ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ವೇಳಾಪಟ್ಟಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ಜಿಲ್ಲಾಧಿಕಾರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮನವಿ
Last Updated 17 ಜನವರಿ 2023, 6:26 IST
ಅಕ್ಷರ ಗಾತ್ರ

ಶಿವಮೊಗ್ಗ: ಕುವೆಂಪು ವಿವಿಯ ಸ್ನಾತಕ ವಿದ್ಯಾರ್ಥಿಗಳಿಗೆ ಏಕರೂಪ ವೇಳಾಪಟ್ಟಿ ಜಾರಿಗೊಳಿಸಲು ಆಗ್ರಹಿಸಿ ಮತ್ತು ಹೆಚ್ಚಳ ಮಾಡಿರುವ ಪರೀಕ್ಷಾ ಶುಲ್ಕ ಕಡಿಮೆ ಮಾಡಲು ಒತ್ತಾಯಿಸಿ ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸೋಮವಾರ ಮನವಿ ಸಲ್ಲಿಸಿದರು.

‘ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಸ್ಪಷ್ಟತೆ ಇಲ್ಲ. ಪ್ರಸಕ್ತ ಸ್ನಾತಕ ಪದವಿ ಪ್ರಥಮ ಸೆಮ್‌ನ ವಿದ್ಯಾರ್ಥಿಗಳ ತರಗತಿಗಳು ಕಳೆದ ವರ್ಷ ಸೆ. 1ರಂದು ಆರಂಭವಾಗಿವೆ. ಆದರೆ, ಆಗ ಪ್ರಥಮ ವರ್ಷದ ತರಗತಿಗಳು, 2 ಮತ್ತು 3ನೇ ವರ್ಷದ ವಿದ್ಯಾರ್ಥಿಗಳ ತರಗತಿಗಳು ಸೆ. 17ರವರೆಗೆ ನಡೆದಿದ್ದ ಕಾರಣ ಬಹುತೇಕ ಕಾಲೇಜಿನಲ್ಲಿ ಕೊಠಡಿಗಳ ಕೊರತೆಯಿಂದ ತರಗತಿಗಳು ನಡೆದಿಲ್ಲ’ ಎಂದು ಆರೋಪಿಸಿದರು.

‘2021 -22ನೇ ಸಾಲಿನ 2 ಮತ್ತು 3ನೇ ವರ್ಷದ ವಿದ್ಯಾರ್ಥಿಗಳಿಗೆ ಸೆ. 29ರಿಂದ ಅ. 20ರವರೆಗೆ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರಣದಿಂದಲೂ ತರಗತಿಗಳು ಸಮರ್ಪಕವಾಗಿ ನಡೆಯಲಿಲ್ಲ. ಹೀಗೆ ಅವೈಜ್ಞಾನಿಕ ವೇಳಾಪಟ್ಟಿಯಿಂದ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಆದ್ದರಿಂದ ಎಲ್ಲ ವರ್ಷದ ವಿದ್ಯಾರ್ಥಿಗಳಿಗೆ ಇತರ ವಿವಿಗಳಲ್ಲಿ ಇರುವಂತೆ ಏಕರೂಪ ವೇಳಾಪಟ್ಟಿಯನ್ನು ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಕುವೆಂಪು ವಿವಿಯ ಎನ್ಇಪಿ ಮೊದಲನೇ ಬ್ಯಾಚ್‌ನ ಮೊದಲ ಸೆಮ್ ವಿದ್ಯಾರ್ಥಿಗಳ ವಿವಿಧ ಕೋರ್ಸ್‌ಗಳ ಪರೀಕ್ಷಾ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ಎಬಿವಿಪಿ ಪ್ರತಿಭಟನೆಯ ನಂತರ ಕೇವಲ ಬಿಕಾಂ ವಿದ್ಯಾರ್ಥಿಗಳಿಗೆ ಮಾತ್ರ ₹ 300 ಕಡಿಮೆ ಮಾಡಲಾಗಿದೆ. ಎಲ್ಲ ಕೋರ್ಸ್ ಮತ್ತು ಎಲ್ಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಏರಿಕೆ ಮಾಡಿರುವ ಪರೀಕ್ಷಾ ಶುಲ್ಕವನ್ನು ತಕ್ಷಣವೇ ಕಡಿಮೆ ಮಾಡಬೇಕು’ ಎಂದು ಮನವಿಯಲ್ಲಿ ತಿಳಿಸಿದರು.

ಪ್ರತಿಭಟನೆಯಲ್ಲಿ ಎಚ್.ಕೆ. ಪ್ರವೀಣ್, ವಿಜಯ್, ಮನು, ರವಿ, ಸ್ಫೂರ್ತಿ, ಯಶಸ್ವಿನಿ, ವಿಧಾತ್ರಿ, ಶರಣಪ್ಪ, ಪ್ರಖ್ಯಾತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT