ಶನಿವಾರ, ಮೇ 28, 2022
31 °C
ನಗರಸಭೆ ಆಡಳಿತದಲ್ಲಿ ಮಹತ್ವದ ಬದಲಾವಣೆ

ಸಾಗರ: ಸ್ವತ್ತಿನ ದಾಖಲೆ ಪಡೆಯಲು ಇ–ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯ

ಎಂ. ರಾಘವೇಂದ್ರ Updated:

ಅಕ್ಷರ ಗಾತ್ರ : | |

Prajavani

ಸಾಗರ: ನಗರ ವ್ಯಾಪ್ತಿಯ ಸಾರ್ವಜನಿಕರು ಇನ್ನು ಮುಂದೆ ತಮ್ಮ ನಿವೇಶನ, ಮನೆಗಳಿಗೆ ಸಂಬಂಧಿಸಿ ಆಸ್ತಿ ತೆರಿಗೆ ರಿಜಿಸ್ಟರ್‌ ದಾಖಲೆಯಾಗಿರುವ ನಮೂನೆ-3ನ್ನು ಪಡೆಯಲು ತಮ್ಮ ಸ್ವತ್ತಿನ ಖಾತೆಯನ್ನು ಇ– ತಂತ್ರಾಂಶದಲ್ಲಿ ನೋಂದಣಿ ಮಾಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಮೂಲಕ ನಗರಸಭೆ ಆಡಳಿತದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

2016ನೇ ಸಾಲಿನಲ್ಲೇ ಪೌರಾಡಳಿತ ನಿರ್ದೇಶನಾಲಯದ ಪೌರ ಸುಧಾರಣಾ ಕೋಶವು ಸುತ್ತೋಲೆಯೊಂದನ್ನು ಹೊರಡಿಸಿದೆ. ಈ ಸುತ್ತೋಲೆಯ ಪ್ರಕಾರ ಆಸ್ತಿಗಳ ಹಕ್ಕು ವರ್ಗಾವಣೆ ಕೋರಿ ಬರುವ ಅರ್ಜಿಗಳನ್ನು ಇ– ತಂತ್ರಾಂಶದಲ್ಲಿ ನಿರ್ವಹಿಸಿ ಪೌರಾಯುಕ್ತರ ಡಿಜಿಟಲ್ ಸಹಿಯುಳ್ಳ ನಮೂನೆ-3ನ್ನು ಕಡ್ಡಾಯವಾಗಿ ತಂತ್ರಾಂಶದಿಂದ ಸೃಜಿಸಿ ನಾಗರಿಕರಿಗೆ ನೀಡಲು ಸೂಚಿಸಲಾಗಿದೆ.

ಆದಾಗ್ಯೂ ಈವರೆಗೂ ಪೌರಾಯುಕ್ತರ ಕೈ ಬರಹದ ಸಹಿಯುಳ್ಳ ನಮೂನೆ-3ನ್ನು ನಾಗರಿಕರಿಗೆ ನೀಡಲಾಗುತ್ತಿದೆ. ಆದರೆ 2016ರ ಸುತ್ತೋಲೆಯಲ್ಲೇ ಈ ರೀತಿ ಪೌರಾಯುಕ್ತರ ಕೈ ಬರಹದ ಸಹಿಯುಳ್ಳ ನಮೂನೆ-3ನ್ನು ನೀಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

ನಾಗರಿಕರು ತಮ್ಮ ಸ್ವತ್ತಿನ ಖಾತೆಯನ್ನು ಇ– ತಂತ್ರಾಂಶದಲ್ಲಿ ನೋಂದಣಿ ಮಾಡಿಸಲು ಸ್ವತ್ತಿಗೆ ಸಂಬಂಧಪಟ್ಟ ಕ್ರಯಪತ್ರ, ಮೂಲಪತ್ರ, ಪಾಸ್‌ಪೋರ್ಟ್ ಗಾತ್ರದ ಫೋಟೊ, ಮನೆಯ ಅಥವಾ ಖಾಲಿ ನಿವೇಶನದ ಫೋಟೊ, ಹಿಂದಿನ ವರ್ಷದ ನಮೂನೆ-3, ಚಾಲ್ತಿ ಸಾಲಿನ ಕಂದಾಯ ರಶೀದಿ, ಋಣಭಾರರಾಹಿತ್ಯ ಪ್ರಮಾಣ ಪತ್ರ (ಇ.ಸಿ), ಆಧಾರ್ ಕಾರ್ಡ್, ಕಟ್ಟಡವಾದಲ್ಲಿ ಅದನ್ನು ನಿರ್ಮಿಸಲು ಪಡೆದ ಕಟ್ಟಡ ಪರವಾನಗಿ, ವಿದ್ಯುತ್ ಪಾವತಿ ರಶೀದಿ, ಲೇ ಔಟ್‌ನಲ್ಲಿ ಮನೆ ನಿರ್ಮಿಸಿದ್ದರೆ ಲೇಔಟ್ ನಕ್ಷೆ, ಲೇಔಟ್ ಪರಿವರ್ತನೆಗಾಗಿ ನಗರ ಯೋಜನಾ ಪ್ರಾಧಿಕಾರ ಮಾಡಿದ ಆದೇಶದ ಪ್ರತಿ, ನೀರಿನ ಕಂದಾಯದ ರಶೀದಿ ಈ ಎಲ್ಲ ದಾಖಲೆಗಳನ್ನು ಒದಗಿಸಬೇಕಾಗಿದೆ.

‘ಇ–ತಂತ್ರಾಂಶದಲ್ಲಿ ನಾಗರಿಕರು ತಮ್ಮ ಸ್ವತ್ತಿನ ದಾಖಲೆಯನ್ನು ನೋಂದಣಿ ಮಾಡಿಸುವುದರಿಂದ ಸ್ವತ್ತಿನ ನಿಖರವಾದ ಅಳತೆ, ಸ್ವರೂಪ, ಗುರುತಿಸುವಿಕೆ ಇವೇ ಮೊದಲಾದ ಅಂಶಗಳು ಡಿಜಿಟಲ್ ತಂತ್ರಜ್ಞಾನದಲ್ಲಿ ನಮೂದಾಗುತ್ತವೆ. ಇದನ್ನು ಯಾವುದೇ ಸಂದರ್ಭದಲ್ಲೂ ತಿದ್ದುಪಡಿ ಮಾಡಲು ಸಾಧ್ಯವಿಲ್ಲದೇ ಇರುವುದರಿಂದ ದಾಖಲೆಗಳ ವಿಷಯದಲ್ಲಿ ನಿಖರತೆ ಮೂಡಲು ಸಾಧ್ಯ’ ಎಂಬ ಅಭಿಪ್ರಾಯವಿದೆ.

‘ನಗರಸಭೆ ಕಚೇರಿಯಿಂದ ತಮ್ಮ ಸ್ವತ್ತಿಗೆ ಸಂಬಂಧಿಸಿದ ನಮೂನೆ-3 ರ ದಾಖಲೆಯನ್ನು ಪಡೆಯಲು ಸಾರ್ವಜನಿಕರು ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದಾರೆ. ಮಧ್ಯವರ್ತಿಗಳು ತಪ್ಪು ಮಾಹಿತಿ ನೀಡಿ ಜನರಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ನೂತನ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ನಾಗರಿಕರು ಇದಕ್ಕೆ ಸಹಕಾರ ನೀಡಬೇಕು’ ಎನ್ನುತ್ತಾರೆ ಪೌರಾಯುಕ್ತರಾದ ರಾಜು ಡಿ. ಬಣಕಾರ್.

ನಗರಸಭೆಯಲ್ಲಿ ಈ ಹಿಂದೆ ಕೆಲವು ಖಾತೆಗಳ ಅಕ್ರಮ ನೋಂದಣಿ, ಬದಲಾವಣೆಯಾಗಿರುವ ಬಗ್ಗೆ ಕೂಡ ದೂರುಗಳಿದ್ದು ಈ ತಂತ್ರಾಂಶಕ್ಕೆ ಖಾತೆ ನೋಂದಣಿಯಾದ ನಂತರ ಇವುಗಳಿಗೆ ಅವಕಾಶವಿರುವುದಿಲ್ಲ ಎನ್ನಲಾಗಿದೆ.

ಈ ನಡುವೆ ತುರ್ತಾಗಿ ನಮೂನೆ-3ರ ಅಗತ್ಯವಿರುವವರು ನಗರಸಭೆಯ ನೂತನ ಕ್ರಮದಿಂದಾಗಿ ಕೆಲವು ರೀತಿಯ ತೊಂದರೆಗಳನ್ನು ಸಹ ಅನುಭವಿಸುತ್ತಿದ್ದಾರೆ. ಈ ತಂತ್ರಾಂಶಕ್ಕೆ ಖಾತೆಯನ್ನು ನೋಂದಣಿ ಮಾಡಿಸಲು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಒದಗಿಸಿದರೂ ನೋಂದಣಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬ ದೂರುಗಳೂ ಇವೆ. ಈ ವಿಳಂಬವನ್ನು ತಪ್ಪಿಸುವತ್ತ ನಗರಸಭೆ ಆಡಳಿತ ಗಮನ ಹರಿಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ.

ಇ–ತಂತ್ರಾಂಶ ಹೆಚ್ಚು ಸುರಕ್ಷಿತ
2016ನೇ ಸಾಲಿನಲ್ಲಿ ಪೌರಾಡಳಿತ ನಿರ್ದೇಶನಾಲಯದ ಕಚೇರಿ ಹೊರಡಿಸಿರುವ ಸುತ್ತೋಲೆಯ ಪ್ರಕಾರ ನಡೆದುಕೊಳ್ಳಲಾಗುತ್ತಿದೆ. ಯಾವುದೇ ಹೊಸ ಪದ್ಧತಿಯನ್ನು ಜಾರಿಗೆ ತರುವಾಗ ಕೆಲವು ತೊಡಕುಗಳು ಎದುರಾಗುತ್ತವೆ. ಆದರೆ ದೂರದೃಷ್ಟಿಯಿಂದ ನೋಡಿದರೆ ಖಾತೆಯನ್ನು ಇ– ತಂತ್ರಾಂಶಕ್ಕೆ ಅಳವಡಿಸುವುದು ಹೆಚ್ಚು ಸುರಕ್ಷಿತ. ನಾಗರಿಕರು ಈ ವಿಷಯದಲ್ಲಿ ನಗರಸಭೆಯೊಂದಿಗೆ ಸಹಕರಿಸಬೇಕು.
– ರಾಜು ಡಿ. ಬಣಕಾರ್, ಆಯುಕ್ತರು, ನಗರಸಭೆ, ಸಾಗರ

*
ಎಲ್ಲ ದಾಖಲೆಗಳನ್ನು ನೀಡಿದರೂ ಇ–ತಂತ್ರಾಂಶಕ್ಕೆ ದಾಖಲೆಗಳನ್ನು ಅಳವಡಿಸಲು ವಿಳಂಬವಾದರೆ ಸಹಿಸುವುದಿಲ್ಲ. ನೇರವಾಗಿ ಬಂದು ನನ್ನನ್ನು ಭೇಟಿಯಾದರೆ, ನಮೂನೆ-3 ಒದಗಿಸುವ ವ್ಯವಸ್ಥೆ ಮಾಡುವೆ.
–ಮಧುರಾ ಶಿವಾನಂದ್, ಅಧ್ಯಕ್ಷರು, ನಗರಸಭೆ, ಸಾಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು