ಶಿಕಾರಿಪುರ: ಕಂದಾಯ ಇಲಾಖೆ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದಲ್ಲಿ ಇಲ್ಲಿನ ತಾಲ್ಲೂಕು ಕಚೇರಿಯು ಜಿಲ್ಲೆಯಲ್ಲಿ ಮುಂದಿದ್ದು, ಇತರೆ ತಾಲ್ಲೂಕು ಕಚೇರಿಗಳಿಗೆ ಮಾದರಿಯಾಗಿದೆ.
ಕಂದಾಯ ಇಲಾಖೆಯ ಒಟ್ಟು 7 ಕಾರ್ಯಕ್ರಮಗಳ ಪೈಕಿ 5ರಲ್ಲಿ ಜಿಲ್ಲೆಯಲ್ಲೇ ಶಿಕಾರಿಪುರ ಮೊದಲ ಸ್ಥಾನ ಪಡೆದಿದೆ. ಪಹಣಿಗೆ ಆಧಾರ್ ಜೋಡಣೆಯಲ್ಲಿ ತಾಲ್ಲೂಕಿನಲ್ಲಿ 1,51,639 ಪ್ರಕರಣದಲ್ಲಿ 1,38,588 ಪೂರ್ಣಗೊಂಡಿದ್ದು, ಶೇ 91.39 ಪ್ರಗತಿಯಾಗಿದೆ. ವಂಚನೆ ವಹಿವಾಟು ತಡೆಗಟ್ಟಲು ಮತ್ತು ಕೊಡು–ಕೊಳ್ಳುವಿಕೆ ವ್ಯವಹಾರ ಸರಳಗೊಳಿಸುವುದಕ್ಕೆ ಪಹಣಿಯೊಂದಿಗೆ ಆಧಾರ್ ಜೋಡಣೆ ಸಹಕಾರಿಯಾಗಿದೆ.
ಜಿಯೋ ಫೆನ್ಸಿಂಗ್ ಮೂಲಕ ಸರ್ಕಾರಿ ಭೂಮಿ ಗುರುತಿಸುವುದು ಮತ್ತು ಅತಿಕ್ರಮ ತಡೆಯುವ ಉದ್ದೇಶಕ್ಕೆ ಜಾರಿಗೊಳಿಸಿರುವ ಜಮೀನು ಗಸ್ತು (ಲ್ಯಾಂಡ್ ಬೀಟ್) ಕಾರ್ಯಕ್ರಮ ಪ್ರಮುಖವಾಗಿ ಸರ್ಕಾರಿ ಭೂಮಿ ಅತಿಕ್ರಮಣ, ಅಕ್ರಮ ಮಂಜೂರಾತಿ ತಪ್ಪಿಸುವುದಕ್ಕಾಗಿ ಯೋಜನೆ ಸಹಕಾರಿ ಆಗಿದೆ. ತಾಲ್ಲೂಕಿನಲ್ಲಿ ಒಟ್ಟು 4,906 ಸರ್ಕಾರಿ ಆಸ್ತಿಗಳಿದ್ದು, ಸ್ಥಳಕ್ಕೆ ಗ್ರಾಮಲೆಕ್ಕಿಗರು ತೆರಳಿ ಅಲ್ಲಿನ ಪ್ರಸ್ತುತ ವಸ್ತುಸ್ಥಿತಿ ಆನ್‌ಲೈನ್‌ನಲ್ಲಿ ದಾಖಲಿಸುತ್ತಾರೆ. ಅವರು ಅಲ್ಲಿಗೆ ಹೋಗದೆ ಆನ್‌ಲೈನ್‌ನಲ್ಲಿ ದಾಖಲಿಸುವುದಕ್ಕೆ ಸಾಧ್ಯವಿಲ್ಲ. ಅಲ್ಲದೆ ಅತಿಕ್ರಮ ಆಗಿದ್ದರೆ ಎಷ್ಟು ಪ್ರದೇಶ ಎನ್ನುವುದು ಗುರುತಿಸಿ ಕಾಲ್ನಡಿಗೆಯಲ್ಲಿ ಸುತ್ತುವರಿದರೆ ಅದು ಆನ್‌ಲೈನ್‌ನಲ್ಲೇ ಅತಿಕ್ರಮ ಪ್ರಮಾಣ ಗುರುತಿಸಿ ಜಿಯೋ ಫೆನ್ಸಿಂಗ್ ದಾಖಲಿಸುತ್ತದೆ ಅಂತಹ 4,846 ಪ್ರಕರಣಗಳು ಈಗಾಗಲೇ ಪೂರ್ಣಗೊಳಿಸಲಾಗಿದೆ. ಶೇ 98.78ರಷ್ಟು ಪ್ರಗತಿಯಾಗಿದೆ.
ಭೂ ಮಂಜೂರಾತಿ ಪ್ರಕರಣದ ದರಖಾಸ್ತು ಪೋಡಿ ದುರಸ್ತಿ ಸಂಬಂಧ ನಮೂನೆ 1ರಿಂದ 5ರ ಮಾಹಿತಿ ದಾಖಲಿಸಿ ಮುಂದಿನ ಪ್ರಕ್ರಿಯೆ ನಿರ್ವಹಿಸಲು ತಂತ್ರಾಂಶ ಅಭಿವೃದ್ಧಿಗೊಳಿಸಿದ್ದು, ತಾಲ್ಲೂಕಿನಲ್ಲಿ ಅಭಿಯಾನ ನಡೆಸುವ ಮೂಲಕ ಪ್ರಕರಣ ಇತ್ಯರ್ಥಗೊಳಿಸುವ ಕಾರ್ಯ ನಡೆದಿದೆ. ಒಟ್ಟು 769 ಪ್ರಕರಣದಲ್ಲಿ ಈಗಾಗಲೆ 683 ಪೂರ್ಣಗೊಂಡಿದ್ದು ಶೇ 88.82 ಪ್ರಗತಿ ಸಾಧಿಸಿದೆ. ಬಗರ್‌ಹುಕುಂ ಸಾಗುವಳಿ ಕುರಿತ 180 ಅರ್ಜಿಯಲ್ಲಿ 127ಅರ್ಜಿ ಇತ್ಯರ್ಥಗೊಳಿಸಲಾಗಿದ್ದು ಶೇ 70.56 ಪ್ರಗತಿ ಸಾಧಿಸಿದೆ.
ರಾಜ್ಯದಲ್ಲೇ ಅತಿಹೆಚ್ಚು ಕೆರೆ ಹೊಂದಿರುವ 2ನೇ ತಾಲ್ಲೂಕು ಶಿಕಾರಿಪುರ. ಇಲ್ಲಿನ 1,280 ಕೆರೆಗಳು ಒತ್ತುವರಿಯಾಗಿವೆ. ಅದರಲ್ಲಿ 816 ಒತ್ತುವರಿ ಗುರುತಿಸಿದ್ದು, ಕೆಲವು ಕಡೆ ಒತ್ತುವರಿ ಬಿಡಿಸಲಾಗಿದೆ. ಇನ್ನುಳಿದ ಕೆರೆ ಒತ್ತುವರಿ ತೆರವಿಗೆ ಬಿಗಿ ಕ್ರಮ ಆಗಿಲ್ಲ. 464 ಕೆರೆಗಳ ಒತ್ತುವರಿ ತೆರವು ವಿಚಾರದಲ್ಲಿ ಯಾವುದೇ ಸಣ್ಣ ಪ್ರಗತಿ ಆಗಿಲ್ಲ. ಆದರೂ ಕೆರೆ ಒತ್ತುವರಿ ತೆರವು ಪ್ರಕರಣದಲ್ಲಿ ತಾಲ್ಲೂಕಿನ ಪ್ರಗತಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.
ಕಡತ ಡಿಜಿಟಲೀಕರಣ ಯೋಜನೆ ಅಡಿ ತಾಲ್ಲೂಕಿನಲ್ಲಿ 1.35,336 ಕಡತಗಳಿದ್ದು, ಅದರಲ್ಲಿ 8,882 ಕಡತಗಳ ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಂಡಿದೆ. 1,26,454 ಕಡತಗಳು ಇನ್ನೂ ಬಾಕಿ ಇವೆ. ಈ ಕಾರ್ಯಕ್ರಮದಲ್ಲಿ ಶಿಕಾರಿಪುರ ತಾಲ್ಲೂಕು 2ನೇ ಸ್ಥಾನದಲ್ಲಿದೆ. ತಾಲ್ಲೂಕಿನಲ್ಲಿ ಕಂದಾಯ ಇಲಾಖೆ ಕಾರ್ಯಕ್ರಮ ಅನುಷ್ಠಾನ ಸಮರ್ಪಕವಾಗಿ ಆಗಿದೆ ಎಂಬ ಕಾರಣಕ್ಕೆ ಇಲ್ಲಿನ ತಹಶೀಲ್ದಾರ್ ಮಲ್ಲೇಶ ಬೀರಪ್ಪ ಪೂಜಾರ್ ಅವರಿಗೆ ಸರ್ಕಾರ ಸನ್ಮಾನಿಸಿ ಗೌರವಿಸಿದೆ.
ಜನರಿಗೆ ಕಂದಾಯ ಇಲಾಖೆ ಸೇವೆ ನಿಗದಿತ ಅವಧಿಯೊಳಗೆ ನೀಡುವುದಕ್ಕೆ ತಹಶೀಲ್ದಾರ್ ಕಚೇರಿ ಬದ್ಧವಾಗಿದೆ. ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದುಮಲ್ಲೇಶ ಬೀರಪ್ಪ ಪೂಜಾರ್ ತಹಶೀಲ್ದಾರ್ ಶಿಕಾರಿಪುರ
ಪ್ರಮುಖ ಕೆರೆ ಒತ್ತುವರಿ ಪ್ರಕರಣ ಮೊದಲು ಕೈಗೆತ್ತಿಕೊಂಡು ಪೊಲೀಸ್ ರಕ್ಷಣೆಯಲ್ಲಿ ಬಿಡಿಸುವ ಕಾರ್ಯ ಆಗಬೇಕು. ಕೆರೆ ಒತ್ತುವರಿ ತೆರವು ಕಡತಕ್ಕೆ ಸೀಮಿತಗೊಂಡಿದೆ. ತಹಶೀಲ್ದಾರ್ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕೆರೆ ಜಾಗ ಉಳಿಸಬೇಕುಪಿ.ವೈ. ರವಿ ರೈತ ಸಂಘದ ಶಿಕಾರಿಪುರ ತಾಲ್ಲೂಕು ಘಟಕದ ಅಧ್ಯಕ್ಷ
ಜನರಿಗೆ ತ್ವರಿತವಾಗಿ ಕಂದಾಯ ಸೇವೆ ಸಿಗಬೇಕು ಎನ್ನುವ ಕಾರಣಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ಸಮಗ್ರ ಬದಲಾವಣೆಗೆ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ. ಅದರ ಫಲ ಜನರಿಗೆ ಸಿಗುವಂತೆ ಮಾಡುವುದಕ್ಕೆ ಅಧಿಕಾರಿಗಳು ಮುಂದಾಗಬೇಕುನಾಗರಾಜಗೌಡ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.