ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಹಿತ್ಯ ಸಮ್ಮೇಳ: ಸಂವಿಧಾನಕ್ಕಿಂತ ಧರ್ಮ, ಜಾತಿ ಮುನ್ನೆಲೆಗೆ ಅಪಾಯ- ಮುಕುಂದರಾಜು

18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ; ಎಲ್.ಎನ್.ಮುಕುಂದರಾಜು ಅಭಿಮತ
Published 1 ಫೆಬ್ರುವರಿ 2024, 14:07 IST
Last Updated 1 ಫೆಬ್ರುವರಿ 2024, 14:07 IST
ಅಕ್ಷರ ಗಾತ್ರ

ಶಿವಮೊಗ್ಗ: ‘ದೇಶದಲ್ಲಿ ಸಂವಿಧಾನಕ್ಕಿಂತ ಧರ್ಮ ಮತ್ತು ಜಾತಿಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಸೂಚನೆ’ ಎಂದು ಸಾಹಿತಿ ಎಲ್.ಎನ್.ಮುಕುಂದರಾಜು ಅಭಿಪ್ರಾಯಪಟ್ಟರು.

ಇಲ್ಲಿನ ಸಾಹಿತ್ಯ ಗ್ರಾಮದಲ್ಲಿ ಗುರುವಾರ ಆರಂಭವಾದ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರಭುತ್ವ ಮತ್ತು ಸಾಹಿತ್ಯದ ನಡುವೆ ತಿಕ್ಕಾಟಗಳು ನಡೆಯುತ್ತಿವೆ. ಸೃಜನಶೀಲ ಮತ್ತು ಮುಕ್ತ ಸಾಹಿತ್ಯಕ್ಕೆ ತೊಡಕಾಗುವ ಕಾಲ ಬಂದರೂ ಬಂದೀತು’ ಎಂದು ಎಚ್ಚರಿಸಿದರು.

‘ಸಾಹಿತಿಗಳು ಮತ್ತು ಬರಹಗಾರರು ಬಹುತ್ವದ ದೃಷ್ಟಿಕೋನದಲ್ಲಿ ಚಿಂತಿಸಬೇಕು. ಪ್ರಭುತ್ವವನ್ನು ಹೆಗಲಮೇಲೆ ಹೊತ್ತು ಕೂರುವ ಅವಶ್ಯಕತೆ ಇಲ್ಲ. ರಾಜಕಾರಣಿಗಳು ಸ್ವಾರ್ಥಕ್ಕಾಗಿ ಸಮಾಜದಲ್ಲಿ ಸಂಘರ್ಷ ಹುಟ್ಟುಹಾಕುತ್ತಾರೆ. ಈ ದೇಶ ಶಾಂತಿ–ಸುಭೀಕ್ಷವಾಗಿ ಇರುವುದು ಅವರಿಗೆ ಇಷ್ಟವಿರುವುದಿಲ್ಲ. ಸಂವಿಧಾನ ಬಿಟ್ಟು ದೇವರು, ಧರ್ಮ, ಜಾತಿ, ಕೋಮುವಾದಗಳನ್ನು ನಡುವೆ ತಂದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ’ ಎಂದರು.

‘ಪೋಷಕರು ತಮ್ಮ ಮಕ್ಕಳನ್ನು ಕೋಮುವಾದ ರಾಜಕಾರಣಕ್ಕೆ ಬಲಿಕೊಡಬಾರದು. ಆದರೆ, ಅಂತಹದ್ದೊಂದು ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಕುವೆಂಪು ಅವರು ನೂರು ದೇವರುಗಳನ್ನು ನೂಕಾಚೆ ದೂರ ಎಂದಿದ್ದಾರೆ. ಅಂದರೆ ಸರ್ವರಿಗೂ ಪ್ರಿಯವಾಗುವ ಭಾರತಾಂಬೆಯೇ ದೇವರು ಎಂದು ಅವರು ಹೇಳುತ್ತಾರೆ. ಆಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ’ ಎಂದು ಹೇಳಿದರು.

‘ಭಜನೆ ಮಾಡುವುದು ಜಾಸ್ತಿಯಾದರೆ ಸೃಜನಶೀಲತೆಯೇ ಹೊರಟುಹೋಗುತ್ತದೆ. ಅದು ಯಾವ ರೀತಿಯ ಭಜನೆಯಾದರೂ ಆಗಬಹುದು. ಈಗಿನ ಪ್ರಭುತ್ವಕ್ಕೆ ಕವಿ–ಬರಹಗಾರರ ಮೇಲೆ ಗೌರವ ಇಲ್ಲ. ಏಕೆಂದರೆ ಅವರು ಭಜನೆ ಮಾಡುವುದಿಲ್ಲ. ಸತ್ಯ ಹೇಳುತ್ತಾರೆ’ ಎಂದರು.

‘ಈ ಎಲ್ಲ ತಲ್ಲಣಗಳಿಂದ ಜನರು ದೂರವಿರಬೇಕು. ಪ್ರೀತಿ–ವಿಶ್ವಾಸಗಳೇ ನಮ್ಮ ಜೀವನ ರೂಪಿಸುತ್ತವೆ. ಬೇರೆ ಧರ್ಮಗಳನ್ನು ಪ್ರೀತಿಸುವುದು ಕನ್ನಡಿಗರ ಗುಣ. ರಾಜಕಾರಣಿಗಳ ಒಡೆದಾಳುವ ನೀತಿಗೆ ಗೌರವ ಕೊಡಬಾರದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ‘ಸಾಹಿತ್ಯ ಕಾರ್ಯಕ್ರಮಗಳಿಂದ ರಾಜಕಾರಣಿಗಳು ದೂರವಿರುತ್ತಾರೆ. ಸಾಹಿತ್ಯವೆಂದರೆ ಅವರಿಗೆ ಅಸಡ್ಡೆ. ಇಂದಿನ ಕಾರ್ಯಕ್ರಮಕ್ಕೆ ಯಾವ ರಾಜಕಾರಣಿಗಳೂ ಬಂದಿಲ್ಲ. ಸಾಹಿತ್ಯ ಗ್ರಾಮ ₹1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಅದನ್ನು ಈ ಮಟ್ಟಕ್ಕೆ ತರಲು ತುಂಬಾ ಕಷ್ಟಪಡಬೇಕಾಯಿತು. ಅನೇಕರು ಹಲವು ದೂರುಗಳನ್ನು ಹೇಳಿದರು. ಆದರೆ ಇದರ ನಿರ್ಮಾಣದ ಕಷ್ಟ ನಮಗೆ ಗೊತ್ತು. ಇದಕ್ಕೆ ಇನ್ನೂ ₹2.5 ಕೋಟಿ ಹಣ ಬೇಕಿದೆ. ಸರ್ಕಾರ ಸಹಾಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಹಿಂದಿನ ಸಮ್ಮೇಳನಾಧ್ಯಕ್ಷ ಲಕ್ಷ್ಮಣ ಕೊಡಸೆ ಈ ಬಾರಿಯ ಅಧ್ಯಕ್ಷ ಎಸ್.ಪಿ.ಪದ್ಮಪ್ರಸಾದ್ ಅವರಿಗೆ ಕಸಾಪ ಧ್ವಜ ಹಸ್ತಾಂತರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ ಹಾಲಾಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಮುಖಂಡರಾದ ಅಂಜನಪ್ಪ, ಡಾ.ಕೆ.ಆರ್.ಶ್ರೀಧರ್, ಶಂಕರನಾಯ್ಕ, ಹುಚ್ರಾಯಪ್ಪ, ಗಣೇಶ್, ರಘು, ರಮೇಶ್ ಶೆಟ್ಟಿ, ನವೀನ್ ಕುಮಾರ್ ಮತ್ತಿತರರು ಇದ್ದರು. ನೃಪತುಂಗ ಕಾರ್ಯಕ್ರಮ ನಿರೂಪಿಸಿದರು. ಮಹಾದೇವಿ ಸ್ವಾಗತಿಸಿದರು.

ಸಾಹಿತ್ಯ ಗ್ರಾಮದಲ್ಲಿ ಪುಸ್ತಕ ಪ್ರಿಯರಿಂದ ಪ್ರಜ್ಞಾ ಬುಕ್‌ಹೌಸ್ ಮಳಿಗೆ ವೀಕ್ಷಣೆ
ಸಾಹಿತ್ಯ ಗ್ರಾಮದಲ್ಲಿ ಪುಸ್ತಕ ಪ್ರಿಯರಿಂದ ಪ್ರಜ್ಞಾ ಬುಕ್‌ಹೌಸ್ ಮಳಿಗೆ ವೀಕ್ಷಣೆ
ಶಿವಮೊಗ್ಗದಲ್ಲಿ ಗುರುವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಾಹಿತ್ಯಾಸಕ್ತರು
ಶಿವಮೊಗ್ಗದಲ್ಲಿ ಗುರುವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಾಹಿತ್ಯಾಸಕ್ತರು
ಶಿವಮೊಗ್ಗದಲ್ಲಿ ಗುರುವಾರ ಆರಂಭವಾದ 18ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತಿ ಎಲ್‌.ಎನ್‌.ಮುಕುಂದರಾಜು ಉದ್ಘಾಟಿಸಿದರು
ಪ್ರಜಾವಾಣಿ ಚಿತ್ರಗಳು
ಶಿವಮೊಗ್ಗದಲ್ಲಿ ಗುರುವಾರ ಆರಂಭವಾದ 18ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತಿ ಎಲ್‌.ಎನ್‌.ಮುಕುಂದರಾಜು ಉದ್ಘಾಟಿಸಿದರು ಪ್ರಜಾವಾಣಿ ಚಿತ್ರಗಳು

- ‘ಭಾಷೆ ದುರ್ಬಲಗೊಳಿಸುವಲ್ಲಿ ಕನ್ನಡಿಗರದ್ದೂ ಪಾತ್ರ’ ‘

ಕನ್ನಡವನ್ನು ದುರ್ಬಲಗೊಳಿಸುವಲ್ಲಿ ಕನ್ನಡಿಗರ ಪಾತ್ರವೂ ಇದೆ. ಹೀಗಾಗಿಯೇ ಕನ್ನಡ ಶಾಲೆಗಳು ಸೊರಗಿವೆ’ ಎಂದು ಶಿವಮೊಗ್ಗ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಸ್.ಪಿ.ಪದ್ಮಪ್ರಸಾದ್ ಕಳವಳ ವ್ಯಕ್ತಪಡಿಸಿದರು. ‘ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣ ಮಾಡಿದ ಅವರು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ನಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯ ಎಂಬ ಭ್ರಮೆಯಲ್ಲಿ ಪೋಷಕರು ಇದ್ದಾರೆ. ಇದರಿಂದಾಗಿಯೇ ಕನ್ನಡ ಶಾಲೆಗಳು ಸೊರಗುತ್ತಿವೆ. ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ 43 ಶಾಲೆಗಳು ಮುಚ್ಚಿ ಹೋಗಿವೆ. ಇದು ಅತ್ಯಂತ ವಿಷಾದದ ಸಂಗತಿ’ ಎಂದರು. ‘ಕರ್ನಾಟಕದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು ಎಂದು ಡಾ.ಸರೋಜಿನಿ ಮಹಿಷಿ ವರದಿ ಪ್ರಕಟವಾಗಿ 40 ವರ್ಷಗಳಾದರೂ ಅದು ಈವರೆಗೂ ಈಡೇರಿಲ್ಲ. ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಇಲ್ಲವಾಗಿವೆ. ಇದು ನಮ್ಮ ವ್ಯವಸ್ಥೆಯ ಮತ್ತೊಂದು ರೂಪ. ಕಾನೂನುಗಳು ಬಲವಾಗಿ ಜಾರಿಯಾದರೆ ಮಾತ್ರ ಕನ್ನಡಿಗರಿಗೆ ನ್ಯಾಯ ಸಿಗಲು ಸಾಧ್ಯ’ ಎಂದು ಹೇಳಿದರು. ‘ಪಾಂಡಿತ್ಯ ಪ್ರತಿಭೆ ಎನ್ನುವುದು ದಿನದಿನಕ್ಕೂ ಕ್ಷೀಣಿಸುತ್ತಿದೆ. ಇತಿಹಾಸವನ್ನು ನಾವು ಮರೆಯುತ್ತಿದ್ದೇವೆ. ನಮ್ಮ ಶಿಕ್ಷಣ ವ್ಯವಸ್ಥೆ ಹಳಗನ್ನಡ ಛಂದಸ್ಸು ವ್ಯಾಕರಣ ಶಾಸನಶಾಸ್ತ್ರ ಹೀಗೆ ಹಲವು ವಿಷಯಗಳನ್ನು ಮರೆತುಬಿಟ್ಟಿದೆ. ಪರಭಾಷೆಗಳ ಮುನ್ನುಗ್ಗುವಿಕೆ ಶಿಕ್ಷಕರ ನಿರ್ಲಕ್ಷ್ಯ ಕನ್ನಡ ಮಾಧ್ಯಮದ ಪೋಷಕರ ಅನಾದರ ಇವೆಲ್ಲವೂ ಕನ್ನಡಕ್ಕೆ ಶಕ್ತಿ ತುಂಬಲು ಸಾಧ್ಯವಿಲ್ಲವಾಗಿದೆ. ಕನ್ನಡವೇ ನಮ್ಮ ಅಸ್ಮಿತೆ. ಅದರ ಅನಾದರ ಸಲ್ಲದು’ ಎಂದರು. ‘ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಶರಾವತಿ ಸೇರಿದಂತೆ ಮುಳುಗಡೆ ಸಂತ್ರಸ್ತರ ಬದುಕು ಇನ್ನೂ ನೆಟ್ಟಗೆ ಆಗಿಲ್ಲ. ಅಡಿಕೆಗೆ ಕೊಳೆ ರೋಗ ಪದೇ ಪದೇ ಬಾಧಿಸುತ್ತಿದೆ. ಕ್ಯಾಸನೂರು (ಮಂಗನ) ಕಾಯಿಲೆ ಮತ್ತೆ ಮರುಕಳಿಸಿದೆ. ಈ ಸಮಸ್ಯೆಗಳಿಗೆ ಉತ್ತರ ಸಿಗಬೇಕಿದೆ. ಇದರ ನಡುವೆಯೂ ಒಂದಷ್ಟು ಕೆಲಸಗಳು ಆಗಿವೆ. ಕಾಲೇಜುಗಳ ಸಂಖ್ಯೆ ಹೆಚ್ಚಾಗಿದೆ. ರಸ್ತೆಗಳ ಸ್ಥಿತಿ ಉತ್ತಮಗೊಂಡಿದೆ. ಸಾಂಸ್ಕೃತಿಕ ಬದುಕು ಗಮನ ಸೆಳೆಯುತ್ತಿದೆ ಎಂಬುದಷ್ಟೇ ಸಮಾಧಾನಕರ ಸಂಗತಿ’ ಎಂದು ಹೇಳಿದರು.

ಗಮನಸೆಳೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಇಲ್ಲಿನ ಗೋಪಾಲಗೌಡ ಬಡಾವಣೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ ಮನೆಮಾಡಿತ್ತು. ಸಮ್ಮೇಳನದ ಅಧ್ಯಕ್ಷ ಪದ್ಮಪ್ರಸಾದ್ ಅವರನ್ನು ಗೋಪಾಳದ ಆನೆಪ್ರತಿಮೆ ವೃತ್ತದಿಂದ ಸಾಹಿತ್ಯ ಗ್ರಾಮದವರೆಗೆ ತೆರೆದ ವಾಹನದಲ್ಲಿ ಅಧ್ಯಕ್ಷ ಡಿ.ಮಂಜುನಾಥ ನೇತೃತ್ವದಲ್ಲಿ ಕರೆತರಲಾಯಿತು. ಈ ರಾಜಬೀದಿ ಉತ್ಸವದಲ್ಲಿ ಜಿಲ್ಲೆಯ ಜಾನಪದ ಕಲಾತಂಡಗಳು ವಾದ್ಯ ತಂಡಗಳು ಶಾಲಾಮಕ್ಕಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ಮೆರೆಗು ಹೆಚ್ಚಿಸಿದರು. ಸಮ್ಮೇಳನಕ್ಕೆ ಬರುವವರಿಗೆ ಒಒಡಿ ವ್ಯವಸ್ಥೆ ಇದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಬಂದಿದ್ದರು. ಸಾಹಿತ್ಯ ಗ್ರಾಮದ ಆವರಣದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿದೆ. ಪುಸ್ತಕ ಬಟ್ಟೆ ಸೀರೆ ಗೃಹಪಯೋಗಿ ವಸ್ತುಗಳು ತಿನಿಸುಗಳ ಮಳಿಗೆಗಳು ಆಸಕ್ತರ ಗಮನಸೆಳೆದಿವೆ. ಬೆಳಿಗ್ಗೆ ಉಪಾಹಾರಕ್ಕೆ ವಾಂಗಿಬಾತ್‌ ಮಧ್ಯಾಹ್ನ ಪಾಯಸ ಅನ್ನ–ಸಾಂಬಾರು ಪಲ್ಯ ಹಸಿವು ತಣಿಸಿದರೆ ನಿರಂತರ ಗೋಷ್ಠಿಗಳು ಸಾಹಿತ್ಯಾಸಕ್ತರ ಮಸ್ತಕ ತಣಿಸಿದವು.

Cut-off box - ‘ಮನಸ್ಸು ಅರಳಿಸುವ ಸಾಹಿತ್ಯದ ರಚನೆಕಾರ’ ‘ಕರುಳ ಸಂಬಂಧದ ಗಟ್ಟಿತನ ಸೃಜನಶೀಲತೆ ಸಮ್ಮೆಳನಾಧ್ಯಕ್ಷ ಎಸ್.ಪಿ. ಪದ್ಮಪ್ರಸಾದ್ ಅವರ ಬರಹದಲ್ಲಿ ಕಾಣಬಹುದು’ ಎಂದು ಉಪನ್ಯಾಸಕ ಶ್ರೀಪತಿ ಹಳಗುಂದ ಹೇಳಿದರು. ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಸಾಹಿತಿ ಪದ್ಮಪ್ರಸಾದ್ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಕೃತಿಗಳಲ್ಲಿ ಬದಲಾವಣೆಯ ಭರವಸೆ ಇದೆ. ಸತ್ಯಗಳ ಅನ್ವೇಷಣೆಯೂ ಇದೆ. ಪ್ರತಿಫಲಾಪೇಕ್ಷೆ ಇಲ್ಲ. ಕೆರಳಿಸುವ ಇಂದಿನ ದಿನಗಳಲ್ಲಿ ಅರಳಿಸುವ ಸಾಹಿತ್ಯ ಅವರದ್ದು’ ಎಂದರು. ಸುಂಕಂ ಗೋವರ್ಧನ  ಮಾತನಾಡಿ ‘ಪದ್ಮಪ್ರಸಾದ್ ಅವರ ಸಂಪಾದಿತ ಕೃತಿಗಳು ಸಾಹಿತ್ಯ ಲೋಕದಲ್ಲಿ ಗುರುತಿಸಿಗೊಂಡಿವೆ ಜೈನ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಪರಂಪರೆಯ ಪ್ರತಿರೂಪ ಅವರ ಕೃತಿಯಲ್ಲಿ ಕಾಣಬಹುದು’ ಎಂದರು. ಉಪನ್ಯಾಸಕ ರತ್ನಾಕರ್ ಕುನಗೋಡು ಪದ್ಮಪ್ರಸಾದ್ ಅವರ ಜಾನಪದ ಕೃತಿ ವಿಮರ್ಶ ಅಂಕಣ ಬರಹ ಕುರಿತು ಮಾತಾನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಎನ್.ಹರಿಕುಮಾರ್ ತುಮಕೂರು ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT