ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಸರ ಜಾಗೃತಿಗೆ ಕಲಾ ಮಾಧ್ಯಮ ಪರಿಣಾಮಕಾರಿ ಸಾಧನ: ನಾಗೇಶ ಹೆಗಡೆ ಉಪನ್ಯಾಸ

‘ಕಲೆಗಳ ಸಂಗಡ ಮಾತುಕತೆ’
Published : 2 ಅಕ್ಟೋಬರ್ 2024, 14:40 IST
Last Updated : 2 ಅಕ್ಟೋಬರ್ 2024, 14:40 IST
ಫಾಲೋ ಮಾಡಿ
Comments

ಸಾಗರ: ಜಗತ್ತಿನಾದ್ಯಂತ ದಿನೇದಿನೇ ಪರಿಸರ ನಾಶವಾಗುತ್ತಿವೆ. ಈ ಕುರಿತು ಜಾಗೃತಿ ಮೂಡಿಸಲು ಕಲಾ ಮಾಧ್ಯಮ ಪರಿಣಾಮಕಾರಿ ಸಾಧನವಾಗಿದೆ ಎಂದು ಲೇಖಕ ನಾಗೇಶ ಹೆಗಡೆ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಥೆ ಆಯೋಜಿಸಿರುವ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದ ಉದ್ಘಾಟನಾ ಗೋಷ್ಠಿಯಲ್ಲಿ ‘ಬಿಸಿ ಪ್ರಳಯದ ಬಾಗಿಲಲ್ಲಿ ಸಂವಹನ ಕಲೆ’ ಕುರಿತು ಅವರು ಬುಧವಾರ ಉಪನ್ಯಾಸ ನೀಡಿದರು.

ಕವಿತೆ, ಕತೆ, ನಾಟಕ, ನೃತ್ಯ, ಚಿತ್ರಕಲೆ, ಶಿಲ್ಪಕಲೆ, ವ್ಯಂಗ್ಯ ಚಿತ್ರ, ಛಾಯಾಚಿತ್ರ, ವಿಡಿಯೊಗ್ರಫಿ, ಕಿರುಚಿತ್ರ, ಸಿನಿಮಾ, ಯಕ್ಷಗಾನ, ಕಾಮಿಕ್ಸ್... ಹೀಗೆ ವಿವಿಧ ಕಲಾ ಪ್ರಕಾರಗಳ ಮೂಲಕ ಜಗತ್ತಿನ ಎಲ್ಲೆಡೆ ಪರಿಸರದ ಮೇಲೆ ಆಗುತ್ತಿರುವ ಆಕ್ರಮಣದ ಕುರಿತು ಮೂಡಿಸುತ್ತಿರುವ ಜಾಗೃತಿ ಕುರಿತು ಅವರು ವಿವರಿಸಿದರು.

‘ಮೇಘಸ್ಫೋಟ, ಪ್ರವಾಹ, ಭೂ ಕುಸಿತ, ಕ್ಷಾಮ, ಭೂಕಂಪ, ತಾಪಮಾನ ಹೆಚ್ಚಳ, ಹವಾಮಾನ ವೈಪರಿತ್ಯ ಮೊದಲಾದ ಅವಘಡಗಳ ಮೂಲಕ ಪರಿಸರದಲ್ಲಿ ವಿಷಣ್ಣ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಬಗ್ಗೆ ಭೂಮಿ ಆಗಾಗ ಎಚ್ಚರಿಕೆ ನೀಡುತ್ತಲೇ ಇದೆ. ಆದರೂ ಅದರ ಪರಿಣಾಮ ನಮಗೆ ತಟ್ಟದು ಎಂಬ ನಿರ್ಲಕ್ಷ್ಯ ಭಾವನೆ ಎಲ್ಲೆಡೆ ಮೂಡಿದೆ’ ಎಂದರು.

‘ನದಿ, ಅರಣ್ಯ, ಮರಳು, ಖನಿಜ, ಪರ್ವತ, ಬೆಟ್ಟ, ಗುಡ್ಡ, ಜೀವವೈವಿಧ್ಯ, ವನ್ಯಜೀವಿ ಹೀಗೆ... ಎಲ್ಲವನ್ನೂ ಭಕ್ಷಣೆ ಮಾಡುವ ಮೂಲಕ ಪರಿಸರವನ್ನು ನಾಶ ಮಾಡುತ್ತಿದ್ದೇವೆ. ಸುನಾಮಿ ಆದಾಗ ಯಾವ ತಿಮಿಂಗಿಲವೂ ಮೃತಪಟ್ಟಿಲ್ಲ. ಏಕೆಂದರೆ ಅವುಗಳಿಗೆ ಅದರ ಸೂಚನೆ ಮೊದಲೇ ದೊರಕಿದ್ದರಿಂದ ಸಮುದ್ರದ ಆಳ ಸೇರಿಕೊಂಡಿದ್ದವು. ಮನುಷ್ಯ ಅನಾಹುತಗಳ ಮುನ್ಸೂಚನೆ ದೊರಕಿದ್ದರೂ ಸಂವೇದನೆ ಕಳೆದುಕೊಂಡವರಂತೆ ವರ್ತಿಸಿದ’ ಎಂದರು.

‘ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಪರಿಸರವನ್ನು ಬಲಿ ಕೊಡುವುದು ಅನಿವಾರ್ಯ ಎಂಬ ಸಮರ್ಥನೆ ಕೇಳಿಬರುತ್ತಿದೆ. ಆದರೆ, ಪರ್ಯಾಯಗಳ ಬಗ್ಗೆ ಚಿಂತಿಸುವ ಮತ್ತು ಅವುಗಳನ್ನು ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿ ಇಲ್ಲವಾಗಿದೆ. ನಮ್ಮ ನೀತಿ ನಿರೂಪಕರು ಬೃಹತ್ ಉದ್ಯಮಿಗಳ ಮೂಲಕವೇ  ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯ ಎಂದು ನಂಬಿರುವುದು ಪರಿಸರಕ್ಕೆ ಮಾರಕವಾಗಿದೆ’ ಎಂದು ಪ್ರತಿಪಾದಿಸಿದರು.

ರಂಗಕರ್ಮಿ ಸುನಿಲ್ ಶಾನಭಾಗ್ ಕಾರ್ಯಕ್ರಮ ಉದ್ಘಾಟಿಸಿದರು. ನೀನಾಸಂ ಅಧ್ಯಕ್ಷ ಸಿದ್ಧಾರ್ಥ ಸ್ವಾಗತಿಸಿದರು. ವಿಮರ್ಶಕ ಟಿ.ಪಿ.ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾಗರ ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಆಯೋಜಿಸಿರುವ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದಲ್ಲಿ ವಿಜ್ಞಾನ ಲೇಖಕ ನಾಗೇಶ ಹೆಗಡೆ ಬುಧವಾರ ಉಪನ್ಯಾಸ ನೀಡಿದರು
ಸಾಗರ ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಆಯೋಜಿಸಿರುವ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದಲ್ಲಿ ವಿಜ್ಞಾನ ಲೇಖಕ ನಾಗೇಶ ಹೆಗಡೆ ಬುಧವಾರ ಉಪನ್ಯಾಸ ನೀಡಿದರು

ಬೆಂಗಳೂರಿಗೆ ಶರಾವತಿ ನದಿ ನೀರು: ಅಪಾಯಕಾರಿ

ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಗಳು ಪರಿಸರಕ್ಕೆ ಅಪಾಯಕಾರಿ ಎಂದು ನಾಗೇಶ ಹೆಗಡೆ ಹೇಳಿದರು. ಈ ಎರಡೂ ಯೋಜನೆಗಳಿಂದ ವ್ಯಾಪಕ ಪ್ರಮಾಣದಲ್ಲಿ ಅರಣ್ಯ ನಾಶವಾಗಲಿದೆ. 400ಕ್ಕೂ ಹೆಚ್ಚು ಕಿ.ಮೀ. ಉದ್ದದ ಪ್ರದೇಶಕ್ಕೆ ಪೈ‍ಪ್‌ಲೈನ್ ಅಳವಡಿಸಿ ನೀರು ಹರಿಸುವುದು ಗುರುತ್ವಾಕರ್ಷಣೆ ಶಕ್ತಿಗೆ ವಿರುದ್ಧವಾಗಿ ನೀರೆತ್ತಿ ವಿದ್ಯುತ್ ಉತ್ಪಾದಿಸುವುದು ಅವೈಜ್ಞಾನಿಕ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT