ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಗ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

ಮುಜುಗರಕ್ಕೆ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ: ಕಿಮ್ಮನೆ
Last Updated 9 ಏಪ್ರಿಲ್ 2022, 4:33 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ರಾಜ್ಯದ ಶಾಂತಿ, ಸುವ್ಯವಸ್ಥೆ ಕಾಪಾಡುವ ಗೃಹಸಚಿವರ ಅಸಂಬದ್ಧ ಹೇಳಿಕೆಗಳಿಂದ ಪೊಲೀಸ್‌ ಇಲಾಖೆ ಮುಜುಗರಕ್ಕೆ ತಲೆ ತಗ್ಗಿಸಿದೆ. ‘ಪ್ರಜಾವಾಣಿ’ ತನಿಖಾ ವರದಿಯಲ್ಲಿ ಗೃಹ ಇಲಾಖೆಯ ದಂಧೆ ಜಗಜ್ಜಾಹೀರಾಗಿದೆ. ನಂದಿತಾ ಪ್ರಕರಣದ ಚಾಳಿ ಮುಂದುವರಿಸಿದ ಆರಗ ಜ್ಞಾನೇಂದ್ರ ವಜಾಕ್ಕೆ ಸರ್ಕಾರ ಕ್ರಮ ವಹಿಸಬೇಕು’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಆಗ್ರಹಿಸಿದರು.

ಬೆಂಗಳೂರಿನಲ್ಲಿ ನಡೆದ ಚಂದ್ರಶೇಖರ್‌ ಹತ್ಯೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ ವಿರೋಧಾಭಾಸ ಹೇಳಿಕೆ ಖಂಡಿಸಿ ಶುಕ್ರವಾರ ತಾಲ್ಲೂಕು ಕಚೇರಿ ಮುಂಭಾಗ ಬ್ಲಾಕ್‌ ಹಾಗೂ ಯುವ ಕಾಂಗ್ರೆಸ್‌ನಿಂದ ಸಚಿವರ ವಜಾಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

‘1987ರಲ್ಲೇ ಜ್ಞಾನೇಂದ್ರ ಜೈಲು ಸೇರಬೇಕಿತ್ತು. ಇವರೇ ಜಾಡಿಸಿ ಒದ್ದು ಕರ್ತವ್ಯ ನಿರತ ಡಾ. ದೇವದಾಸ್‌ ಬಳಿ ಪೆಟ್ಟು ತಿಂದಿದ್ದರು. ಡಿ.ಬಿ. ಚಂದ್ರೇಗೌಡರ ಪ್ರಭಾವದಿಂದ ಆರಗ ಜೈಲು ಪಾಲಾಗುವುದು ತಪ್ಪಿತ್ತು. ಆ ಸಂಸ್ಕೃತಿಯಿಂದ ಬೆಳೆದು ಬಂದವರಿಂದ ಸಭ್ಯತೆ ನಿರೀಕ್ಷೆ ಮಾಡುವುದು ತಪ್ಪು. ಕೋಣಂದೂರು ಘಟನೆಯಲ್ಲಿ ತಲೆಗೆ ಪೆಟ್ಟು ಬಿದ್ದು ಹೀಗೆ ಆಡುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

‘ಶಿಕಾರಿಗೆ ಹೋದವರ ಮೇಲೆ 302 ಐಪಿಸಿ ಸೆಕ್ಷನ್‌ ಅಡಿಯಲ್ಲಿ ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲು ಮಾಡಿದ್ದಾರೆ. ಶಿಕಾರಿಗೆ ಹೋದವರು ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಲು ಸಾಧ್ಯವಿಲ್ಲ. ಹೋದರೆ ಬಿಡಿಸಿಕೊಳ್ಳಲು ಆಗುವುದಿಲ್ಲ. ಐಪಿಸಿ ಓದಿಕೊಳ್ಳಲು ಸಾಧ್ಯವಾಗದಿದ್ದರೆ ನನ್ನ ಬಳಿ ಬನ್ನಿ. ಸರಿಯಾದ ಸೆಕ್ಷನ್‌ ಟಿಪ್ಪಣಿ ಸಮೇತ ನೀಡುತ್ತೇನೆ’ ಎಂದು ಪೊಲೀಸರಿಗೆ ಪಾಠ ಮಾಡಿದರು.

ಮುಖಂಡ ಬಿ. ಗಣಪತಿ ಮಾತನಾಡಿ, ‘ಪಟ್ಟಣ ಪಂಚಾಯಿತಿ ಆಸ್ತಿ ತೆರಿಗೆ ಜನಸಾಮಾನ್ಯರಿಗೆ ಹೊರೆಯಾಗಿದೆ. ಪ್ರತಿಭಟಿಸಿ ಒತ್ತಾಯಿಸಿದರೂ ಪ್ರಯೋಜನ ಆಗಿಲ್ಲ. ಬಿಜೆಪಿ ಜನರ ಭಾವನೆಗೆ ಸ್ಪಂದಿಸದ ಜನವಿರೋಧಿ ಸರ್ಕಾರ’ ಎಂದು ದೂರಿದರು.

‘ಬಿಜೆಪಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಪ್ರಚೋದನಕಾರಿ ಭಾಷಣ ಮಾಡುವುದರಲ್ಲಿ ತೊಡಗಿದೆ. ನಿರುದ್ಯೋಗದಿಂದ ಬಳಲುತ್ತಿರುವ ಯುವ ಸಮೂಹದ ದಾರಿ ತಪ್ಪಿಸಲಾಗುತ್ತಿದೆ’ ಎಂದುಕಾಂಗ್ರೆಸ್‌ ಗ್ರಾಮಾಂತರ ಘಟಕದಅಧ್ಯಕ್ಷ ಪುಟ್ಟೋಡ್ಲು ರಾಘವೇಂದ್ರ ಆರೋಪಿಸಿದರು.

ಬಳಿಕ ತಹಶೀಲ್ದಾರ್‌ ಹಾಗೂ ಪೊಲೀಸರಿಗೆ ಮನವಿ ಸಲ್ಲಿಸಲಾಯಿತು.

‌ಪ್ರತಿಭಟನೆಯಲ್ಲಿ ಗ್ರಾಮಾಂತರ ಕಾಂಗ್ರೆಸ್‌ ಅಧ್ಯಕ್ಷ ಮುಡುಬ ರಾಘವೇಂದ್ರ, ಯುವ ಕಾಂಗ್ರೆಸ್‌ ಅಧ್ಯಕ್ಷ ಅಮರನಾಥ ಶೆಟ್ಟಿ, ಗ್ರಾಮಾಂತರ ಅಧ್ಯಕ್ಷ ಪುಟ್ಟೋಡ್ಲು ರಾಘವೇಂದ್ರ, ಕಾಂಗ್ರೆಸ್‌ ವಕ್ತಾರ ಡಿ.ಎಸ್.‌ ವಿಶ್ವನಾಥ ಶೆಟ್ಟಿ, ರಾಷ್ಟ್ರೀಯ ಯುವ ಕಾಂಗ್ರೆಸ್‌ ವಕ್ತಾರ ಆದರ್ಶ ಹುಂಚದಕಟ್ಟೆ, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ನಾರಾಯಣರಾವ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌, ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಮುಖಂಡರಾದ ಕೆಳಕೆರೆ ದಿವಾಕರ್‌, ಪಟಮಕ್ಕಿ ಮಹಾಬಲೇಶ್‌, ಅಮ್ರಪಾಲಿ ಸುರೇಶ್‌, ಬಿ.ಗಣಪತಿ, ಪೂರ್ಣೇಶ್‌ ಇದ್ದರು.

ಕಾಂತರಾಜ್‌ ಗುಂಟೇಟು ಪ್ರಕರಣದಲ್ಲಿ 22 ಜನರು ಇದ್ದರು. ಗಾಯಗೊಂಡ ಕಾಂತರಾಜ್‌ ಒದ್ದಾಡುತ್ತಿದ್ದರೆ ಆಸ್ಪತ್ರೆಗೆ ದಾಖಲಿಸಲಿಲ್ಲ. ಬಿಜೆಪಿಯವರು ಶಿಕಾರಿ ಹಂದಿ ಹಿಡಿದುಕೊಂಡು ಹೋಗಿದ್ದಾರೆ.

ಡಿ.ಎಸ್.‌ ವಿಶ್ವನಾಥ ಶೆಟ್ಟಿ, ಕಾಂಗ್ರೆಸ್‌ ವಕ್ತಾರ

ಕಲ್ಪನಾಲೋಕದಲ್ಲಿ ಹೇಳಿಕೆ ನೀಡುವ ಜ್ಞಾನೇಂದ್ರ ಅವರಿಗೆ ತಿದ್ದಿಕೊಳ್ಳುವ ಅವಕಾಶ ಪ್ರಾಯಶಃ ಇಲ್ಲ. ಪುರಂದರ ದಾಸರು, ಶಾಂತವೇರಿ ಗೋಪಾಲಗೌಡರು ಜನಿಸಿದ ಕ್ಷೇತ್ರಕ್ಕೆ ಕಳಂಕ ಎಸಗಿದ್ದಾರೆ.

ಆದರ್ಶ ಹುಂಚದಕಟ್ಟೆ, ರಾಷ್ಟ್ರೀಯ ಯುವ ಕಾಂಗ್ರೆಸ್‌ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT