ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಣಕ್ಕಿಂತ ಸೇವಾ ಮನೋಭಾವ ದೊಡ್ಡದು: ಗೀತಾ ಶಿವರಾಜಕುಮಾರ್

ನವ ಸಂವತ್ಸರದ ಸಂಭ್ರಮದಲ್ಲಿ ಗೀತಕ್ಕ, ಶಿವಣ್ಣ ನಮ್ಮೊಂದಿಗೆ' ಶೀರ್ಷಿಕೆಯ ಸನ್ಮಾನ ಕಾರ್ಯಕ್ರಮ
Published 9 ಏಪ್ರಿಲ್ 2024, 10:20 IST
Last Updated 9 ಏಪ್ರಿಲ್ 2024, 10:20 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜಕೀಯ ಭಾಷಣ ಮಾಡುವುದಕ್ಕಿಂತ ಜನ ಸಾಮಾನ್ಯರಿಗೆ ಹತ್ತಿರವಿದ್ದು, ಸೇವೆ ಸಲ್ಲಿಸುವುದು ಮುಖ್ಯ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.

ಇಲ್ಲಿನ ವಿನೋಬನಗರದ ಶ್ರೀರಾಮ ನಗರ (ಬೆಂಕಿನಗರ) ನಿವಾಸಿಗಳಿಂದ ಮಂಗಳವಾರ ಆಯೋಜಿಸಿದ್ದ 'ನವ ಸಂವತ್ಸರದ ಸಂಭ್ರಮದಲ್ಲಿ ಗೀತಕ್ಕ, ಶಿವಣ್ಣ ನಮ್ಮೊಂದಿಗೆ' ಶೀರ್ಷಿಕೆಯಡಿಯ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು, ಅಶಕ್ತರಿಗೆ ಶಕ್ತಿ ಆಗಿ ನಿಂತಿದ್ದರು. ಅದೇ ರೀತಿ ಆಶ್ರಯ ಬಡಾವಣೆ ನಿವಾಸಿಗಳಿಗೆ ಮನೆ ನಿರ್ಮಾಣ ಮಾಡಿಕೊಟ್ಟಿದ್ದರು‌. ಇದರಿಂದ, ಅನೇಕರು ಶಾಶ್ವತ ಸೂರು ರೂಪಿಸಿಕೊಂಡಿದ್ದಾರೆ. ಅದೇ ದಾರಿಯಲ್ಲಿ ನಾನೂ ಕೂಡ ಸಾಗುತ್ತೇನೆ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಹಣದ ಅವಶ್ಯಕತೆ ಇಲ್ಲ. ಜನ ಸಾಮಾನ್ಯರಿಗೆ ಸೇವೆ ಸಲ್ಲಿಸಲು ಈ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದ್ದರಿಂದ, ಗೀತಾ ಅವರಿಗೆ ಮತ ನೀಡಿ ಹರಸಬೇಕು ಎಂದು ಮನವಿ ಮಾಡಿದರು.

ನಟ ಶಿವರಾಜಕುಮಾರ್ ಮಾತನಾಡಿ, ಜೀವನದಲ್ಲಿ ಬೇವು- ಬೆಲ್ಲ ಇದ್ದರೆ ಮಾತ್ರ, ಬದುಕು ಹಸನಾಗಿರುತ್ತದೆ. ನೂತನ ಯೋಜನೆಗಳ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದರೆ ಸಿಹಿ ಹಂಚುವ ಹಾಗೂ ಸ್ವೀಕರಿಸುವ ಮೂಲಕ ಚಾಲ‌ನೆ ನೀಡಬೇಕು. ಅದೇ ರೀತಿ, ಜಿಲ್ಲೆಯ ಶಕ್ತಿಯಾಗಿ ಪತ್ನಿ ಗೀತಾ ಶಿವರಾಜಕುಮಾರ್ ಇರಲಿದ್ದಾರೆ. ಚುನಾವಣೆಯಲ್ಲಿ ಮತ ನೀಡಿ ಆಶೀರ್ವದಿಸಿ ಎಂದು ಕೋರಿದರು‌.

ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಆಡಳಿತಾವಧಿಯಲ್ಲಿ ಜಿಲ್ಲೆಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ‌. ಗೀತಕ್ಕ ಕೂಡ ಸಮಾಜ ಸೇವೆ ಸಲ್ಲಿಸುವುದರಲ್ಲಿ ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ‌. ಅವರಿಗೆ ಮತ ನೀಡಿ ಆಶೀರ್ವದಿಸಿ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಬೆಂಕಿನಗರದ ನಿವಾಸಿಗಳು ಅರಿಸಿಣ- ಕುಂಕುಮ ನೀಡಿ ಉಡಿ ತುಂಬಿ ಹರಸಿದರು. ಅದೇ ರೀತಿ, ಬಡಾವಣೆಯ ಪುಟ್ಟ ಮಕ್ಕಳು ಚುನಾವಣಾ ಠೇವಣಿ ಹಣ ಹಾಗೂ ನಟ ದಿವಂಗತ ಪುನೀತ್ ರಾಜಕುಮಾರ್ ಅವರ ಭಾವ ಚಿತ್ರ ನೀಡಿದರು.

ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಮುಖಂಡರಾದ ಎಂ.ಶ್ರೀಕಾಂತ್, ಜಿ.ಡಿ.ಮಂಜುನಾಥ, ಪಾಲಾಕ್ಷಪ್ಪ, ಎಸ್.ಕೆ. ಮರಿಯಪ್ಪ, ವಿಶ್ವನಾಥ ಕಾಶಿ, ಕೆ.ರಂಗನಾಥ, ಗಿರೀಶ್, ಇದ್ದರು.

--

ಗೀತಕ್ಕಗೆ ಬೆಳ್ಳಿ ಖಡ್ಗ ಉಡುಗೊರೆ

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ನೆರವಿನಿಂದ ಬದುಕು ನಡೆಸುತ್ತಿದ್ದೇನೆ. ಹಿಂದೆ ಮನೆ ನಿರ್ಮಾಣಕ್ಕೆ ಬಂಗಾರಪ್ಪ ನೆರವಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಗೀತಕ್ಕ ಸೋತಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರು ಗೆದ್ದು ಬರಲಿ ಎಂದು ನಗರದ ಆಶ್ರಯ ಬಡಾವಣೆ ನಿವಾಸಿ ಕಲಾವತಿ ಹರಸಿದರು.

ಇದೇ ವೇಳೆ, ಕಲಾವತಿ ಅವರು, ಗೀತಾ ಶಿವರಾಜಕುಮಾರ್ ಅವರಿಗೆ ನಿವಾಸಿಗಳ ಪರವಾಗಿ ಬೆಳ್ಳಿ ಖಡ್ಗ ಉಡುಗೊರೆಯಾಗಿ ನೀಡಿದರು

ಸಚಿವ ಮಧುಬಂಗಾರಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಬಿ.ಫಾರಂ ಪಡೆದಿದ್ದಾರೆ. ಯುಗಾದಿ ಹಬ್ಬದ ಶುಭ ಘಳಿಗೆಯಲ್ಲಿ ಬಿ.ಫಾರಂ ಪಡೆದಿರುವುದರಿಂದ ಮುಂದೆ ಒಳಿತಾಗಲಿದೆ-
ಗೀತಾ ಶಿವರಾಜಕುಮಾರ್, ಕಾಂಗ್ರೆಸ್ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT