ಭಾನುವಾರ, ಆಗಸ್ಟ್ 1, 2021
28 °C
ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಿರಿಮೆ

ರಾಜ್ಯಕ್ಕೆ ಮೂರನೇ ಸ್ಥಾನಗಳಿಸಿದ ಅಖಿಲಾ, ಸಿಂಧು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅಖಿಲಾ ಯು. ಹೆಗಡೆ ವಿಜ್ಞಾನ ವಿಭಾಗದಲ್ಲಿ, ಸಿಂಧು ಜಿ.ಎಂ. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಅಖಿಲಾ 600ಕ್ಕೆ 594 ಅಂಕಗಳೊಂದಿಗೆ ಶೇ 99 ಫಲಿತಾಂಶ ಪಡೆದಿದ್ದು, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್ ಸೈನ್ಸ್, ಸಂಸ್ಕೃತ ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ. ಅಖಿಲಾ ಇಲ್ಲಿನ ವಿನೋಬನಗರ ವಾಸಿಯಾಗಿದ್ದು, ಸಿದ್ದಾಪುರದ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಯು.ಟಿ.ಹೆಗಡೆ, ಜ್ಯೋತಿ ದಂಪತಿಯ ಪುತ್ರಿಯಾಗಿದ್ದಾರೆ.

ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಸಂಭ್ರಮದಲ್ಲಿ ಕಾಲೇಜಿಗೆ ಆಗಮಿಸಿದ್ದ ಅವರು ‘ಶೈಕ್ಷಣಿಕ ವರ್ಷದ ಆರಂಭದಿಂದಲೂ ಪ್ರತಿದಿನ 8ರಿಂದ 10 ತಾಸು ಓದುತ್ತಿದ್ದೆ. ಅಷ್ಟೇ ಚೆನ್ನಾಗಿ ಊಟ, ನಿದ್ರೆಯನ್ನೂ ಮಾಡುತ್ತಿದ್ದೆ. ಆ ಪರಿಶ್ರಮದ ಫಲ ಈಗ ದೊರಕಿದೆ. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್ ಮಾಡುವ ಗುರಿ ಹೊಂದಿದ್ದೇನೆ’ ಎಂದರು.

ಮಗಳ ಸಾಧನೆಯಿಂದ ಹರ್ಷಿತರಾಗಿದ್ದ ಯು.ಟಿ.ಹೆಗಡೆ, ‘ಅನೇಕ ಪೋಷಕರು ತಮ್ಮ ಮಕ್ಕಳನ್ನು ಪಿಯುಸಿ ವಿದ್ಯಾಭ್ಯಾಸಕ್ಕೆ ದುಬಾರಿ ಶುಲ್ಕ ತೆತ್ತು ದೂರದ ಊರುಗಳಿಗೆ ಕಳುಹಿಸುತ್ತಾರೆ. ಸಾಗರದಲ್ಲಿ ಸರ್ಕಾರಿ ಜ್ಯೂನಿಯರ್ ಕಾಲೇಜು ಅತ್ಯುತ್ತಮವಾಗಿದೆ. ಹೀಗಾಗಿ ನನ್ನ ಮಗಳನ್ನು ನಮ್ಮ ಜೊತೆಗೆ ಇಟ್ಟುಕೊಂಡು ಇಲ್ಲಿಯೆ ಸೇರಿಸಬೇಕು ಎಂದು ದೃಢ ನಿಶ್ಚಯ ಮಾಡಿದ್ದೆ. ಆ ತೀರ್ಮಾನ ಈಗ ಸರಿಯಾಗಿದೆ’ ಎಂದು ಹೇಳಿದರು.

ವಾಣಿಜ್ಯ ವಿಭಾಗದಲ್ಲಿ 600ಕ್ಕೆ 595 ಅಂಕಗಳಿಸಿರುವ ಸಿಂಧು ಜಿ.ಎಂ. ಅರ್ಥಶಾಸ್ತ್ರ, ಲೆಕ್ಕಶಾಸ್ತ್ರ, ಕಂಪ್ಯೂಟರ್ ಸೈನ್ಸ್, ವ್ಯವಹಾರ ಅಧ್ಯಯನ, ಸಂಸ್ಕೃತ ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ. ಗೀಜಗಾರು ಗ್ರಾಮದ ಕೃಷಿಕ ಮಂಜುನಾಥ ಜಿ.ಎಚ್. ಶಾರದಾ ಜಿ. ದಂಪತಿ ಪುತ್ರಿಯಾಗಿರುವ ಸಿಂಧು ಜಿ.ಎಂ. ಭವಿಷ್ಯದಲ್ಲಿ ಬಿಕಾಂ ಮುಗಿಸಿ ಲೆಕ್ಕಪರಿಶೋಧಕಿ ಆಗುವ ಗುರಿ ಹೊಂದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಸಕ ಎಚ್.ಹಾಲಪ್ಪ ಹರತಾಳು, ಕಾಲೇಜಿನ ಪ್ರಾಂಶುಪಾಲ ಶಂಕರಮೂರ್ತಿ, ಉಪನ್ಯಾಸಕ ವೃಂದ, ಸಿಬ್ಬಂದಿ ವರ್ಗ ಅಭಿನಂದನೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.