ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಪಡೆದು ಹೊರಗುತ್ತಿಗೆ ನೌಕರರ ನೇಮಕಾತಿ

ಶಿಕಾರಿಪುರ: ಪುರಸಭೆ ವಿಶೇಷ ಸಭೆಯಲ್ಲಿ ಪುರಸಭೆ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ಸದಸ್ಯರ ಗಂಭೀರ ಆರೋಪ
Last Updated 18 ಜೂನ್ 2021, 5:04 IST
ಅಕ್ಷರ ಗಾತ್ರ

ಶಿಕಾರಿಪುರ: ಪುರಸಭೆಗೆ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲು ಪುರಸಭೆ ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಹಣ ಪಡೆದಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ಹುಲ್ಮಾರ್ ಮಹೇಶ್ ಆರೋಪಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಪುರಸಭೆ ಸದಸ್ಯರ ವಿಶೇಷ ಸಭೆಯಲ್ಲಿ ಅವರು ಈ ಆರೋಪ ಮಾಡಿದರು.

‘ಪುರಸಭೆ ಹೊರಗುತ್ತಿಗೆ ನೌಕರರ ನೇಮಕಾತಿ ಸಂದರ್ಭದಲ್ಲಿ ಕಾನೂನಾತ್ಮಕವಾಗಿ ಪ್ರಕ್ರಿಯೆ ನಡೆಸದೆ 15 ಮಂದಿ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲು ಒಬ್ಬರಿಂದ ₹ 1 ಲಕ್ಷವನ್ನು ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಪಡೆದುಕೊಂಡಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ ಅವರು, ಈ ಬಗ್ಗೆ ಪುರಸಭೆ ಅಧ್ಯಕ್ಷರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ ಉತ್ತರಿಸದೇ ಸಭೆಯಿಂದ ಹೊರ ನಡೆದರು. ಅಧ್ಯಕ್ಷರು ಸಭೆಯಿಂದ ಸ್ಪಷ್ಟನೆ ನೀಡದೇ ತೆರಳಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಪುರಸಭೆ ಮುಂಭಾಗ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಸಭೆಯಲ್ಲಿ ಪಟ್ಟಣದ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ನಿರ್ವಹಣೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ನೀಡುವ ವಿಷಯ ಕುರಿತು ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಎಸ್.ಪಿ. ನಾಗರಾಜ್ ಗೌಡ್ರು, ‘ಪಟ್ಟಣದಲ್ಲಿ ಕುಡಿಯುವ ನೀರು ಸರಬರಾಜು ನಿರ್ವಹಣೆಯನ್ನು ಪುರಸಭೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲೂ ಪುರಸಭೆಯೇ ನೀರು ಸರಬರಾಜು ಕಾರ್ಯವನ್ನು ನಿರ್ವಹಣೆ ಮಾಡಬೇಕು. ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಗೆ ನೀರು ಸರಬರಾಜು ನಿರ್ವಹಣೆ ಮಾಡಲು ಅವಕಾಶ ನೀಡುವುದು ಬೇಡ. ಈ ಪ್ರಕ್ರಿಯೆಯಿಂದ ನೀರು ಸರಬರಾಜು ಕೆಲಸ ಮಾಡುತ್ತಿರುವ ಪುರಸಭೆ ಸಿಬ್ಬಂದಿಗೆ ತೊಂದರೆಯಾಗುತ್ತದೆ’ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸದಸ್ಯ ಹುಲ್ಮಾರ್ ಮಹೇಶ್, ‘ಒಳಚರಂಡಿ ಕಾಮಗಾರಿ ಸಂಪೂರ್ಣವಾಗಿ ಮುಗಿದಿಲ್ಲ. ಕಾಮಗಾರಿಯನ್ನು ಕರ್ನಾಟಕ ಗೃಹ ಮಂಡಳಿ ನಡೆಸುತ್ತಿದ್ದು, ನಿರ್ವಹಣೆಯನ್ನು ಕೆಲವು ದಿನಗಳ ಕಾಲ ಕರ್ನಾಟಕ ಗೃಹ ಮಂಡಳಿ ಮಾಡಬೇಕು. ಒಳಚರಂಡಿ ಕಾಮಗಾರಿಯನ್ನು ಪುರಸಭೆ ವ್ಯಾಪ್ತಿಯ ಬಡಾವಣೆಗಳನ್ನು ಮೀರಿ ಕಂದಾಯ ಭೂಮಿಯ ಲೇಔಟ್‌ಗಳಲ್ಲಿ ನಡೆಸುತ್ತಿದ್ದಾರೆ. ಕಂದಾಯ ಭೂಮಿಯಲ್ಲಿ ಒಳಚರಂಡಿ ಕಾಮಗಾರಿ ಏಕೆ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

ಕರ್ನಾಟಕ ಗೃಹ ಮಂಡಳಿ ಎಂಜಿನಿಯರ್ ಶರಣಪ್ಪ ಪ್ರತಿಕ್ರಿಯಿಸಿ, ‘ಪಟ್ಟಣದಲ್ಲಿ ಒಟ್ಟು 92 ಕಿ.ಮೀ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ನಡೆಸುವ ಯೋಜನೆ ಇತ್ತು. ಪ್ರಸ್ತುತ 88 ಕಿ.ಮೀ. ಪ್ರದೇಶದಲ್ಲಿ ಕಾಮಗಾರಿ ಮುಗಿದಿದೆ. ಕಂದಾಯ ಭೂಮಿಯಲ್ಲಿ ಕಾಮಗಾರಿ ನಡೆಸಿಲ್ಲ. ಪಟ್ಟಣ ಬೆಳೆದಂತೆ ಕಾಮಗಾರಿ ಮುಂದುವರಿಸಿದ್ದೇವೆ’ ಎಂದು ಸ್ಪಷ್ಟನೆ ನೀಡಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರೇಣುಕಾಸ್ವಾಮಿ, ಸದಸ್ಯರಾದ ಟಿ.ಎಸ್.ಮೋಹನ್, ಗುರುರಾಜ್ ರಾವ್ ಜಗತಾಪ್, ರೂಪಕಲಾ ಹೆಗಡೆ, ಸುರೇಶ್ ರಾಮಯ್ಯ, ಜೀನಳ್ಳಿ ಪ್ರಶಾಂತ್, ಉಳ್ಳಿ ದರ್ಶನ್, ಕಮಲಮ್ಮ ಹುಲ್ಮಾರ್, ರೋಷನ್, ಶ್ವೇತಾ ರವೀಂದ್ರ, ಉಮಾವತಿ, ಜಯಶ್ರೀ ಹೇಮರಾಜ್, ರೇಖಾಬಾಯಿ ಮಂಜುಸಿಂಗ್, ರೂಪಾ ಮಂಜುನಾಥ್, ಸುನಂದಾ ಮಂಜುನಾಥ್, ಜ್ಯೋತಿ ಯೋಗೀಶ್, ವಿಶ್ವನಾಥ್, ಶಿವನಗೌಡ್ರು, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಆರೋಗ್ಯ ನಿರೀಕ್ಷಕ ರಾಜ್ ಕುಮಾರ್, ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT