ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಗಣರಾಜ್ಯೋತ್ಸವ ಪರೇಡ್

Last Updated 26 ಜನವರಿ 2021, 13:19 IST
ಅಕ್ಷರ ಗಾತ್ರ

ಶಿವಮೊಗ್ಗ: ಕೇಂದ್ರ, ರಾಜ್ಯ ಸರ್ಕಾರಗಳ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳವಾರ ರೈತ, ಕಾರ್ಮಿಕ, ದಲಿತ ಐಕ್ಯತಾ ಹೋರಾಟ ಒಕ್ಕೂಟದ ಕಾರ್ಯಕರ್ತರು ರೈತ ಗಣರಾಜ್ಯೋತ್ಸವ ಪರೇಡ್ ನಡೆಸಿದರು.

ಸೈನ್ಸ್ ಮೈದಾನದಿಂದ ಹೊರ ಮೆರವಣಿಗೆಯಲ್ಲಿ ಭಾರಿ ಸಂಖ್ಯೆಯ ಟ್ರ್ಯಾಕ್ಟರ್, ಕಾರು, ಜೀಪು, ದ್ವಿಚಕ್ರವಾಹನಗಳಿದ್ದವು. ಬಿ.ಎಚ್.ರಸ್ತೆ ಅಮೀರ್ ಅಹಮದ್‌ ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ, ಬಾಲರಾಜ್ ರಸ್ತೆ, ಮಹಾವೀರ ವೃತ್ತ, ಸವಳಂಗ ರಸ್ತೆ ಮೂಲಕ ಜಿಲ್ಲಾ ಸರ್ಕಾರಿ ನೌಕರರ ಭವನದ ರಸ್ತೆಗೆ ಆಗಮಿಸಿದರು. ನಂತರ ಅಲ್ಲೇ ಬಹಿರಂಗ ಸಭೆ ನಡೆಸಿದರು.

ಪ್ರಗತಿಪರ ನಾಯಕ ಸಿದ್ಧನಗೌಡ ಪಾಟೀಲ್ ಮಾತನಾಡಿ, ಇದು ಎರಡನೇ ಸ್ವಾತಂತ್ರ್ಯದ ಹೋರಾಟ. ಅನ್ನದಾತರು ಸ್ವಾತಂತ್ರ್ಯ ಉಳಿಸಿಕೊಳ್ಳಲು ಈ ಹೋರಾಟ ಅಭಿಯಾನ ಹಮ್ಮಿಕೊಂಡಿದ್ದಾರೆ. ಸದನದಲ್ಲಿ ಯಾರೂ ಇಲ್ಲದಿದ್ದಾಗ, ಲಾಕ್‌ಡೌನ್‌ ಕಾರಣ ಜನರನ್ನು ಮನೆಯಲ್ಲಿ ಬಂಧಿಮಾಡಿ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ರೈತರ ಭೂಮಿ ಕಸಿದುಕೊಂಡು, ರೈತರೇ ಇಲ್ಲದಂತೆ ಮಾಡುವ ಹುನ್ನಾರ ಮಾಡಲಾಗುತ್ತಿದೆ. ಈ ದೇಶವನ್ನು ಭವಿಷ್ಯದಲ್ಲಿ ಕಂಪನಿಗಳು ಆಳುವ ಕಾಲ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ನಾಯಕ ಕೆ.ಟಿ.ಗಂಗಾಧರ್ ಮಾತನಾಡಿ, ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ರೈತರ ಹೋರಾಟಕ್ಕೆ ಕಿಂಚಿತ್ತು ಬೆಲೆ ಕೊಟ್ಟಿಲ್ಲ. ಈ ಕಾಯ್ದೆಗಳ ಸಾಧಕ. ಬಾಧಕಗಳ ಕುರಿತು ಚರ್ಚಿಸಿಲ್ಲ. ಕೆಟ್ಟ ಪರಿಣಾಮಗಳ ಕುರಿತು ರೈತರ ಮತ್ತು ತಜ್ಞರ ಅಭಿಪ್ರಾಯವನ್ನು ಪಡೆದಿಲ್ಲ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರ ತಾನೂ ಮಾಡಿದ್ದೆ ಸರಿ ಎಂಬಂತೆ ಸರ್ವಾಧಿಕಾರಿ ಧೋರಣೆ ತೋರುತ್ತಿದೆ. ಅಂಬಾನಿ, ಅದಾನಿ ಅವರ ಕೈಗೊಂಬೆಯಾಗಿ ಆಡಳಿತ ನಡೆಸುತ್ತಿರುವ ಮೋದಿ ಅವರು ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಾಗಿ ಕೃಷಿ ಕಾಯ್ದೆ ತಿದ್ದುಪಡಿ ತಂದಿದ್ದಾರೆ. ರೈತರ ಹಿತಾಸಕ್ತಿಗಾಗಿ ಕಾಯ್ದೆ ಜಾರಿ ಮಾಡಿದ್ದೇವೆ ಎಂದು ಸುಳ್ಳುಗಳ ಸರಮಾಲೆ ಹರಿಬಿಡುತ್ತಾ ಜನರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ರೈತರ ಮಕ್ಕಳ ಭವಿಷ್ಯ ಆತಂಕದಲ್ಲಿದೆ. ಇಡಿ ಭೂಮಿಯೇ ಮುಂದಿನ ದಿನಗಳಲ್ಲಿ ವಿಷವಾಗಲಿದೆ. ದಲಿತರು, ಭೂ ಹೀನರು, ಅರಣ್ಯವಾಸಿಗಳು ತಮ್ಮ ಹಕ್ಕು ಕಳೆದುಕೊಳ್ಳಲಿದ್ದಾರೆ. ಕಾಯ್ದೆಗಳ ವಿರುದ್ಧ ಸಮರ ಸಾರುವ ಚಳವಳಿ ರೂಪಿಸುವ ಅಗತ್ಯವಿದೆ ಎಂದರು.

ಒಕ್ಕೂಟದ ಸಂಚಾಲಕಶಿವಾನಂದ ಕುಗ್ವೆ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ರೈತ ಮುಖಂಡ ತೇಜಸ್ವಿ ಪಟೇಲ್‌, ಕಲಗೋಡು ರತ್ನಾಕರ್, ಮಲ್ಲಿಕಾರ್ಜುನ್, ರಮೇಶ್ ಹೆಗ್ಡೆ, ಗೋ. ರಮೇಶ್ ಗೌಡ, ಜಿ.ಡಿ. ಮಂಜುನಾಥ್, ಬಿ.ಆರ್. ಜಯಂತ್, ಎಚ್.ಸಿ. ಯೋಗೀಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT