ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ | ಕುಟುಂತ್ತಾ ಸಾಗಿರುವ ಕಾಮಗಾರಿ: ಗ್ರಾಮಸ್ಥರಿಗೆ ದೂಳಿನ ಮಜ್ಜನ

ಚಂಗಾರು ಸೇತುವೆಗೆ ಇಲ್ಲ ರಸ್ತೆ ಸಂಪರ್ಕ;
Published 14 ಏಪ್ರಿಲ್ 2024, 7:42 IST
Last Updated 14 ಏಪ್ರಿಲ್ 2024, 7:42 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಮಾಲತಿ ನದಿಗೆ ಅಡ್ಡಲಾಗಿ, ಅರೇಹಳ್ಳಿ ಮತ್ತು ಹೊನ್ನೇತ್ತಾಳು ಗ್ರಾಮ ಪಂಚಾಯಿತಿಯ ಗ್ರಾಮಗಳನ್ನು ಸಂಪರ್ಕಿಸುವ ಚಂಗಾರು ಸೇತುವೆಗೆ ಸಮರ್ಪಕ ರಸ್ತೆಭಾಗ್ಯ ಇಲ್ಲವಾಗಿದೆ. ಸೇತುವೆ ನಿರ್ಮಾಣ ಪೂರ್ಣಗೊಂಡಿದ್ದರೂ ಸಂಪರ್ಕಿಸುವ ರಸ್ತೆಯ ಕಾಮಗಾರಿ ಕುಂಟುತ್ತಾ ಸಾಗಿದೆ.

ಸುಮಾರು ಐದು ದಶಕಗಳಿಂದ ಸೇತುವೆ ನಿರ್ಮಾಣದ ಬೇಡಿಕೆ ಇತ್ತು. ಇನ್ನೇನು ಸೇತುವೆ ಹಾಗೂ ರಸ್ತೆ ಪೂರ್ಣಗೊಳ್ಳುತ್ತದೆ ಎಂಬ ಭರವಸೆ ಯಲ್ಲೇ 5 ವರ್ಷಗಳಿಂದ ಕಾಯುತ್ತಿದ್ದ ನಡಬೂರು, ಅರೇಹಳ್ಳಿ, ಕೊಪ್ಪ, ಚಾವಲ್ಮನೆ, ಕಮ್ಮರಡಿ, ಚಂಗಾರು, ಶೀರೂರು, ಅರೇಹಳ್ಳಿ, ಕೆಂದಾಳಬೈಲು, ಕುಂದಾ ಗ್ರಾಮಸ್ಥರು ಹತಾಶ ಸ್ಥಿತಿಗೆ ತಲುಪಿದ್ದಾರೆ.

ಕಮ್ಮರಡಿ-ಮೇಗರವಳ್ಳಿ ಸಂಪರ್ಕದ 15 ಕಿಲೋ ಮೀಟರ್‌ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಣ್ಣಿನ ರಸ್ತೆಯಲ್ಲಿ ಸಂಚರಿಸುವ ವಾಹನಗಳು ದೂಳು ಎಬ್ಬಿಸಿಕೊಂಡು ಹೋಗುತ್ತವೆ. ಇದರಿಂದಾಗಿ, ಚಂಗಾರು ಭಾಗದ ರಸ್ತೆಬದಿಯ 20ಕ್ಕೂ ಹೆಚ್ಚು ಮನೆಗಳ ಬಾಗಿಲು ತೆರೆಯದಂತಹ ಸ್ಥಿತಿ ಎದುರಾಗಿದೆ.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು (ಕೆಆರ್‌ಡಿಸಿಎಲ್) ಅರ್ಧಬಂರ್ಧ ಸೇತುವೆ ಕಾಮಗಾರಿ ಮುಗಿಸಿದ್ದ ಕಾರಣ ‌ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಕಳೆದ ವಿಧಾನಸಭಾ ಚುನಾವಣೆ ಹೊತ್ತಿಗೆ ಸೇತುವೆ ಮೇಲ್ಭಾಗದ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಆದರೆ ಇಂದಿಗೂ ಕೂಡ 300 ಮೀಟರ್‌ ರಸ್ತೆ ನಿರ್ಮಾಣ ಬಾಕಿ ಉಳಿಸಿದ್ದು, ಸಮಸ್ಯೆ ಮುಂದುವರೆದಿದೆ. ಅಧಿಕಾರಿಗಳು ಕಾಮಗಾರಿ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದು ತಕ್ಕ ಪಾಠ ಕಲಿಸಬೇಕಾಗುತ್ತದೆ. ವಿಳಂಬ ಧೋರಣೆ ಮುಂದುವರಿಸಿದರೆ ಪ್ರತಿಭಟನೆ ಹಾದಿ ಹಿಡಿಯುವುದು ಅನಿವಾರ್ಯ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಹೆಚ್ಚಿದೆ ಸೇತುವೆ ಬಳಕೆ

ರಸ್ತೆ ಸಂಪರ್ಕ ಸರಿಯಾಗಿ ಇಲ್ಲದಿದ್ದರೂ ಸೇತುವೆ ಬಳಕೆ ಈಚೆಗೆ ಹೆಚ್ಚಾಗಿದೆ. ಕಮ್ಮರಡಿ, ಕೊಪ್ಪ, ತೀರ್ಥಮುತ್ತೂರು, ಶೃಂಗೇರಿ, ಕುಪ್ಪಳ್ಳಿ, ಕುಂದಾದ್ರಿ, ಆಗುಂಬೆಗೆ ತೆರಳುವ ಪ್ರವಾಸಿಗರಿಗೆ ಸೇತುವೆ ಹತ್ತಿರದ ಸಂಪರ್ಕವನ್ನು ಕಲ್ಪಿಸಿದೆ.

ಅಲ್ಲದೇ, ಸ್ಥಳೀಯರಿಗೂ ಸುತ್ತಮುತ್ತಲ ಹಳ್ಳಿಗಳನ್ನು ಸಂಪರ್ಕಿಸಲು ಸೇತುವೆ ಅನುಕೂಲ ಕಲ್ಪಿಸಿದೆ. ಸೇತುವೆ ಇಲ್ಲದಿದ್ದರೆ ಸುಮಾರು 40 ಕಿಲೋ ಮೀಟರ್‌ ಸುತ್ತುವರಿದು ಅಕ್ಕಪಕ್ಕದ ಗ್ರಾಮವನ್ನು ಸಂಪರ್ಕಿಸಬೇಕಿತ್ತು. ಅನಿವಾರ್ಯ ಸಂದರ್ಭದಲ್ಲಿ ದೋಣಿ ಹೂಡಬೇಕಾದ ಸಂದರ್ಭ ಇತ್ತು.

ಅರ್ಧಂಬರ್ಧ ರಸ್ತೆ ನಿರ್ಮಿಸಿದ್ದು ಬೇಸಿಗೆಯಲ್ಲಿ ದೂಳು ಕುಡಿಯಬೇಕಿದೆ. ಮಳೆಗಾಲದಲ್ಲಿ ಕೆಸರಿನಿಂದ ಓಡಾಡಲು ಸಾಧ್ಯವಿಲ್ಲ
ಎಸ್.‌ ರವೀಶ್‌, ಹೊನ್ನೇತ್ತಾಳು ಗ್ರಾ.ಪಂ. ಸದಸ್ಯ
ಚಂಗಾರು ರಸ್ತೆ ಬಗ್ಗೆ ಮಾಹಿತಿ ಇಲ್ಲ. ಮಾಹಿತಿ ಪಡೆದುಕೊಂಡು ರಸ್ತೆ ಕಾಮಗಾರಿಯ ತೀರ್ಮಾನ ತೆಗೆದುಕೊಳ್ಳಲಾಗುವುದು
ಎಇಇ ಲೋಕೋಪಯೋಗಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT