ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿನಂಚಿನ ದೊಡ್ಡೇರಿ ಗ್ರಾಮಕ್ಕೆ ಮಳೆ ನೀರೇ ಆಸರೆ

ಸ್ಮಶಾನ, ಏತ ನೀರಾವರಿ ಭಾಗ್ಯ ಕಾಣದ ಕುಗ್ರಾಮ
Last Updated 17 ಏಪ್ರಿಲ್ 2022, 5:32 IST
ಅಕ್ಷರ ಗಾತ್ರ

ಭದ್ರಾವತಿ: ಸುತ್ತಲೂ ಬೆಟ್ಟದ ಸಾಲು, ಬೆಟ್ಟದ ಕೆಳಗೆ ದೊಡ್ಡೇರಿ ಮೈನರ್ ಫಾರೆಸ್ಟ್. ಅದರಿಂದ ಒಂದು ಕಿ.ಮೀ. ಒಳ ಬಂದರೆ ಹಚ್ಚ ಹಸಿರುವ ಸೌಂದರ್ಯದ ನಡುವೆ ತಲೆ ಎತ್ತಿರುವ ಗ್ರಾಮದಲ್ಲಿ ಸತ್ತಾಗ ಹೆಣ ಹೂಳಲು ಬೇಕಾದ ಸ್ಮಶಾನ ಮಾತ್ರ ಇಲ್ಲ.

ಗ್ರಾಮಕ್ಕೆ ಪಂಚಾಯಿತಿ ಸ್ಥಾನಮಾನ ಸಿಕ್ಕಿದ್ದರೂ ಸಮಸ್ಯೆಗಳ ಸವಾಲುಗಳ ಪಟ್ಟಿ ಮಾತ್ರ ಬಹಳ ದೊಡ್ಡದಿದೆ. 13 ಹಳ್ಳಿಗಳನ್ನು ಒಟ್ಟುಗೂಡಿಸಿದ ಪಂಚಾಯಿತಿ ಭಾಗ್ಯ ದೊಡ್ಡೇರಿ ಗ್ರಾಮಕ್ಕೆ ಸಿಕ್ಕಿದೆ. ಇರುವ ಪಂಚಾಯಿತಿ ಕಚೇರಿಗೆ ಕಾಂಪೌಂಡ್ ಭಾಗ್ಯ ಸಿಕ್ಕಿಲ್ಲ. ಬದಲಾಗಿ ಗುಡ್ಡದ ಇಳಿಜಾರಿನ ನಡುವೆ ತಲೆ ಎತ್ತಿರುವ ಕಚೇರಿಯ ಸುತ್ತಲಿರುವ ಸಮುದಾಯ ಭವನ, ಗ್ರಂಥಾಲಯ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ.

ಬಹುಪಾಲು ಪರಿಶಿಷ್ಟ ಜಾತಿ, ವರ್ಗದ ಜನರೇ ಹೆಚ್ಚಿರುವ ಈ ಗ್ರಾಮದಲ್ಲಿ ಒಕ್ಕಲಿಗರು, ಅಲ್ಪಸಂಖ್ಯಾತರು ಸೇರಿ 870 ಜನಸಂಖ್ಯೆ ಇರುವ ದೊಡ್ಡೇರಿಯಲ್ಲಿ 200 ಮನೆಗಳು ಇವೆ.

ವಿದ್ಯೆ ಕಲಿತ 150 ಮಂದಿ ಇದ್ದರೆ, ಅವಿದ್ಯಾವಂತರ ಸಂಖ್ಯೆ 250 ಮೀರಿದೆ. ಇವರ ಸಂಖ್ಯೆಯ ನಡುವೆ ಉಳಿದಿರುವರೇ ಶಾಲಾ, ಕಾಲೇಜು ಕಲಿಯುತ್ತಿರುವ ವಿದ್ಯಾರ್ಥಿಗಳು. ಬಹುತೇಕ ಕೃಷಿ, ಹೈನುಗಾರಿಕೆ ಹಾಗೂ ಕುರಿ, ಕೋಳಿ ಸಾಕಾಣಿಕೆ ವೃತ್ತಿ ಮಾಡುವ ಇಲ್ಲಿನ ಜನರ ಪಾಲಿಗೆ ಮಳೆ ನೀರೇ ಆಧಾರ.

‘ಗ್ರಾಮದಲ್ಲಿ ಹನುಮನಕೆರೆ, ಚೌಡಮ್ಮನ ಕೆರೆ ಇದ್ದರೂ ಎರಡರಲ್ಲೂ ಹೂಳು ತುಂಬಿದೆ. ಬೆಳೆಗೆ ಮಳೆ ನೀರೆ ಇಲ್ಲಿ ಅನಿವಾರ್ಯ ಎನ್ನುವ ಪರಿಸ್ಥಿತಿ ಇದೆ. ಭದ್ರಾ ಏತ ನೀರಾವರಿ ಯೋಜನೆಯಲ್ಲಿ ಇಲ್ಲಿಗೆ ಹರಿಯಬೇಕಾದ ನೀರು ಕೆರೆಗೆ ಹರಿಯದೆ ಇರುವುದು ನಮ್ಮ ದೌರ್ಭಾಗ್ಯ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಾಂತಕುಮಾರ್.

‘ಗ್ರಾಮದ ಸುತ್ತ ಅರಣ್ಯ ಪ್ರದೇಶ ಇರುವ ಕಾರಣ ಕಾಡು ಪ್ರಾಣಿಗಳು ಬಾರದಂತೆ ಗ್ರಾಮದ ಗಡಿ ಭಾಗದಲ್ಲಿ ಟ್ರಂಚ್ ನಿರ್ಮಿಸಲಾಗಿದೆ. ಆದರೂ ಆನೆಗಳ ಹಾವಳಿ ಇದೆ. ಕಾಡಿನಲ್ಲೇ ಹೆಣ ಹೂಳುವ ಪರಿಸ್ಥಿತಿ ಈಗಲೂ ಇದೆ. ಹಳ್ಳಿಗೆ ಸ್ಮಶಾನ ಭಾಗ್ಯ ಮಾತ್ರ ಇನ್ನು ಸಿಕ್ಕಿಲ್ಲ’ ಎಂದು ಬೇಸರಿಸುತ್ತಾರೆ ಅವರು.

ಗ್ರಾಮದಲ್ಲಿ ಸರ್ಕಾರಿ ಶಾಲೆಯ ಜತೆಗೆ ಮೊರಾರ್ಜಿ ವಸತಿ ಶಾಲೆ ಇದೆ. ಆದರೆ ಆಟದ ಮೈದಾನವೇ ಇಲ್ಲ. ಇಡೀ ಊರಿಗೆ ಒಂದೂ ಮೈದಾನದ ಭಾಗ್ಯವೂ ಇಲ್ಲ. ಸ್ಮಶಾನ ಸ್ಥಳಕ್ಕಾಗಿ ಸಭೆ ನಡೆದರೂ ಅಧಿಕೃತ ಘೋಷಣೆ ಮಾತ್ರ ಆಗಿಲ್ಲ ಎಂದು ಬೇಸರಿಸುತ್ತಾರೆ ಗ್ರಾಮಸ್ಥರು.

ಭದ್ರಾವತಿ ಕಡೆಯಿಂದ 16 ಕಿ.ಮೀ. ದೂರದಲ್ಲಿರುವ ಈ ಗ್ರಾಮಕ್ಕೆ ಪ್ರಮುಖ ಕೂಡು ರಸ್ತೆಗಳ ಸಂಪರ್ಕ ಇದ್ದರೂ ಗ್ರಾಮದ ಜಮೀನುಗಳಿಗೆ ಹೋಗುವ ರಸ್ತೆ ಮಾರ್ಗಗಳು ವ್ಯವಸ್ಥಿತವಾಗಿಲ್ಲ. ಆಸ್ಪತ್ರೆಗೆ ಹೋಗಲು 7 ಕಿ.ಮೀ. ಸಾಗಿ ಅಂತರಗಂಗೆ ಗ್ರಾಮಕ್ಕೆ ಹೋಗುವ ಪರಿಸ್ಥಿತಿ ಇಲ್ಲಿನ ಜನರದ್ದು.

ಇಡೀ ಗ್ರಾಮಕ್ಕೆ ಸರ್ಕಾರಿ ಕೆಲಸ ಮಾಡುವ 7 ಮಂದಿ ಇದ್ದರೆ, ಬೆಂಗಳೂರಿಗೆ ಹೋಗಿ ಕೆಲಸ ಮಾಡುತ್ತಿರುವವರು 30 ಜನರಿದ್ದಾರೆ. ಹಿರಿಯ ನಾಗರಿಕರು 25 ಮಂದಿ ಇದ್ದಾರೆ ಎಂದು ಅಂಕಿ ಸಂಖ್ಯೆ ತೆರೆದಿಡುವ ಶಾಂತು ಅವರು, ‘ಅಗತ್ಯ ಇರುವ ಸೌಲಭ್ಯ ಪಡೆಯಲು ಇನ್ನು ಓಡಾಟ ಮಾಡುವ ಸ್ಥಿತಿ ಇದೆ’ ಎಂದು ಬೇಸರಿಸುತ್ತಾರೆ.

ಕಾಡಿನಂಚಿನ ದೊಡ್ಡೇರಿ ಪರಿಸರ ಸೌಂದರ್ಯ ರಾಶಿಯ ನಡುವೆ ಪಸರಿಸಿಕೊಂಡಿದ್ದರೂ ಹಲವು ಮೂಲಸೌಕರ್ಯ ಕೊರತೆಯಿಂದ ಪರದಾಟ ನಡೆಸಿರುವ ಇಲ್ಲಿನ ನಾಗರಿಕರ ಬೇಡಿಕೆ ಪಟ್ಟಿ ಮಾತ್ರ ಬಹು ದೊಡ್ಡದಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

30 ಕುಟುಂಬಗಳಿಗೆ ಪಡಿತರ ಚೀಟಿ ಇಲ್ಲ. ಕುಡಿಯುವ ನೀರಿಗೆ ಕೊಳವೆಬಾವಿಯೇ ಆಸರೆ. ಇದಕ್ಕೆ ಟ್ಯಾಂಕ್ ನಿರ್ಮಿಸಿ ನೀರು ಹರಿಸುವ ವ್ಯವಸ್ಥೆ ಇದೆ. ಭದ್ರಾನದಿ ನೀರು ಹರಿಸುವ ಯೋಜನೆ ಇನ್ನೂ ಕನಸಿನ ಮಾತಾಗಿದೆ.
ಶಾಂತಕುಮಾರ್, ಗ್ರಾ.ಪಂ. ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT