ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ರಾಜ್ಯಪಾಲರ ಭಾಷಣದ ವೇಳೆ ಕುಲಪತಿ ವಿರುದ್ಧ ಧಿಕ್ಕಾರದ ಕೂಗು

ಕುಲಪತಿ ವಿರುದ್ಧ ಭ್ರಷ್ಟಾಚಾರದ ಆರೋಪ; ಎನ್‌ಎಸ್‌ಯುಐ ಕಾರ್ಯಕರ್ತರಿಂದ ಕಪ್ಪು ಬಾವುಟ ಪ್ರದರ್ಶನ
Published 22 ಜುಲೈ 2023, 14:23 IST
Last Updated 22 ಜುಲೈ 2023, 14:23 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ನಡೆದ 33ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ಭಾಷಣದ ವೇಳೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ವಿರುದ್ಧ ಎನ್‌ಎಸ್‌ಯುಐ ಸಂಘಟನೆ ಕಾರ್ಯಕರ್ತರು ಘೋಷಣೆ ಕೂಗಿದರು. 

ಸಭಾಂಗಣದ ಬಾಲ್ಕನಿಯಲ್ಲಿ ಕುಳಿತಿದ್ದ ಕೆಲವರು ರಾಜ್ಯಪಾಲರು ಭಾಷಣ ಶುರುಮಾಡುತ್ತಿದ್ದಂತೆಯೇ ಗದ್ದಲ ಆರಂಭಿಸಿದರು. ‘ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿ, ಧಿಕ್ಕಾರ ಕೂಗಿದರು. ಕಪ್ಪು ಬಾವುಟವನ್ನೂ ಪ್ರದರ್ಶಿಸಿದರು. ಈ ದಿಢೀರ್ ಬೆಳವಣಿಗೆಯಿಂದ ಮುಜುಗರಕ್ಕೊಳಗಾದಂತೆ ಕಂಡುಬಂದ ರಾಜ್ಯಪಾಲರು ಗದ್ದಲದ ನಡುವೆಯೇ ಭಾಷಣ ಮುಂದುವರೆಸಿದರು. ಆಗ ಸಭಾಂಗಣ ಪ್ರವೇಶಿಸಿದ ಪೊಲೀಸರು ಘೋಷಣೆ ಕೂಗುತ್ತಿದ್ದವರನ್ನು ಹೊರಗೆ ಕರೆತಂದು ಪೊಲೀಸ್‌ ವಾಹನದಲ್ಲಿ ಕರೆದೊಯ್ದರು.

ಭಾಷಣದಲ್ಲಿ ಈ ವಿಚಾರ ಪ್ರಸ್ತಾಪಿಸಿದ ರಾಜ್ಯಪಾಲರು, ‘ಘೋಷಣೆ ಕೂಗಿದ ಗುಂಪಿನ ನಾಲ್ವರು ಬಂದು ಘಟಿಕೋತ್ಸವದ ನಂತರ ನನ್ನನ್ನು ಭೇಟಿಯಾಗಲಿ. ಅವರ ಸಮಸ್ಯೆ ಆಲಿಸುವೆ. ಏನಾದರೂ ತೊಂದರೆ ಆಗಿದ್ದರೆ ಪರಿಹರಿಸುವೆ’ ಎಂದು ಹೇಳಿದರು.

ಕರೆಸಿ ಅಹವಾಲು ಆಲಿಸಿದರು:

ಘಟಿಕೋತ್ಸವ ಸಮಾರಂಭದ ನಂತರ ವಿಶ್ವವಿದ್ಯಾಲಯದ ಆಡಳಿತ ಕಚೇರಿಗೆ ತೆರಳಿದ ರಾಜ್ಯಪಾಲರು ಅಲ್ಲಿಗೆ ಕುಲಪತಿ  ಅವರನ್ನು ಕರೆಸಿಕೊಂಡು ಚರ್ಚಿಸಿದರು.

ನಂತರ ರಾಜ್ಯಪಾಲರ ಸೂಚನೆಯಂತೆ ಪೊಲೀಸರ ವಶದಲ್ಲಿದ್ದ ನಾಲ್ವರು ಪ್ರತಿಭಟನಕಾರರನ್ನು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅಲ್ಲಿಗೆ ಕರೆತಂದರು. ಕೆಲಹೊತ್ತು ಅವರ ಅಹವಾಲು ಆಲಿಸಿದ ರಾಜ್ಯಪಾಲರು ಅಲ್ಲಿಂದ ತೆರಳಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿಲು ನಿರಾಕರಿಸಿದರು.

11 ಮಂದಿ ವಶಕ್ಕೆ:

‘ಗದ್ದಲಕ್ಕೆ ಸಂಬಂಧಿಸಿದಂತೆ ಎನ್‌ಎಸ್‌ಯುಐ ಸಂಘಟನೆಯ 11 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದೇವೆ. ಇವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳೇ ಇದ್ದಾರೆ. ಇವರೆಲ್ಲರೂ ಘಟಿಕೋತ್ಸವದ ಆಹ್ವಾನಪತ್ರ ಹಾಗೂ ಗುರುತಿನ ಚೀಟಿ ತೋರಿಸಿ ಸಭಾಂಗಣದ ಒಳಗೆ ಪ್ರವೇಶ ಪಡೆದಿದ್ದರು’ ಎಂದು ಎಸ್ಪಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಲಿಖಿತವಾಗಿ ದೂರು ಕೊಡಲು ಸೂಚನೆ’

ರಾಜ್ಯಪಾಲರ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಎನ್‌ಎಸ್‌ಯುಐ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ‘ಕುಲಪತಿ ವಿರುದ್ಧ ದೂರುಗಳು ಇದ್ದರೆ ಲಿಖಿತವಾಗಿ ಕೊಡಿ. ತನಿಖೆ ಮಾಡಿಸುವೆ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು. ‘ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಬದಲಿಗೆ ಅವರ ಗಮನಸೆಳೆಯಬೇಕಿತ್ತು. ಅದರಲ್ಲಿ ಯಶಸ್ವಿಯಾಗಿದ್ದೇವೆ’ ಎಂದರು. ಇದೊಂದು ಷಡ್ಯಂತ್ರ: ‘ಕುವೆಂಪು ವಿಶ್ವವಿದ್ಯಾಲಯದಲ್ಲಿ ಇನ್ನು 12 ದಿನ ಮಾತ್ರ ನನ್ನ ಅಧಿಕಾರಾವಧಿ ಇದೆ. ಇಲ್ಲಿಂದ ತೆರಳಿದ ನಂತರ ನನಗೆ ಬೇರೆ ಕಡೆ ಏನಾದರೂ ಸ್ಥಾನಮಾನ ಸಿಗಬಹುದು. ಅದನ್ನು ತಪ್ಪಿಸಬೇಕು ಎಂಬ ದುರುದ್ದೇಶದಿಂದ ಕೆಲವರು ಈ ರೀತಿ ಷಡ್ಯಂತ್ರ ಮಾಡಿದ್ದಾರೆ’ ಎಂದು ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ತನಿಖೆಗೆ ಸರ್ಕಾರದಿಂದ ಸಮಿತಿ ರಚನೆ

ಕುವೆಂಪು ವಿಶ್ವವಿದ್ಯಾಲಯದಲ್ಲಿ ನಿಯಮಾವಳಿ ಉಲ್ಲಂಘನೆ ಹಾಗೂ ಭ್ರಷ್ಟಾಚಾರದ ಬಗ್ಗೆ ಸಿಂಡಿಕೇಟ್‌ ಸದಸ್ಯರೊಬ್ಬರು ಸಲ್ಲಿಸಿದ್ದ ದೂರು ಆಧರಿಸಿ ಸರ್ಕಾರವು 2023ರ ಮೇ 29ರಂದು ಶಿವಮೊಗ್ಗದ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎಚ್.ಬಿ.ರವೀಂದ್ರನಾಥ ನೇತೃತ್ವದಲ್ಲಿ ತನಿಖೆಗೆ ಸಮಿತಿ ರಚನೆ ಮಾಡಿತ್ತು. ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ರಿಜಿಸ್ಟ್ರಾರ್ ಈ ಸಮಿತಿಯ ಸದಸ್ಯರಾಗಿದ್ದರು. ಪ್ರಾಥಮಿಕ ತನಿಖೆಯನ್ನು 20 ದಿನಗಳೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ ಸಮಿತಿ ಇದುವರೆಗೂ ವಿಚಾರಣೆಗಾಗಿ ವಿಶ್ವವಿದ್ಯಾಲಯಕ್ಕೆ ಬಂದಿಲ್ಲ ಎಂದು ಕುಲಪತಿ ಮೂರು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT