ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ರೂಪಶ್ರೀ ಕಾಲೇಜಿಗೆ ರಜತ ಸಂಭ್ರಮ

Published 23 ಡಿಸೆಂಬರ್ 2023, 6:21 IST
Last Updated 23 ಡಿಸೆಂಬರ್ 2023, 6:21 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ಹೆಗ್ಗೋಡಿನ ಕೇಡಲಸರದ ವಿದ್ಯಾಭಿವೃದ್ಧಿ ಸಂಘ ಸ್ಥಾಪಿಸಿರುವ ಮೂರು ಶಿಕ್ಷಣ ಸಂಸ್ಥೆಗಳು ಸಂಭ್ರಮಾಚರಣೆಯ ಹೊಸ್ತಿಲಿನಲ್ಲಿವೆ. ಸಂಘದ ವಿ.ಸಂ. ಪ್ರೌಢಶಾಲೆ 60 ವರ್ಷ ಪೂರೈಸಿದ್ದರೆ, ಎಸ್. ರೂಪಶ್ರೀ ಪದವಿಪೂರ್ವ ಕಾಲೇಜು 25 ವರ್ಷ ಪೂರೈಸಿದೆ. ಕಾಕಾಲ್ ಪ್ರಥಮದರ್ಜೆ ಕಾಲೇಜು ದಶಮಾನೋತ್ಸವದ ಸಂಭ್ರಮದಲ್ಲಿದೆ.

60 ವರ್ಷಗಳ ಹಿಂದೆ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಪ್ರೌಢಶಾಲೆಗಳ ಕೊರತೆಯಿತ್ತು. ಪ್ರೌಢಶಿಕ್ಷಣಕ್ಕಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾಗರಕ್ಕೆ ಬರಬೇಕಿತ್ತು. ಈ ಕಾರಣಕ್ಕೆ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದರು. ಇಂತಹ ಹೊತ್ತಿನಲ್ಲಿ ಕೇಡಲಸರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಸೇರಿ ಗ್ರಾಮೀಣ ಭಾಗದ ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಹುಟ್ಟು ಹಾಕಿದ ಸಂಸ್ಥೆ ‘ವಿದ್ಯಾಭಿವೃದ್ಧಿ ಸಂಘ’. 1962ರಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿಯಾಗಿದ್ದ ನಾಗೇಗೌಡ ಅವರು  ಶಿಕ್ಷಣ ಸಂಸ್ಥೆ ಆರಂಭಿಸಲು 15 ಎಕರೆ ಭೂಮಿಯನ್ನು ವಿದ್ಯಾಭಿವೃದ್ಧಿ ಸಂಘಕ್ಕೆ ಮಂಜೂರು ಮಾಡಿದ್ದು ವರದಾನವಾಯಿತು.

1963ರಲ್ಲಿ 17 ವಿದ್ಯಾರ್ಥಿಗಳೊಂದಿಗೆ ಆರಂಭವಾದ ವಿ.ಸಂ. ಪ್ರೌಢಶಾಲೆಯಲ್ಲಿ ಈವರೆಗೆ 6,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದಿದ್ದು, ದೇಶ ವಿದೇಶಗಳಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ. ಪ್ರೌಢಶಾಲೆ ತೆರೆದು ಸುಮ್ಮನಿರದ ವಿದ್ಯಾಭಿವೃದ್ಧಿ ಸಂಘದ ಪ್ರಮುಖರು, 1996ರಲ್ಲಿ ಎಸ್. ರೂಪಶ್ರೀ ಪದವಿಪೂರ್ವ ಕಾಲೇಜು ಆರಂಭಿಸಿದರು.

ಭೀಮನಕೋಣೆ ಗ್ರಾಮದ ಪಿ.ಡಿ. ಶ್ರೀಧರ ದಂಪತಿ ತಮ್ಮ ಪುತ್ರಿಯ ಸ್ಮರಣೆಗಾಗಿ ದೊಡ್ಡ ಮೊತ್ತದ ದೇಣಿಗೆ ನೀಡಿದ್ದು ಪದವಿಪೂರ್ವ ಕಾಲೇಜಿನ ಆರಂಭಕ್ಕೆ ಪ್ರೇರಣೆಯಾಯಿತು. ನಂತರ ಹೆಗ್ಗೋಡಿನವರಾದ ಚಂದ್ರಶೇಖರ್ ಕಾಕಲ್ ಅವರ ಆಸಕ್ತಿಯ ಫಲವಾಗಿ 2013ನೇ ಸಾಲಿನಲ್ಲಿ ಕಾಕಲ್ ಪ್ರಥಮ ದರ್ಜೆ ಕಾಲೇಜು ಸಹ ಅಸ್ತಿತ್ವಕ್ಕೆ ಬಂತು.

ಹೀಗೆ ಪ್ರೌಢ, ಪಿಯು, ಹಾಗೂ ಪದವಿ ಶಿಕ್ಷಣ ಒಂದೇ ಆವರಣದಲ್ಲಿ ಗ್ರಾಮೀಣ ಭಾಗದ ಒಂದು ಪ್ರದೇಶದಲ್ಲಿ ದೊರಕುವ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸಜ್ಜುಗೊಳಿಸಿದ ಶ್ರೇಯಸ್ಸು ವಿದ್ಯಾಭಿವೃದ್ಧಿ ಸಂಘಕ್ಕೆ
ಸಲ್ಲುತ್ತದೆ.

ಇಲ್ಲಿನ ಪದವಿಪೂರ್ವ ಕಾಲೇಜಿನ ಪ್ರವೇಶಕ್ಕೆ ಎಸ್ಸೆಸ್ಸೆಲ್ಸಿಯಲ್ಲಿ ಇಂತಿಷ್ಟೇ ಅಂಕ ಗಳಿಸಿರಬೇಕು ಎಂಬ ಮಾನದಂಡವಿಲ್ಲ. ಎಲ್ಲಾ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಪ್ರವೇಶ ಕಲ್ಪಿಸುವ ಈ ಕಾಲೇಜು ಫಲಿತಾಂಶದಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಹಲವು ವರ್ಷ ಸತತವಾಗಿ ಶೇ 100ರಷ್ಟು ಫಲಿತಾಂಶ ನೀಡಿರುವುದು ವಿದ್ಯಾಭಿವೃದ್ಧಿ ಸಂಘದ ಶಿಕ್ಷಣ ಸಂಸ್ಥೆಯ ಹೆಗ್ಗಳಿಕೆ.

24ರಂದು ಮಹೋತ್ಸವ ಆಚರಣೆ

ಕೇಡಲಸರದ ವಿದ್ಯಾಭಿವೃದ್ಧಿ ಸಂಘದ ವಿವಿಧ ಶಿಕ್ಷಣ ಸಂಸ್ಥೆಗಳ ಮಹೋತ್ಸವ ಆಚರಣೆ ಡಿ.24ರಂದು ಬೆಳಿಗ್ಗೆ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಶಾಸಕ ಎಚ್. ಹಾಲಪ್ಪ ಹರತಾಳು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ಸಂಸ್ಥೆಯ ಉದ್ದೇಶ. ಇದಕ್ಕೆ ಅನೇಕರು ನೆರವು ನೀಡಿರುವುದನ್ನು ಮರೆಯುವಂತಿಲ್ಲ.

-ಭಾಗಿ ಸತ್ಯನಾರಾಯಣ, ಗೌರವಾಧ್ಯಕ್ಷ, ಮಹೋತ್ಸವ ಆಚರಣೆ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT