ಶನಿವಾರ, ಮಾರ್ಚ್ 25, 2023
23 °C
ಶರತ್ ಭೂಪಾಳಂ ಸಾವು ಖಂಡಿಸಿ ಸಭೆ

ಉದ್ಯಮಿ ಸಾವಿಗೆ ಅಗ್ನಿಶಾಮಕ ದಳ ವೈಫಲ್ಯ ಕಾರಣ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ಅಗ್ನಿಶಾಮಕ ದಳದ ವೈಫಲ್ಯದಿಂದಲೇ ಉದ್ಯಮಿ ಶರತ್ ಭೂಪಾಳಂ ಮೃತಪಟ್ಟಿದ್ದಾರೆ. ಇಲಾಖೆಯ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಉದ್ಯಮಿ ಶರತ್ ಭೂಪಾಳಂ ಕುಟುಂಬ ವರ್ಗ, ವಿವಿಧ ಸಂಘಟನೆಗಳು ಕುವೆಂಪು ರಸ್ತೆಯ ಅವರ ನಿವಾಸದಿಂದ ಮೆರವಣಿಗೆಯಲ್ಲಿ ಸಾಗಿ, ಗೋಪಿ ವೃತ್ತದಿಂದ ಮಾನವ ಸರಪಳಿ ರಚಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಖಂಡನಾ ಸಭೆ ನಡೆಸಿ ಸೋಮವಾರ ಮನವಿ ಸಲ್ಲಿಸಿದರು.

‘ಜ. 8ರಂದು ಅಗ್ನಿ ದುರಂತದಲ್ಲಿ ಉದ್ಯಮಿ ಶರತ್ ಭೂಪಾಳಂ ಅನ್ಯಾಯವಾಗಿ ಜೀವ ತೆತ್ತಿದ್ದಾರೆ. ಘಟನೆ ನಡೆದಾಗ ಅಗ್ನಿಶಾಮಕ ದಳದವರು ಸರಿಯಾದ ಸಮಯಕ್ಕೆ ಬರಲಿಲ್ಲ. ಬಂದಾಗ ಅವರ ಬಳಿ ಸುರಕ್ಷತಾ ಉಪಕರಣಗಲೂ ಇರಲಿಲ್ಲ. ಇದರಿಂದ ತೊಂದರೆಯಾಯಿತು. ಮೊದಲ ಅಗ್ನಿಶಾಮಕ ವಾಹನ ಬಂದಾಗ ಅದರಲ್ಲಿ ಯಾವ ಸಲಕರಣೆಗಳೂ ಇರಲಿಲ್ಲ. ಎರಡನೇ ವಾಹನದಲ್ಲಿ ಎಲ್ಲ ಉಪಕರಣಗಳೂ ಇದ್ದವು. ಆದರೆ ಆ ವಾಹನ ಬುರುವುದು ತಡವಾದ್ದರಿಂದ ಉದ್ಯಮಿ ಶರತ್ ಭೂಪಾಳಂ ಜೀವ ಬಿಡಬೇಕಾಯಿತು’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮೃತ ಉದ್ಯಮಿ ಶರತ್ ಭೂಪಾಳಂ ತಂದೆ ಶಶಿಧರ್ ಭೂಪಾಳಂ ಮಾತನಾಡಿ, ‘ನನ್ನ ಮಗನ ಸಾವಿನಿಂದ ನಾವು ದಿಗ್ಭ್ರಾಂತರಾಗಿದ್ದೇವೆ. ಈ ಸಾವು ಅಗ್ನಿಶಾಮಕ ದಳದವರ ನಿರ್ಲಕ್ಷ್ಯದಿಂದಲೇ ಆಗಿದೆ. ಅವಘಡ ಸಂಭವಿಸಿದ ತಕ್ಷಣ ಅವರು ಬರಲಿಲ್ಲ. ಬಂದರೂ ಅವರ ಬಳಿ ಯಾವ ಉಪಕರಣಗಳೂ ಇರಲಿಲ್ಲ. ಇಲಾಖೆಯ ಕೊಠಡಿಯೊಳಗೆ ಟಾರ್ಚ್ ಸೇರಿದಂತೆ ಮಾಸ್ಕ್ ಇತ್ಯಾದಿ ಸುರಕ್ಷತಾ ಉಪಕರಣಗಳು ಇದ್ದರೂ ಅವನ್ನೆಲ್ಲ ಬಿಟ್ಟು ಬಂದಿದ್ದಾರೆ. ಅವರ ನಿರ್ಲಕ್ಷ್ಯದಿಂದ ನನ್ನ ಮಗನ ಜೀವ ಹೋಗಿದೆ. ಇಂತಹ ಘಟನೆ ಮರುಕಳಿಸಬಾರದು’ ಎಂದರು.

ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಅವರು ಮನವಿ ಸ್ವೀಕರಿಸಿ ಮಾತನಾಡಿ, ‘ಇಲಾಖೆಯವರು ತಪ್ಪು ಮಾಡಿದ್ದರೆ ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇನೆ. ಸೆಪ್ಟೆಂಬರ್ ತಿಂಗಳಲ್ಲಿ ಇಲಾಖೆಗೆ ಸುಮಾರು ₹ 40 ಲಕ್ಷ ಬಿಡುಗಡೆ ಮಾಡಿ ಅಗತ್ಯ ಉಪಕರಣಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ. ಅಗ್ನಿಶಾಮಕ ದಳದವರು ಇನ್ನೂ ಹೆಚ್ಚಿನ ಸುರಕ್ಷತಾ ಉಪಕರಣಗಳನ್ನು ಕೇಳಿದರೆ ಕೊಡುತ್ತೇನೆ. ಘಟನೆ ಬಗ್ಗೆ ವಿಷಾದವಿದೆ. ಇಲಾಖೆಯ ತಪ್ಪಾಗಿದ್ದರೆ ಖಂಡಿತಾ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವೆ’ ಎಂದರು.

ಪ್ರತಿಭಟನೆಯಲ್ಲಿ ಐಕ್ಯ ಸಂಸ್ಥೆ, ಮಾಚೇನಹಳ್ಳಿ, ಸಾಗರ, ಇಂಡಸ್ಟ್ರಿಯಲ್ ಎಸ್ಟೇಟ್ ಪದಾಧಿಕಾರಿಗಳು, ಆರ್ಯವೈಶ್ಯ ಸಂಘಟನೆಗಳು, ಗಾಂಧಿಬಜಾರ್ ವರ್ತಕರ ಸಂಘ, ಜಿಲ್ಲಾ ಒಕ್ಕಲಿಗರ ಸಂಘ ಸೇರಿದಂತೆ 30ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಮಾಚೇನಹಳ್ಳಿ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎಂ.ಎ. ರಮೇಶ್ ಹೆಗ್ಡೆ, ಡಾ. ಸತೀಶ್ ಕುಮಾರ್ ಶೆಟ್ಟಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು