ಶಿವಮೊಗ್ಗ: ಈ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಗೆ ಮಲೆನಾಡು ತತ್ತರಿಸಿದೆ. ನದಿ, ಹಳ್ಳ–ಕೊಳ್ಳ, ತೊರೆ ಸೇರಿದಂತೆ ನೀರಿನ ಎಲ್ಲ ಮೂಲಗಳು ತುಂಬಿವೆ. ಮಳೆಯ ಆರ್ಭಟಕ್ಕೆ ಸಿಲುಕಿ ರಸ್ತೆಗಳು ಅಕ್ಷರಶಃ ಕನಲಿವೆ. ಗ್ರಾಮೀಣ, ನಗರ, ಜಿಲ್ಲಾ ರಸ್ತೆಗಳು, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಹಾನಿಗೀಡಾಗಿವೆ. ಹಲವು ಸೇತುವೆಗಳು ಮುರಿದುಬಿದ್ದಿವೆ.
ತೀರ್ಥಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಷ್ಟ್ರೀಯ ಹೆದ್ದಾರಿ ಗುಡ್ಡ ಕುಸಿದು ತೀವ್ರ ಹಾನಿಗೀಡಾಗಿತ್ತು. ಕೆಲವು ಕಡೆ ಹಾಳಾದ ರಸ್ತೆಗಳಲ್ಲಿ ಜನರ ಸಂಚಾರ ಹಾಗೂ ವಾಹನಗಳ ಸಂಚಾರವೇ ಸ್ಥಗಿತಗೊಂಡಿದ್ದರೆ, ಇನ್ನೂ ಕೆಲವೆಡೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿ ಮಳೆಗಾಲದಲ್ಲಿ ಹಾನಿಗೀಡಾದ ಕೆಲವು ರಸ್ತೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇದು.
ಶಿವಮೊಗ್ಗ: ಜಿಲ್ಲಾ ಕೇಂದ್ರದ ಕೊನೆಯ ಹಳ್ಳಿ, ಶಿವಮೊಗ್ಗ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ಮುಖ್ಯರಸ್ತೆ ಮಳೆಯಿಂದ ಸಂಪೂರ್ಣ ಹಾಳಾಗಿದೆ. ರಸ್ತೆಯ ತುಂಬಾ ಗುಂಡಿಗಳದ್ದೇ ಕಾರುಬಾರು.
ಹಾಡೋನಹಳ್ಳಿ ಗ್ರಾಮಕ್ಕೆ ಶಿವಮೊಗ್ಗ, ಹೊನ್ನಾಳಿ ಭಾಗದಿಂದ ಸೇರುವ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಸುಮಾರು ಎರಡೂವರೆ ಕಿ.ಮೀ ದೂರದ ಈ ರಸ್ತೆಯಲ್ಲಿ ಊರಿನ ವಾಹನಗಳು ಹಾಗೂ ಸರ್ಕಾರಿ ಬಸ್‌ಗಳು ನಿತ್ಯ ಸಂಚರಿಸುತ್ತಿವೆ. ಶಾಲಾ ವಾಹನಗಳು ಇದೇ ಹಾದಿಯಲ್ಲಿ ಸಾಗುತ್ತವೆ. ರಸ್ತೆ ಅತ್ಯಂತ ಕಿರಿದಾಗಿದ್ದು ಮಗ್ಗುಲಿನಲ್ಲೇ ವಿದ್ಯುತ್ ಕಂಬಗಳು ಇರುವುದರಿಂದ ನಿತ್ಯ ಆತಂಕದಲ್ಲಿಯೇ ಚಾಲಕರು ವಾಹನ ಚಲಾಯಿಸಬೇಕಿದೆ.
ಈ ಎರಡುವರೆ ಕಿಲೋಮೀಟರ್ ದೂರ ಕ್ರಮಿಸಲು ಮುಕ್ಕಾಲು ಗಂಟೆ ಸಂಚರಿಸಬೇಕಾಗಿದೆ. ರಸ್ತೆ ದುರಸ್ತಿ ಮಾಡಿಕೊಡುವಂತೆ ಈಚೆಗೆ ಗ್ರಾಮಸ್ಥರು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದ್ದಾರೆ.
‘ಗ್ರಾಮದಿಂದ ಆಲಕಟ್ಟೆ ಚೌಡಮ್ಮನ ದೇವಸ್ಥಾನದವರೆಗೆ ಕೂಡಲೇ ರಸ್ತೆ ದುರಸ್ತಿ ಮಾಡಲು ಜಿಲ್ಲಾಧಿಕಾರಿಗೆ ಕೋರಿದ್ದೇವೆ’ ಎಂದು ಗ್ರಾಮದ ಮುಖಂಡರಾದ ಡಿ.ಸಿ.ಜಗದೀಶ್ವರ ಹಾಗೂ ಕೆ.ಎಸ್.ಈಶ್ವರಪ್ಪ ಹೇಳುತ್ತಾರೆ.
ಕುಂಸಿ: ಕುಂಸಿಯಿಂದ ರೇಚಿಕೊಪ್ಪದ ಸಂಪರ್ಕ ಕಲ್ಪಿಸುವ ರಸ್ತೆ 2001ರಲ್ಲಿ ಗ್ರಾಮ ಸಡಕ್ ಯೋಜನೆಯಡಿ ಡಾಂಬರ್ ಕಂಡಿತ್ತು. ಈಗ 24 ವರ್ಷ ಕಳೆದರೂ ಮತ್ತೆ ಡಾಂಬರೀಕರಣದ ಭಾಗ್ಯ ಇಲ್ಲ. ಈ ಮಾರ್ಗದಲ್ಲಿ ಸೇತುವೆ ಇದ್ದು, ಈ ವರ್ಷದ ಮಳೆಗೆ ಮುಳುಗಿದೆ.
ಈ ಮಾರ್ಗದಲ್ಲಿನ ರೈಲ್ವೆ ಕೆಳ ಸೇತುವೆಯು ಈ ಬಾರಿಯ ಮಳೆಗೆ ಜಲಾವೃತಗೊಂಡು ಜನರು ಓಡಾಟ ಮಾಡದ ಪರಿಸ್ಥಿತಿ ಇದೆ. ಕುಂಸಿ ರೇಚಿಕೊಪ್ಪ ಮಾರ್ಗದ ರಾಗಿಹೊಸಳ್ಳಿ, ಶೆಟ್ಟಿಕೆರೆ, ಶಾಂತಿಕೆರೆ, ಸಿಂಗನಹಳ್ಳಿಗಳ ರಸ್ತೆ ಸಂಪೂರ್ಣ ಹಾಳಾಗಿ ಜನ ಸಂಬಂಧಪಟ್ಟವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸಮೀಪದ ಚೋರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿಕೆರೆಯಿಂದ ಕೊರಗಿ ಗ್ರಾಮಕ್ಕೆ ಸಂಪೂರ್ಣ ಮಣ್ಣಿನ ರಸ್ತೆ ಇದೆ. ಡಾಂಬರೀಕರಣ ಕೋರಿ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತ ಬಂದರೂ, ಕ್ರಮ ಕೈಗೊಂಡಿಲ್ಲ. ಚೋರಡಿಯಿಂದ ಶಿಕಾರಿಪುರ ಮಾರ್ಗದ ಮಧ್ಯೆ ಕೋಟೆಹಾಳಕ್ಕೆ ಹೋಗುವ 3 ಕಿ.ಮೀ. ರಸ್ತೆ ಇಂದಿಗೂ ಡಾಂಬರೀಕರಣಗೊಂಡಿಲ್ಲ. ತುಪ್ಪೂರು ಪಂಚಾಯಿತಿ ವ್ಯಾಪ್ತಿಯ ಮುಖ್ಯ ರಸ್ತೆಯಿಂದ ಸನ್ನಿವಾಸ, ಹೊಬೈಲು ಕಡೆಗೆ ಹೋಗುವ 4 ಕಿ.ಮೀ ಮಣ್ಣಿನ ರಸ್ತೆಯೇ ಇದೆ.
ಈ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಾರೆ.
ಸಾಗರ: ತಾಲ್ಲೂಕಿನಾದ್ಯಂತ ಜುಲೈನಲ್ಲಿ ವಾಡಿಕೆಗಿಂತ ಶೇ 173ರಷ್ಟು ಅಧಿಕ ಮಳೆಯಾಗಿದೆ. ಹೆಚ್ಚು ಮಳೆಯ ಕಾರಣ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ರಸ್ತೆಗಳಿಗೆ ಹೆಚ್ಚಿನ ಹಾನಿ ಉಂಟಾಗಿದೆ. ಮಳೆಗಾಲ ಮುಗಿದ ನಂತರ ಅವುಗಳನ್ನು ಅಭಿವೃದ್ಧಿಪಡಿಸುವುದು ತಾಲ್ಲೂಕು ಆಡಳಿತಕ್ಕೆ ಸವಾಲಾಗಿ ಪರಿಣಮಿಸಲಿದೆ.
ಸಾಗರ ನಗರ ವ್ಯಾಪ್ತಿಯಲ್ಲಿ 8 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದ್ದರೆ, 18 ಕಿ.ಮೀ. ರಸ್ತೆ ಭಾಗಶಃ ಹಾಳಾಗಿದೆ. ₹ 7 ಕೋಟಿ ಮೌಲ್ಯದ ನಷ್ಟ ಉಂಟಾಗಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳ ಅಭಿವೃದ್ಧಿಗೆ ₹ 8.83 ಕೋಟಿ ಅಗತ್ಯವಿದೆ ಎಂದು ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರುವ 144.62 ಕಿ.ಮೀ ಉದ್ದದ ರಸ್ತೆಗಳಿಗೆ ಧಕ್ಕೆ ಉಂಟಾಗಿದೆ. ಅವುಗಳ ಅಭಿವೃದ್ಧಿಗೆ ಹಾಗೂ ಹೊಸ ರಸ್ತೆ ನಿರ್ಮಾಣಕ್ಕೆ ₹ 3.44 ಕೋಟಿ ಅಗತ್ಯವಿದೆ ಎಂದು ಅಂದಾಜು ಮಾಡಲಾಗಿದೆ.
ಅಧಿಕ ಮಳೆಯಿಂದಾಗಿ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೇ ರಸ್ತೆಯ ಮೇಲೆ ನಿಂತು, ಮೋರಿ ಒಡೆದು, ಕೆಲವೆಡೆ ಧರೆ ಕೂಡ ಕುಸಿದು ರಸ್ತೆಗಳಿಗೆ ಹಾನಿ ಉಂಟಾಗಿದೆ.
ಶಿಕಾರಿಪುರ: ಅಧಿಕ ಮಳೆ ಸುರಿದ ಪರಿಣಾಮ ತಾಲ್ಲೂಕಿನಲ್ಲಿ ಕೆಲವು ಗ್ರಾಮೀಣ ರಸ್ತೆಗಳು ಹಾಗೂ ಪಟ್ಟಣದ ರಸ್ತೆಗಳು ಹಾಳಾಗಿವೆ.
ತಾಲ್ಲೂಕಿನ ಮಾಸೂರು ರಸ್ತೆ, ಶಿರಾಳಕೊಪ್ಪ ರಸ್ತೆ ಸೇರಿದಂತೆ ವಿವಿಧ ಗ್ರಾಮಗಳ ಸಂಪರ್ಕ ರಸ್ತೆಗಳು ನಿರಂತರ ಮಳೆಯಿಂದ ಹಾಳಾಗಿವೆ. ಕೆಲವು ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಕೆಲವು ರಸ್ತೆಗಳು ಕುಸಿದಿವೆ. ವಾಹನ ಸವಾರರ ಸುಗಮ ಸಂಚಾರಕ್ಕೆ ಈ ರಸ್ತೆಗಳು ಯೋಗ್ಯವಾಗಿಲ್ಲ.
ಶಿಕಾರಿಪುರದಿಂದ ಮಾಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿ ಬಿದ್ದಿವೆ. ನಿಂಬೆಗೊಂದಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲೂ ಗುಂಡಿ ಬಿದ್ದಿವೆ. ಹೊಸಗೊದ್ದನಕೊಪ್ಪ, ಮುಗಳಗೇರೆಗೆ ತೆರಳುವ ರಸ್ತೆಯೂ ಹದಗೆಟ್ಟಿದೆ.
ಶಿಕಾರಿಪುರದ ವಿನಾಯಕ ನಗರ ಹಾಗೂ ಚನ್ನಕೇಶವ ನಗರ ಸೇರಿದಂತೆ ಪಟ್ಟಣದ ಕೆಲವು ರಸ್ತೆಗಳು ಮಳೆಯಿಂದ ಹಾಳಾಗಿದ್ದು, ಸರಿಪಡಿಸಲು ಸಂಬಂಧಿಸಿದ ಇಲಾಖೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
(ಪೂರಕ ಮಾಹಿತಿ: ಎಂ.ರಾಘವೇಂದ್ರ, ವರುಣ್ ಕುಮಾರ್ ಡಿ. ಬಿಲ್ಗುಣಿ, ಎಚ್.ಎಸ್. ರಘು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.