ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿ ಆರೋಗ್ಯಕ್ಕೆ ಹಾದಿ: ಆರ್.ಸಿ.ಜಗದೀಶ್‌

-
Published 9 ಜೂನ್ 2024, 6:39 IST
Last Updated 9 ಜೂನ್ 2024, 6:39 IST
ಅಕ್ಷರ ಗಾತ್ರ

ಶಿವಮೊಗ್ಗ: ‘ದೇಶದಲ್ಲಿ 60ರ ದಶಕಕ್ಕೂ ಮುನ್ನ ಸಾವಯವ ಕೃಷಿಯೇ ಪ್ರಧಾನವಾಗಿತ್ತು. ರಾಸಾಯನಿಕ ಗೊಬ್ಬರ, ಹೈಬ್ರೀಡ್ ಬಿತ್ತನೆ ಬೀಜ ಇರಲಿಲ್ಲ’ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಆರ್‌.ಸಿ.ಜಗದೀಶ್ ಅಭಿಪ್ರಾಯಪಟ್ಟರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯ, ಸಾವಯವ ಕೃಷಿ ಸಂಶೋಧನಾ ಕೇಂದ್ರ, ಸಹಜ ಸಮೃದ್ಧ ವತಿಯಿಂದ ಹಮ್ಮಿಕೊಂಡಿದ್ದ ದೇಸೀ ಬೀಜೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಸಾವಯವ ಕೃಷಿಯಿಂದ ಉತ್ತಮ ಆರೋಗ್ಯ ಲಭ್ಯ ಎಂಬ ಪರಿಜ್ಞಾನ ಆಗ ಇತ್ತು.
ದೇಶದಲ್ಲಿ ಆಹಾರದ ಬೇಡಿಕೆ ಹೆಚ್ಚಾದಂತೆ ಹೆಚ್ಚಿನ ಉತ್ಪಾದನೆಗಾಗಿ ರಾಸಾಯನಿಕಗಳ ಬಳಕೆ ಹೆಚ್ಚಾಯಿತು. ಈ ಹಿಂದೆ ಮನೆಯಲ್ಲಿ ಎಷ್ಟು ಜೊತೆ ಎತ್ತುಗಳಿವೆ ಎಂಬುದರ ಮೇಲೆ ಅವರ ಶ್ರೀಮಂತಿಕೆ ಅಳೆಯಲಾಗುತ್ತಿತ್ತು. ಆ ಮನೆಗೆ ಹೆಣ್ಣು ಕೊಡುತ್ತಿದ್ದರು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಈಗ ಯಾಂತ್ರಿಕ ಕೃಷಿ ಮತ್ತು ರಾಸಾಯನಿಕ ಕೃಷಿಗೆ ಹೆಚ್ಚಿನ ರೈತರು ಮಾರುಹೋಗಿದ್ದಾರೆ’ ಎಂದರು.

‘ಈಗ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶವಾಗಿದೆ. ಆರೋಗ್ಯಕ್ಕೆ ಪೂರಕವಾದ ಆಹಾರ ಬೆಳೆಯುತ್ತಿಲ್ಲ. ಗೋವು ಆಧಾರಿತ ಕೃಷಿ ಕಡಿಮೆಯಾಗಿದೆ. ಶಿವಮೊಗ್ಗ ನಗರದಲ್ಲಿ ನಿತ್ಯ 16 ಲಕ್ಷ ಟನ್ ಕಸದ ಉತ್ಪಾದನೆ ಆಗುತ್ತಿದ್ದು, ಅದು ಬಳಕೆಯಾದರೆ ಇಡೀ ಜಿಲ್ಲೆಯ ಸಾವಯವ ಕೃಷಿಗೆ ಪೂರಕವಾಗಲಿದೆ. ಆದರೆ ಅದನ್ನು ಸದುಪಯೋಗ ಮಾಡುವ ವ್ಯವಸ್ಥೆ ಇಲ್ಲ. ಯುವಕರು ಮುಂದೆ ಬಂದರೆ ವಿಶ್ವವಿದ್ಯಾಲಯದಿಂದ ಉಚಿತ ಸಲಹೆ ಸೂಚನೆ ನೀಡುತ್ತೇವೆ’ ಎಂದು ಹೇಳಿದರು.

‘ದೇಸೀ ತಳಿಗಳಲ್ಲಿ ಪೋಷಕಾಂಶ ಹೆಚ್ಚಾಗಿರುತ್ತದೆ. ಇದನ್ನು ರೈತರು ಹೆಚ್ಚಾಗಿ ಬೆಳೆಸಿ ಲಾಭ ಮಾಡಿಕೊಳ್ಳಬಹುದು. ಸಾವಯವ ಕೃಷಿಯನ್ನು ಉಳಿಸಿ ಬೆಳೆಸಿ’ ಎಂದರು.

ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಮಣ್ಣಿನಲ್ಲಿ ಬೀಜ ಹಾಕಿ ಕಾರ್ಯಕ್ರಮ ಉದ್ಘಾಟಿಸಿದರು. ಸಹಜ ಸಮೃದ್ಧ ನಿರ್ದೇಶಕ ಜಿ.ಕೃಷ್ಣಪ್ರಸಾದ್, ಸಾವಯವ ಸಂಶೋಧನ ಕೇಂದ್ರದ ಸಂಯೋಜಕ ಎಸ್.ಪ್ರದೀಪ್, ಧಾನ್ಯ ಸಂಸ್ಥೆಯ ಮಲ್ಲಿಕಾರ್ಜುನ ಹೊಸಪಾಳ್ಯ, ಐಕಾಂತಿಕ ಸಂಸ್ಥೆಯ ರಾಘವ, ಸಾವಯವ ಕೃಷಿಕ ನಂದೀಶ್ ಚುರ್ಚಿಗುಂಡಿ, ಶಂಕರ್ ಎಂ.ದೇವೇಂದ್ರಪ್ಪ, ಕುಮಾರನಾಯ್ಕ, ದಿನೇಶ್ ಹೊಸನಗರ, ಸಂತೋಷ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT