ಶನಿವಾರ, ಆಗಸ್ಟ್ 13, 2022
26 °C
ಅಭಯಾರಣ್ಯದ ಒಡಲು; ತ್ಯಾಜ್ಯದ ತೊಟ್ಟಿಲು

ಶೆಟ್ಟಿಹಳ್ಳಿ ಅಭಯಾರಣ್ಯ: ಟ್ರಕ್‌ಗಟ್ಟಲೇ ಮದ್ಯ, ನೀರಿನ ಬಾಟಲಿ ಹೆಕ್ಕಿ ತೆಗೆದರು!

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಟ್ರಕ್‌ಗಟ್ಟಲೇ ಮದ್ಯದ ಬಾಟಲಿ, ನೀರಿನ ಖಾಲಿ ಕ್ಯಾನ್‌ಗಳು, ಮದ್ಯದ ಜೊತೆ ನೆಂಚಿಕೆಗೆಂದು ಬಳಕೆಯಾದ ಚಿಪ್ಸ್, ಶೇಂಗಾ, ಖಾರಾ, ಚಕ್ಕುಲಿಯ ಪ್ಲಾಸ್ಟಿಕ್‌ ಪ್ಯಾಕೆಟ್‌ಗಳ ರಾಶಿ.. ಅಲ್ಲಲ್ಲಿ ಕಾಲಿಗೆ ಚುಚ್ಚಿದ ಒಡೆದ ಮದ್ಯದ ಬಾಟಲಿಯ ಚೂರುಗಳು..

ಇದೆಲ್ಲ ಕಾಣಸಿಕ್ಕಿದ್ದು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಕಸದ ಗುಂಪೆಯಲ್ಲಿ ಅಲ್ಲ. ಸಮೀಪದ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಸಕ್ರೆಬೈಲು ಗ್ರಾಮ ಹಾಗೂ ಮಂದಗದ್ದೆ ನಡುವೆ ನಾಲ್ಕು ಕಿ.ಮೀ ವ್ಯಾಪ್ತಿಯ ಹೆದ್ದಾರಿ ಆಸುಪಾಸಿನಲ್ಲಿ!

ಗೌರಿಗದ್ದೆಯ ವಿನಯ್‌ ಗುರೂಜಿ ಹಾಗೂ ಶಿವಮೊಗ್ಗದ ಸರ್ಜಿ ಫೌಂಡೇಶನ್ ನೇತೃತ್ವದಲ್ಲಿ ಗುರುವಾರ ಮುಂಜಾನೆ ನಡೆದ ಸ್ವಚ್ಛತಾ ಅಭಿಯಾನದಲ್ಲಿ ವಿವಿಧ ಶಾಲಾ–ಕಾಲೇಜುಗಳ ನೂರಾರು ವಿದ್ಯಾರ್ಥಿಗಳು, ಸಂಘಟನೆಗಳ ಸದಸ್ಯರು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದು ಅರಣ್ಯದೊಳಗಿನ ತ್ಯಾಜ್ಯ ಹೆಕ್ಕಿ ತೆಗೆದರು. ಹೊಣೆಗೇಡಿತನಕ್ಕೆ ಹಸಿರು ಕಾನನ ಕಸದ ಬುಟ್ಟಿಯಾಗಿ ಬದಲಾಗಿರುವುದು ಕಂಡು ಮಮ್ಮಲ ಮರುಗಿದರು. ಹೊಣೆಗಾರಿಕೆ ಮರೆತವರಿಗೆ ಹಿಡಿಶಾಪ ಹಾಕಿದರು. ಅಲ್ಲಿಯೇ ಆನೆ ಬಿಡಾರದ ಮುಂಬಾಗಿಲಲ್ಲಿ ಅಳವಡಿಸಿದ್ದ ‘ಕಾಡು ದೇವರ ಬೀಡು’ ಎಂಬ ಬೋರ್ಡ್ ಅಲ್ಲಿದ್ದವರನ್ನು ಅಣಕಿಸಿದಂತೆ ಭಾಸವಾಯಿತು.

ಮೋಜು ಮಸ್ತಿಯ ತಾಣ: ಗಾಜನೂರು ದಾಟುತ್ತಿದ್ದಂತೆಯೇ ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿ ಆರಂಭವಾಗುತ್ತದೆ. ಇದು ಜೀವ ವೈವಿಧ್ಯದ ಸೂಕ್ಷ್ಮ ತಾಣದ ಜೊತೆಗೆ ವನ್ಯಜೀವಿ ಧಾಮವೂ ಹೌದು. ಹೀಗಾಗಿ ಇಲ್ಲಿ ಮಾನವ ಹಸ್ತಕ್ಷೇಪ ಶಿಕ್ಷಾರ್ಹ ಅಪರಾಧ. ಆದರೆ, ಕಾಡಿನೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 169 ಮಾತ್ರ ಮೋಜು ಮಸ್ತಿ ತಾಣವಾಗಿ ಮಾರ್ಪಟ್ಟಿದೆ.

ಮಧ್ಯಾಹ್ನದ ನೀರವತೆ, ಸಂಜೆ ಹಾಗೂ ರಾತ್ರಿಯ ರಂಗು ನಶೆಯ ಹೆಶಾರವಕ್ಕೆ ತೆರೆದುಕೊಳ್ಳುತ್ತದೆ. ಹೆದ್ದಾರಿ ಪಕ್ಕದಲ್ಲಿ ಕಾಡಂಚಿಗೆ ವಾಹನಗಳನ್ನು ನಿಲ್ಲಿಸಿಕೊಂಡು ಗುಂಪು ಗುಂಪಾಗಿ ಮೋಜು ಮಸ್ತಿಯಲ್ಲಿ ತೊಡಗುವವರು ತಮ್ಮ ಕೆಲಸ ಮುಗಿದ ನಂತರ ಖಾಲಿ ಬಾಟಲಿಗಳನ್ನು ಅಲ್ಲಿಯೇ ಬಿಸಾಕಿ ಹೋಗುತ್ತಿದ್ದಾರೆ. ಅದರೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯವೂ ಅರಣ್ಯದ ಒಡಲು ಸೇರುತ್ತಿದೆ. ಅದರ ಫಲವೇ ಸ್ವಚ್ಛತಾ ಅಭಿಯಾನದ ವೇಳೆ ಲೋಡ್‌ಗಟ್ಟಲೇ ಮದ್ಯದ ಬಾಟಲಿಗಳನ್ನು ಕಾಡಿನಿಂದ ಹೊರಗೆ ಸಾಗಿಸಲು ಸಾಧ್ಯವಾಯಿತು.

‘ಹೀಗೆ ಎಸೆದ ಖಾಲಿ ಬಾಟಲಿಗಳ ರಾಶಿ ಹಳ್ಳ, ತೊರೆಗೆ ಅಡ್ಡಲಾಗಿ ನೀರಿನ ಸರಾಗ ಹರಿವಿಗೆ ಅಡ್ಡಿಯಾಗುತ್ತಿದೆ. ಜೊತೆಗೆ ಒಡೆದ ಗಾಜಿನ ಬಾಟಲಿಗಳ ಚೂರು ತುಳಿದು ವನ್ಯ ಪ್ರಾಣಿಗಳು ಗಾಯಗೊಳ್ಳುತ್ತಿವೆ. ಜೊತೆಗೆ ಹಸಿರು ಆಹಾರದೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯ ಅವುಗಳ ಹೊಟ್ಟೆ ಸೇರುತ್ತಿದೆ. ಮೋಜು–ಮಸ್ತಿಯ ಸದ್ದು ಅವುಗಳ ಏಕಾಂತಕ್ಕೆ ಅಡ್ಡಿಯಾಗುತ್ತಿದೆ’ ಎಂದು ಶಿವಮೊಗ್ಗದ ಪರಿಸರ ಪ್ರೇಮಿ ಶಂಕರ್ ಹೇಳುತ್ತಾರೆ.

ಅರಣ್ಯ ಇಲಾಖೆ ಮೌನ ರೋಧನ: ಮೋಜು–ಮಸ್ತಿ ಮಾಡುವವರು ಗುಂಪಾಗಿ ನಶೆಯಲ್ಲಿ ಇರುತ್ತಾರೆ. ಹೇಳಿ ಕೇಳಿ ಇದು ಕಾಡು. ನಮಗೆ ಹೊಡೆದು ಹಾಕಿದರೆ  ಕೇಳುವವರು ಯಾರೂ ಇರುವುದಿಲ್ಲ. ಸಮಯ–ಸಂದರ್ಭ ನೋಡಬೇಕಿರುವುದರಿಂದ ಅರಣ್ಯದ ಅತಿಕ್ರಮ ಪ್ರವೇಶ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಕ್ರೆಬೈಲು ವ್ಯಾಪ್ತಿಯ ಅರಣ್ಯ ರಕ್ಷಕರೊಬ್ಬರು (ವಾಚರ್) ಹೇಳುತ್ತಾರೆ. ಹಗಲು–ರಾತ್ರಿ ಕಾಡು ಕಾಯುವ ಬದಲು ರಸ್ತೆ ಸುತ್ತಾಡಲು ನಮ್ಮಲ್ಲಿ ಅಗತ್ಯ ಸಿಬ್ಬಂದಿಯೂ ಇಲ್ಲ. ರಕ್ಷಣೆಗೆ ಬೇಕಿರುವ ಸಲಕರಣೆಗಳೂ ಇಲ್ಲ ಎಂದು ಅಳಲು ತೊಡಿಕೊಳ್ಳುತ್ತಾರೆ.

‘ಇದು ಮೊದಲಿನಿಂದಲೂ ನಡೆಯುತ್ತಿದೆ. ನಾವು ಕೂಡ ಕಳೆದ ಎರಡು ವರ್ಷಗಳಿಂದ ಇಲ್ಲಿ ಕಸ ಎತ್ತುವುದೇ ಆಗಿದೆ. ಇನ್ನು ಮುಂದೆ ಸ್ವಚ್ಛತಾ ಅಭಿಯಾನದಿಂದ ಆದರೂ ಜನಜಾಗೃತಿ ಮೂಡಲಿ’ ಎಂದು ವನ್ಯಜೀವಿ ವಿಭಾಗದ ಡಿಎಫ್‌ಒ ಐ.ಎಂ.ನಾಗರಾಜ ಹೇಳುತ್ತಾರೆ.

‘ಅಲ್ಲಿ ಸ್ಥಳೀಯರು (ಶಿವಮೊಗ್ಗದವರು) ತ್ಯಾಜ್ಯ ಹಾಕುತ್ತಿಲ್ಲ. ಬದಲಿಗೆ ಹೊರಗಿನಿಂದ ಬರುವವರ ಹಾವಳಿಯೇ ಜಾಸ್ತಿ. ಇಲಾಖೆಯಿಂದ ಮಾಡಿದ್ದು ಆಯ್ತು. ಈಗ ಗುರೂಜಿ, ಸರ್ಜಿ ಹಾಗೂ ನೀವು (ಮಾಧ್ಯಮದವರು) ಜನಜಾಗೃತಿ ಮೂಡಿಸಿ’ ಎಂದು ಡಿಎಫ್‌ಒ ಸಲಹೆ ನೀಡುತ್ತಾರೆ.

ಕಾನೂನಿನ ದಂಡ ಬಳಸಿ: ವಿನಯ್‌ ಗುರೂಜಿ

ಇಲ್ಲಿ ಬಂದು ಮೋಜು ಮಾಡುವವರ ಅಲ್ಪ ಹಣ ಒಳ್ಳೆಯ ಕೆಲಸಕ್ಕೆ ಖರ್ಚು ಆಗಲಿ. ಹೀಗಾಗಿ ಕಾಡು ಹಾಳು ಮಾಡುವವರಿಗೆ ಅರಣ್ಯ ಇಲಾಖೆ ಹೆಚ್ಚು ಹೆಚ್ಚು ದಂಡ ಹಾಕಲಿ ಎಂದು ಗೌರಿಗದ್ದೆಯ ವಿನಯ್‌ ಗುರೂಜಿ ಕಿವಿಮಾತು ಹೇಳುತ್ತಾರೆ.

ಕಾಡಿನೊಳಗೆ ಐದು ರೂಪಾಯಿ ಕಸ ಹಾಕಿ ₹500 ದಂಡ ಏಕೆ ಕಟ್ಟುವುದು ಎಂದು ಅವರು ಎಚ್ಚರ ಆಗುತ್ತಾರೆ. ಹೀಗಾಗಿ ಕಾನೂನಿನ ದಂಡ ಬಳಸುವುದು ಅಗತ್ಯವಿದೆ. ಇಲ್ಲಿ ದಂಡದ ರೂಪದಲ್ಲಿ ವಸೂಲಿಯಾದ ಹಣದಲ್ಲಿಯೇ ಅರಣ್ಯ, ಆನೆ ಸಂರಕ್ಷಣಾ ಕೇಂದ್ರದ ನಿರ್ವಹಣೆ ಮಾಡಬಹುದು ಎಂದರು.

ಶೆಟ್ಟಿಹಳ್ಳಿ ಅಭಯಾರಣ್ಯದ ಅಂಚಿನಲ್ಲಿಯೇ ಇಷ್ಟು ಕಸ ಇದೆ. ಇನ್ನು ಒಳಗೆ ಎಷ್ಟು ಇರಬಹುದು ಎಂದು ಪ್ರಶ್ನಿಸಿದರು. ‘ಒತ್ತಡ ನಿವಾರಿಸಲು, ಕಿಕ್‌ಗಾಗಿ ನಶೆ ಹುಡುಕಿಕೊಂಡು ಬರುವ ಬದಲು ಯೋಗ ಮಾಡಿ, ಪುಸ್ತಕ ಓದಿ. ಸಂಗೀತ ಕೇಳಿ. ಕಾಡಿಗೆ ಬಂದು ಶುದ್ಧ ಗಾಳಿ ಕುಡಿಯಿರಿ’ ಎಂದು ಗುರೂಜಿ ಸಲಹೆ ನೀಡುತ್ತಾರೆ.


ಮದ್ಯಪಾನಕ್ಕೆ ಅವಕಾಶ ನೀಡದಂತೆ ಗಾಜನೂರು–ಮಂದಗದ್ದೆ ನಡುವಿನ ಹೋಟೆಲ್‌ಗಳವರಿಗೆ ನೋಟಿಸ್ ಕೊಟ್ಟಿದ್ದೇವೆ. ಬಾಟಲಿ ಕಾಡಿಗೆ ಎಸೆಯುವುದನ್ನು ತಪ್ಪಿಸಲು ಈಗ ಅವರು ಡ್ರಮ್ ಇಟ್ಟಿದ್ದಾರೆ.

- ಐ.ಎಂ.ನಾಗರಾಜ್, ವನ್ಯಜೀವಿ ವಿಭಾಗದ ಡಿಎಫ್ಒ, ಶೆಟ್ಟಿಹಳ್ಳಿ ಅಭಯಾರಣ್ಯ

ಮಂಡ್ಯ ಮೂಲದ ನನಗೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಬಗ್ಗೆ ವಿಶೇಷ ಅಕ್ಕರೆ ಇತ್ತು. ಆದರೆ ಇಲ್ಲಿ ನಮ್ಮವರ (ಸಾರ್ವಜನಿಕರ) ಹೊಣೆಗೇಡಿತನ ಕಂಡು ಖೇದವಾಗುತ್ತಿದೆ.

- ಅಮೃತಾ, ಶಿಕ್ಷಕಿ, ಶಿವಮೊಗ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು