ಗುರುವಾರ , ಸೆಪ್ಟೆಂಬರ್ 23, 2021
27 °C
ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ; ಮೂಲೆಗುಂಪಾದ ಸರ್ಕಾರಿ ಯೋಜನೆ

ವಿಸ್ಮಯಲೋಕ ತೆರೆಯದ ವಿಜ್ಞಾನ ಉಪ ಕೇಂದ್ರ

ಗಣೇಶ್‌ ತಮ್ಮಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜನಪ್ರತಿನಿಧಿಗಳು, ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಪರಿಣಾಮ ತಾಲ್ಲೂಕಿನ ಆಯನೂರು ಗ್ರಾಮದ ಪ್ರಾದೇಶಿಕ ವಿಜ್ಞಾನ ಉಪ ಕೇಂದ್ರದ ನೂತನ ಕಟ್ಟಡ ಭಣಗುಡುತ್ತಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕೇಂದ್ರ ಆರಂಭಗೊಂಡು ಏಳು ವರ್ಷಗಳಾಗುತ್ತಿದ್ದವು. ರಾಜ್ಯದಲ್ಲಿ ವಿಶಿಷ್ಟ ಪ್ರವಾಸಿ ತಾಣವಾಗಿರುವ ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ ಸೇರ್ಪಡೆಯಾಗುತ್ತಿತ್ತು. ಈಗ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಏನಿದು ಪ್ರಾದೇಶಿಕ ವಿಜ್ಞಾನ ಉಪಕೇಂದ್ರ: ವಿದ್ಯಾರ್ಥಿಗಳು ಹಾಗೂ ವಿಜ್ಞಾನ ಆಸಕ್ತರಿಗೆ ಪರಿಸರದ ಜತೆಗೆ ವಿಜ್ಞಾನ ಕ್ಷೇತ್ರದ ವಿಸ್ಮಯಗಳ ಕುರಿತು ಅಧ್ಯಯನ ಕೈಗೊಳ್ಳಲು, ಮಕ್ಕಳಲ್ಲಿ ವಿಜ್ಞಾನ, ಗಣಿತ ವಿಷಯದಲ್ಲಿ ಕಲಿಕಾಸಕ್ತಿ ಮೂಡಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಯೋಜನೆ ಆರಂಭಿಸಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶೇ 50 ಅನುದಾನದಲ್ಲಿ ಕೇಂದ್ರ ಸ್ಥಾಪಿಸಲಾಗಿದೆ. ಪ್ರಾದೇಶಿಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅನುದಾನದೊಂದಿಗೆ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಫ್ಸ್‌) ಮೂಲಕ ಅನುಷ್ಠಾನಗೊಂಡಿದೆ.

ವಾಸ್ತವ ಸ್ಥಿತಿ ಏನು?: 2013ರಲ್ಲಿ ರಾಜ್ಯ ಸರ್ಕಾರ ಕಟ್ಟಡ ನಿರ್ಮಾಣಕ್ಕೆ ₹ 2.60 ಕೋಟಿ ವೆಚ್ಚ ನಿಗದಿ ಮಾಡಿತ್ತು. ಸರ್ಕಾರದಿಂದ ₹ 1.30 ಕೋಟಿ ಹಾಗೂ ಜನಪ್ರತಿನಿಧಿಗಳಿಂದ ₹ 1.30 ಕೋಟಿ ಸಂಗ್ರಹಿಸಿ ಕಾಮಗಾರಿ ಆರಂಭಿಸಲಾಗಿತ್ತು. ಸರ್ಕಾರದ ₹ 1.30 ಕೋಟಿ ಜತೆಗೆ ಜನಪ್ರತಿನಿಧಿಗಳಿಂದ ಸಂಗ್ರಹಿಸಿದ ₹ 67 ಲಕ್ಷ ಮೊತ್ತವನ್ನು 2013ರಲ್ಲೇ ನೀಡಲಾಗಿದೆ. ಆದರೆ, ಇದುವರಿಗೆ ಪ್ರಾದೇಶಿಕ ವಿಜ್ಞಾನ ಉಪ ಕೇಂದ್ರ  ಆರಂಭವಾಗಿಲ್ಲ. ಇದಕ್ಕೆ ಅನುದಾನದ ಕೊರತೆ ಎಂಬ ಆರೋಪ ಒಂದೆಡೆಯಾದರೆ, ಇನ್ನೊಂದೆಡೆ ಕೆಲ ತಾಂತ್ರಿಕ ದೋಷಗಳ ಕಾರಣದಿಂದ  ವಿಳಂಬ ವಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಪುಂಡರ ಅಡ್ಡೆ: ಕೇಂದ್ರ ಆರಂಭವಾಗದ ಪರಿಣಾಮ ಜಿಲ್ಲೆಯ ಪುಟಾಣಿ ವಿಜ್ಞಾನಿಗಳ ಭವಿಷ್ಯಕ್ಕೆ ಬೆಳಕಾಗಬೇಕಿದ್ದ ಪ್ರಾದೇಶಿಕ ವಿಜ್ಞಾನ ಉಪ ಕೇಂದ್ರ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕೇಂದ್ರದ ಸುತ್ತ ಒಮ್ಮೆ ಕಣ್ಣಾಡಿಸಿದರೆ ಸಾಕು ಎಲ್ಲೆಂದರಲ್ಲಿ ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು, ಗುಟ್ಕಾ, ಸಿಗರೇಟ್‌ ಪ್ಯಾಕ್‌ಗಳೇ ರಾರಾಜಿಸುತ್ತವೆ. ಕೇಂದ್ರದ ಸುತ್ತ ಹಾಕಿರುವ ಗಾಜು ಪುಡಿಪುಡಿಯಾಗಿವೆ. ಕೆಲವರು ಇಲ್ಲಿಗೆ ಮದ್ಯದ ಬಾಟಲಿ ಸಮೇತ ಬಂದು ಪಾರ್ಟಿ ಮಾಡಿಕೊಂಡು ಹೋಗುತ್ತಾರೆ. ಕೇಂದ್ರವನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂಬುದು ಸ್ಥಳೀಯರ ಆರೋಪ.

ಪರಿಶೀಲನಾ ಸಮಿತಿ ಭೇಟಿ
ಈಚೆಗೆ ಬೆಂಗಳೂರಿನ ಪರಿಶೀಲನಾ ಸಮಿತಿಯೊಂದು ಪ್ರಾದೇಶಿಕ ವಿಜ್ಞಾನ ಉಪ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೇಂದ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಯ ಸಾಧಕ, ಬಾಧಕಗಳ ಬಗ್ಗೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ವರದಿ ಬಂದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
– ನಾಗೇಂದ್ರ ಹೊನ್ನಾಳಿ, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.