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ಸೆಲ್ವಮಣಿ ಸೂಚಿಸಿದರು.

ಶ್ರೀರೇಣುಕಾ ಹೊಳೆ (ಬಿರ್ಲು ಗುಂಡಿ)ಯಲ್ಲಿ ಹೂಳು ತುಂಬಿದೆ. ಬೇಸಿಗೆ ಬೆಳೆ ಬೆಳೆಯಲು ಸಹ ಸಾಧ್ಯವಾಗುತ್ತಿಲ್ಲ. ಹೂಳು ತೆಗೆಸಬೇಕು ಎಂದು ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರು. ಯೋಜನಾ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.

ವಿದ್ಯುತ್ ಸಮಸ್ಯೆ, ರಸ್ತೆ ಸಮಸ್ಯೆ, ಹದಗೆಟ್ಟ ರಸ್ತೆ, ಬಗರ್‌ಹುಕುಂ ಸಮಸ್ಯೆ, ಚಂದ್ರಗುತ್ತಿಯ ನಾಡ ಕಚೇರಿಯಲ್ಲಿ ವಿಳಂಬ ಧೋರಣೆ ಅನುಸರಿಸುವ ಸಿಬ್ಬಂದಿಯ ವಿರುದ್ಧ ದೂರು, ಶಾಲಾ ಕಟ್ಟಡ ದುರಸ್ತಿ ಸೇರಿ 22 ಅರ್ಜಿಗಳನ್ನು ಗ್ರಾಮಸ್ಥರು ಸಲ್ಲಿಸಿದರು. 

ಇದಕ್ಕೂ ಮೊದಲು ಗ್ರಾಮಕ್ಕೆ ಬಂದ ಡಾ. ಆರ್. ಸೆಲ್ವಮಣಿ ಅವರನ್ನು ಗ್ರಾಮಸ್ಥರು ಪ್ರೀತಿಯಿಂದ ಸ್ವಾಗತಿಸಿದರು. ಗ್ರಾಮದ ಮಾರಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಮೆರವಣಿಗೆಯಲ್ಲಿ ಕರೆತರಲಾಯಿತು. ಗ್ರಾಮದಲ್ಲಿ ಹಬ್ಬದ ಸಂಭ್ರಮ ವಾತಾವರಣ ಇತ್ತು. 

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್. ಹೊನ್ನಾಳಿ, ಡಿಎಫ್‍ಒ ರಾಮಕೃಷ್ಣ, ಸಾಗರ ಉಪವಿಭಾಗಾಧಿಕಾರಿ ಡಾ. ಎಲ್. ನಾಗರಾಜ್, ತಹಶೀಲ್ದಾರ್ ಮಂಜುಳಾ ಹೆಗಡಾಳ್, ಇಒ ಕೆ.ಜಿ. ಕುಮಾರ್, ಆರ್‍ಎಫ್‍ಒ ಪ್ರಭುರಾಜ್ ಪಾಟೀಲ್, ಆನವಟ್ಟಿ ಆರ್‌ಎಫ್‍ಒ ಮುಹಮ್ಮದ್ ಪಾಷಾ ಅಂಗಡಿ, ಬಿಇಒ ಎಸ್.ಸಿ. ನಂಜರಾಜ್, ಎಂಜಿನಿಯರ್ ಉಮಾನಾಯ್ಕ್, ಎಇಇ ರಾಮಪ್ಪ, ಆಹಾರ ನಿರೀಕ್ಷಕ ಸರ್ವಜ್ಞ ಮೂರ್ತಿ, ಎನ್.ಡಿ. ತಿಮ್ಮಪ್ಪ, ಅಗ್ನಿಶಾಮಕ ಠಾಣಾಧಿಕಾರಿ ಕೆ. ಮಹಾಬಲೇಶ್ವರ, ಉಪತಹಶೀಲ್ದಾರ್ ವೆಂಕಟೇಶ್, ರಾಜಸ್ವ ನಿರೀಕ್ಷಕ ಶಿವಪ್ರಸಾದ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ರಾಕೇಶ್, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣಪ್ಪ, ಕೃಷ್ಣಪ್ಪ, ಗ್ರಾಮ ಉಸ್ತುವಾರಿ ಸಮಿತಿ ಅಧ್ಯಕ್ಷ ಆನಂದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು