ಗುರುವಾರ , ಡಿಸೆಂಬರ್ 8, 2022
18 °C
90ಕ್ಕೂ ಹೆಚ್ಚು ರಾಷ್ಟ್ರಮಟ್ಟದ ನೃತ್ಯ ಕಲಾವಿದರು ಭಾಗಿ – ಜನಾರ್ದನ್

ನ. 27ರಿಂದ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ನಾಟ್ಯ ತರಂಗ ಸಂಸ್ಥೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನ. 27ರಿಂದ ಡಿ. 3ರವರೆಗೆ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹ ನಡೆಯಲಿದೆ ಎಂದು ಸಂಸ್ಥೆಯ ಪ್ರಾಚಾರ್ಯ ಜಿ.ಬಿ.ಜನಾರ್ದನ್ ತಿಳಿಸಿದರು.

ಸಾಗರದ ಶ್ರೀನಗರ ಬಡಾವಣೆಯಲ್ಲಿರುವ ನೃತ್ಯ ಭಾಸ್ಕರ ಸಭಾಂಗಣದಲ್ಲಿ ಸಪ್ತಾಹ ನಡೆಯಲಿದ್ದು, ಪ್ರತಿದಿನ ಸಂಜೆ 5.30ರಿಂದ ರಾತ್ರಿ 8.30ರವರೆಗೆ ನಿರಂತರವಾಗಿ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ದೇಶ ವಿದೇಶದ ಹೆಸರಾಂತ ಕಲಾವಿದರು ಸಪ್ತಾಹದಲ್ಲಿ ಕಲಾಪ್ರದರ್ಶನ ನೀಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನ. 27ರಂದು ಬೆಳಿಗ್ಗೆ 11ಕ್ಕೆ ಶಾಸಕ ಎಚ್‌.ಹಾಲಪ್ಪ ಹರತಾಳು ಸಪ್ತಾಹವನ್ನು ಉದ್ಘಾಟಿಸಲಿದ್ದು, ನೀನಾಸಂನ ಅಕ್ಷರ ಕೆ.ವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಎಚ್, ಪ್ರಮುಖರಾದ ಮಧುರಾ ಶಿವಾನಂದ್, ಮೇಘರಾಜ್ ಟಿ.ಡಿ, ದಿನೇಶ್ ಜೋಷಿ, ಎಂ.ಆರ್.ವಿ. ಪ್ರಸಾದ್, ಮಾ.ಸ.ನಂಜುಂಡಸ್ವಾಮಿ ಭಾಗವಹಿಸಲಿದ್ದಾರೆ. ಉದಯ ಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಜೆ 5.30ಕ್ಕೆ ಕೇರಳದ ಕಪಿಲಾವೇಣು ಸಂಸ್ಥೆಯಿಂದ ಕೂಡಿಯಾಟ್ಟಂ ‘ಪೂತನಾ ಮೋಕ್ಷ’ ನೃತ್ಯ ಪ್ರದರ್ಶನ ನಡೆಯಲಿದೆ. ನ. 28ರಂದು ಸಂಜೆ 5.30ಕ್ಕೆ ಹುಬ್ಬಳ್ಳಿಯ ಸುಜಯ್ ಶಾನ್‌ಭಾಗ್ ಅವರಿಂದ ಭರತನಾಟ್ಯ, ನಾಟ್ಯತರಂಗ ಸಂಸ್ಥೆಯಿಂದ ಶಾಪಾನುಗ್ರಹ ನೃತ್ಯರೂಪಕ ನಡೆಯಲಿದೆ ಎಂದರು.

ನ. 29ರಂದು ಬೆಂಗಳೂರಿನ ಸೋಹಿನಿ ಕಾರಂತ್ ಅವರಿಂದ ಕಥಕ್ ನೃತ್ಯ, ಸಮುದ್ಯತಾ ಮತ್ತು ಸಮನ್ವಿತಾ ತಂಡದಿಂದ ಹಂಸ ದಮಯಂತಿ ನೃತ್ಯರೂಪಕ ನಡೆಯಲಿದೆ. ನ. 30ರಂದು ಬೆಂಗಳೂರಿನ ಪಾರ್ಶ್ವನಾಥ ಉಪಾಧ್ಯ ಅವರಿಂದ ಭರತನಾಟ್ಯ, ನಾಟ್ಯತರಂಗ ವಿದ್ಯಾರ್ಥಿಗಳಿಂದ ಗಂಗಾ ಯಮುನಾ ಕಾವೇರಿ ನೃತ್ಯರೂಪಕ ನಡೆಯಲಿದೆ.

ಡಿ. 1ರಂದು ಶ್ರೀಲಂಕಾದ ಕ್ಯಾಂಡಿಯನ್ ನೃತ್ಯವನ್ನು ಶಮಿತಾ ರುಚಿರನ್ ಹೆಟ್ಟಿಗೆ ಮತ್ತು ವಿದ್ಯಾ ತಂಡ ನಡೆಸಿಕೊಡಲಿದ್ದು, ನಂತರ ಪಾಂಡಿಚೇರಿಯ ರುಕ್ಮಿಣಿ ದ್ರಿವೇದಿ ಅವರಿಂದ ಓಡಿಸ್ಸಿ ನೃತ್ಯ ನಡೆಯಲಿದೆ. ಡಿ. 2ರಂದು ವಿಶಾಖಪಟ್ಟಣಂನ ಉದಯಶಂಕರ್ ಪೊಟ್ನೂರ್ ತಂಡದಿಂದ ಕೂಚಿಪುಡಿ ನೃತ್ಯ, ಕಾರವಾರದ ಸ್ಮಿತಾ ನೇಡುಂಗಡಿ ಅವರಿಂದ ಮೋಹಿನಿಯಾಟ್ಟಂ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ಡಿ. 3ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ವೇದಿಕೆಯಲ್ಲಿ ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಡಾ. ಕೆ.ಕುಮಾರ್, ಸಂದೇಶ್ ಜವಳಿ, ಡಾ. ಮೋಹನ್ ಉಪಸ್ಥಿತರಿರುವರು. ಐ.ವಿ.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಕೆ.ಕುಮಾರ್, ನಿಧಿ ಕೆ.ಎಂ, ಲೇಖ ಕೆ.ಎಂ. ಮೈಸೂರು ಅವರಿಂದ ಭರತನಾಟ್ಯ, ಹಂದೆ ಯಕ್ಷ ಬಳಗದಿಂದ ‘ತಾಮ್ರಧ್ವಜ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಪ್ರಸಕ್ತ ಸಾಲಿನ ‘ಸಾಂಸ್ಕೃತಿಕ ಸಾರಥಿ’ ಪ್ರಶಸ್ತಿಯನ್ನು ಕೆ. ಕುಮಾರ್, ಅಭಿಜಿತ್ ಶೆಣೈ ಕೆ, ಆದರ್ಶ ಶೆಣೈ, ಮೋಹನ್ ಎಚ್.ಎಸ್. ಅವರಿಗೆ ನೀಡಲಾಗುತ್ತಿದೆ. ನೃತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ವರದಾ ಜನಾರ್ದನ್, ಐ.ವಿ.ಹೆಗಡೆ, ಆಕಾಶ್ ಉಡುಪ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.