ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷಕ್ಕೆ ₹ 1.30 ಲಕ್ಷ ಕೋಟಿ ಸಾಲ‌ದ ಹೊರೆ: ಸಿದ್ದರಾಮಯ್ಯ

ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹ
Last Updated 13 ಮಾರ್ಚ್ 2021, 16:52 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯ ಸರ್ಕಾರ ಎರಡು ವರ್ಷದಲ್ಲಿ ₹ 1.30 ಲಕ್ಷ ಕೋಟಿ ಸಾಲ‌ ಮಾಡಿದೆ. ರಾಜ್ಯವನ್ನು ಇಂತಹ ದುಸ್ಥಿತಿಗೆ ದೂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮಾನಮರ್ಯಾದೆ ಇದ್ದರೆ ಒಂದು ಸೆಕೆಂಡ್ ಸಹ ಅಧಿಕಾರದಲ್ಲಿ‌ ಇರಬಾರದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ನಗರದ ಬಿ.ಎಚ್‌.ರಸ್ತೆಯ ಸೈನ್ಸ್‌ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಶಿವಮೊಗ್ಗ ಚಲೋ–ಜನಾಕ್ರೋಶ’ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಆಸ್ತಿ ಮಾಡುವುದರಲ್ಲಿ ಯಡಿಯೂರಪ್ಪ, ಈಶ್ವರಪ್ಪ ಮಧ್ಯೆ ಸ್ಪರ್ಧೆ ನಡೆಯುತ್ತಿದೆ. ಇಂತಹ ಮಾನಗೆಟ್ಟವರು ರಾಜಕಾರಣದಲ್ಲಿ ಇರಬೇಕಾ?ಹಸಿರು ಶಾಲು ಹಾಕಿಕೊಂಡು 2008ರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ ರೈತರ ಮೇಲೆ ಗುಂಡು‌ ಹೊಡೆಸಿದರು. ಅಧಿಕಾರಕ್ಕೆ ಬಂದಾಗ ಸಾಲ ಮನ್ನ ಮಾಡಲಿಲ್ಲ. ಕೇಂದ್ರದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ₹ 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು. ತಾವು ಮುಖ್ಯಮಂತ್ರಿಯಾದಾಗ ಪ್ರತಿ ರೈತರ ತಲಾ ₹ 50 ಸಾವಿರ ಸಾಲ ಮನ್ನಾ ಮಾಡಿದ್ದೆ. ಈ ಸರ್ಕಾರ ಸಾಲ ಮಾಡುವುದರಲ್ಲೇ ದಾಖಲೆ ಮಾಡಿದೆ ಎಂದು ಛೇಡಿಸಿದರು.

ಫೆ.28ರಂದು ಭದ್ರಾವತಿಯಲ್ಲಿ ನಡೆದ ಕಬಡ್ಡಿ ಪಂದ್ಯದ ನಂತರ ಯಾವ ಗಲಾಟೆಯೂ ನಡೆದಿಲ್ಲ. ಬಿಜೆಪಿ ಕಾರ್ಯಕರ್ತರು ಅಗತ್ಯವಾಗಿ ಜೈ ಶ್ರೀರಾಮ್ ಘೋಷಣೆ ಕೂಗಿ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ. ತಳ್ಳಾಡಿಕೊಂಡಿದ್ದಾರೆ. ಇಷ್ಟಕ್ಕೆ ಕೊಲೆ ಯತ್ನ, ಜಾತಿ ನಿಂದನೆ ದೂರು ದಾಖಲಿಸಲಾಗಿದೆ. ಸಂಗಮೇಶ್ವರ ಅವರ ಕುಟುಂಬದ ಸದಸ್ಯರನ್ನು ಬಂಧಿಸಲಾಗಿದೆ. ಪ್ರತಿ ದೂರು ಇದ್ದರೂ ಬಿಜೆಪಿಯ ಯಾವ ಮುಖಂಡರನ್ನೂ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಇಂದಿನ ಹೋರಾಟ ಇತಿಹಾಸದ ಪುಟ ಸೇರಲಿದೆ. ರಾಜ್ಯದ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಮುಖಂಡರು ಶಿವಮೊಗ್ಗ ಜಿಲ್ಲೆಯ ಕಾರ್ಯಕರ್ತರಿಗೆ ಶಕ್ತಿ ತುಂಬಲು‌ ಬಂದಿದ್ದಾರೆ. ಪೊಲೀಸರು ಕಾನೂನು‌ ಚೌಕಟ್ಟಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಪೊಲೀಸರನ್ನು ಬಳಸಿಕೊಂಡು ದೌರ್ಜನ್ಯ ನಡೆಸುತ್ತಿರುವ ಬಿಜೆಪಿಗೆ ಕಾಂಗ್ರೆಸ್‌ ಕಾರ್ಯಕರ್ತರು‌ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಶಿವಮೊಗ್ಗದ ಈ ಸಮಾವೇಶ ಐತಿಹಾಸಿಕ ಪ್ರತಿಭಟನೆ. ಶ್ರೀರಾಮ ಬಿಜೆಪಿಯವರಿಗಾಗಿ ಹುಟ್ಟಿಲ್ಲ. ಎಲ್ಲ ಹಿಂದೂಗಳಿಗೂ ರಾಮ ದೇವರು. ಹಿಂದೆ ರಾಮಮಂದಿರಕ್ಕಾಗಿ ಸಂಗ್ರಹಿಸಿದ್ದ ಇಟ್ಟಿಗೆ, ಹಣ ಎಲ್ಲಿ ಹೋಯಿತು? ಶ್ರೀರಾಮನ ಹೆಸರು ಹೇಳಿಕೊಂಡು ಮತ್ತೆ ಮತ್ತೆ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.

ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್‌ ಕುಮಾರ್, ಮೋದಿ ಕಾಲದಲ್ಲಿ ಇರುವುದು ನಮ್ಮೆಲ್ಲರ ಸೌಭಾಗ್ಯ. ಚಪ್ಪಾಳೆ ತಟ್ಟಿ, ದೀಪಾ ಹಚ್ಚಿ ಕೊರೊನಾ ಓಡಿಸುವ ಶಕ್ತಿ ಅವರಿಗಿದೆ. ಇಂಥವರು ಧರ್ಮ, ಜಾತಿ, ಹಿಂಸೆ ಹೆಸರಲ್ಲಿ ಎಷ್ಟು ದಿನ ದೇಶ ಆಳಲು ಸಾಧ್ಯ? ದೌರ್ಜನ್ಯವನ್ನೆ ಬಂಡವಾಳ ಮಾಡಿಕೊಂಡವರು ಇತಿಹಾಸದಲ್ಲಿ ಯಾರೂ ಉಳಿದಿಲ್ಲ.‌ ಜನರು ಅಂತಿಮ‌ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕುಟುಕಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್.ಸುಂದರೇಶ್ ಪ್ರಸ್ತಾವಿಕ ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ಕಾಗೋಡು ತಿಮ್ಮಪ್ಪ, ಡಾ.ಜಿ.ಪರಮೇಶ್ವರ, ಕೃಷ್ಣ ಬೈರೇಗೌಡ, ರಾಮಲಿಂಗ ರೆಡ್ಡಿ, ವಿನಯ್‌ಕುಮಾರ್ ಸೊರಕೆ, ಈಶ್ವರ ಖಂಡ್ರೆ, ಆರ್‌.ಪ್ರಸನ್ನಕುಮಾರ್, ಕೆ.ಬಿ.ಪ್ರಸನ್ನಕುಮಾರ್,ಧೃವನಾರಾಯಣ,ಎಸ್.ಅರ್.ಪಾಟೀಲ್,ಸಲೀಂ ಅಹಮದ್. ಯು.ಟಿ.ಖಾದರ್, ಕೆ.ಜೆ.ಜಾರ್ಜ್, ಪ್ರತಾಪ್ ಚಂದ್ರ ಶೆಟ್ಟಿ, ಎಚ್.ಎಂ ಚಂದ್ರಶೇಖರಪ್ಪ, ಬೇಳೂರು ಗೋಪಾಲಕೃಷ್ಣ ಸೇರಿ ರಾಜ್ಯದ ಹಲವು ಕಾಂಗ್ರೆಸ್‌ ಮುಖಂಡರು ಸಮಾವೇಶದಲ್ಲಿ ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT