ಶನಿವಾರ, ಜುಲೈ 24, 2021
27 °C
ಕೇಂದ್ರ ಸರ್ಕಾರದ ವಿರುದ್ಧ ಸಿಪಿಐ (ಎಂ) ಕಾರ್ಯಕರ್ತರ ಪ್ರತಿಭಟನೆ

ಕಾರ್ಮಿಕರ ಮೇಲೆ ಲಾಕ್‌ಡೌನ್ ದುಷ್ಪರಿಣಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೇಂದ್ರ ಸರ್ಕಾರ ಕೊರೊನಾ ವೈರಸ್‌ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಲಾಕ್‌ಡೌನ್‌ ದುಷ್ಪರಿಣಾಮ ಎದುರಿಸಲು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸಿಪಿಐ(ಎಂ) ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಾರ್ಮಿಕರಿಗೆ ಕೆಲಸ, ಆಹಾರ, ವಸತಿ ಪೂರೈಸುವ ಬದಲು, ಉದ್ಯೋಗ ಕಡಿತ, ಸಂಬಳ ಕಡಿತ, ಕೆಲಸದ ಅವಧಿ ಹೆಚ್ಚಳದಂತಹ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಕಾರ್ಮಿಕ ಕಾನೂನುಗಳನ್ನೇ ನಾಶ ಮಾಡಲು ಹೊರಟಿದೆ. ನೊಂದ ಕುಟುಂಬಗಳಿಗೆ ಪರಿಹಾರವನ್ನೂ ನೀಡಲಿಲ್ಲ ಎಂದು ಆರೋಪಿಸಿದರು.

ಕೊರೊನಾ ದಾಳಿ ತಡೆಯುವ ಪ್ರಧಾನಿ ಮೋದಿ ಸಾಧನೆಗೆ ವಿಶ್ವಮಾನ್ಯತೆ ದೊರೆತಿದೆ ಎಂದು ಮಾಧ್ಯಮಗಳ ಮೂಲಕ ವಿಜೃಂಭಿಸಲಾಗುತ್ತಿದೆ. ಮೋದಿ ಅಸಾಧಾರಣ ಆಡಳಿತ ವೈಖರಿಗೆ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ ಎಂದು ಬಿಂಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಟ್ಟೆಪಾಡಿಗಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಲಕ್ಷಾಂತರ ಕಾರ್ಮಿಕರು ವಲಸೆ ಬಂದಿದ್ದರು. ಯಾವುದೇ ಮೂನ್ಸೂಚನೆ ಇಲ್ಲದ ಲಾಕ್‌ಡೌನ್‌ ಘೋಷಣೆ ಮಾಡಿದ ಪರಿಣಾಮ ಕೆಲಸ ಕಳೆದುಕೊಂಡರು. ಯಾವುದೇ ಆದಾಯವಿಲ್ಲದೆ ಬೀದಿಪಾಲಾದರು. ಇದು ಪೂರ್ವ ತಯಾರಿ ಇಲ್ಲದೆ ದೇಶದ ಮೇಲೆ ಲಾಕ್‌ಡೌನ್‌ ಹೇರಿದ ಪರಿಣಾಮ ಎಂದು ದೂರಿದರು. 

ಪ್ರತಿ ಕಾರ್ಮಿಕ ಕುಟುಂಬಗಳಿಗೆ ತಿಂಗಳಿಗೆ ₨ 7,500ರಂತೆ ಆರು ತಿಂಗಳು ನೆರವು ನೀಡಬೇಕು. ಆರು ತಿಂಗಳವರೆಗೆ ಉಚಿತ ಆಹಾರ ಧಾನ್ಯ ವಿತರಣೆ ಮಾಡಬೇಕು. ಉದ್ಯೋಗ ಖಾತ್ರಿಯಲ್ಲಿ ವರ್ಷಕ್ಕೆ 200 ದಿನಗಳ ಉದ್ಯೋಗ ನೀಡಬೇಕು. ನಗರದ ಬಡವರಿಗೂ ಉದ್ಯೋಗ ಖಾತ್ರಿ ವಿಸ್ತರಿಸಬೇಕು. ನಿರುದ್ಯೋಗಿಗಳಿಗೆ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.

ಕಮ್ಯುನಿಸ್ಟ್ ಮುಖಂಡರಾದ ಎಂ.ನಾರಾಯಣ, ಮುಖಂಡರಾದ ಎಸ್.ಬಿ.ಶಿವಶಂಕರ್, ಕೆ.ಪ್ರಭಾಕರನ್, ಕೆ.ಮಂಜಣ್ಣ, ಹನುಮಮ್ಮ, ಅಕ್ಕಮ್ಮ, ಎಂ.ಅನಂತರಾಮ್, ಲಕ್ಷ್ಮೀನಾರಾಯಣ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.