ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿವೃದ್ಧಿಗೆ ಗಾಂಧೀಜಿ ಸ್ವರಾಜ್ಯದ ಪರಿಕಲ್ಪನೆ ಅಗತ್ಯ

ಗಾಂಧೀಜಿ ಸ್ವರಾಜ್ಯದ ಕಲ್ಪನೆ ಮತ್ತು ಪ್ರಯೋಗದ ಕುರಿತು ಉಪನ್ಯಾಸ
Published 13 ಆಗಸ್ಟ್ 2024, 14:27 IST
Last Updated 13 ಆಗಸ್ಟ್ 2024, 14:27 IST
ಅಕ್ಷರ ಗಾತ್ರ

ಶಿವಮೊಗ್ಗ: ಮಹಾತ್ಮ ಗಾಂಧೀಜಿಯವರ ಸ್ವರಾಜ್ಯದ ಪರಿಕಲ್ಪನೆ ಇಟ್ಟುಕೊಂಡು ದೇಶವನ್ನು ಅಭಿವೃದ್ಧಿ ಮಾಡುವುದು ಅಗತ್ಯವಿದೆ ಎಂದು ಸಂಪನ್ಮೂಲ ವ್ಯಕ್ತಿ ಸುಮನಸ ಕೌಲಗಿ ಹೇಳಿದರು. 

ರಾಷ್ಟ್ರೀಯ ಶಿಕ್ಷಣ ಸಮಿತಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿಶ್ವವಿದ್ಯಾಲಯ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ರಾಜ್ಯ ಮಟ್ಟದ ಗಾಂಧಿ ತತ್ವ ಪ್ರಣೀತ ಯುವಜನ ಶಿಬಿರದಲ್ಲಿ ಗಾಂಧೀಜಿ ಸ್ವರಾಜ್ಯದ ಕಲ್ಪನೆ ಮತ್ತು ಪ್ರಯೋಗದ ಕುರಿತು ಉಪನ್ಯಾಸ ನೀಡಿದರು. 

‘ಪ್ರಸ್ತುತ ಅಭಿವೃದ್ಧಿ ಹೆಸರಿನಲ್ಲಿ ಪರಿಸರ, ಗಾಳಿ, ನೀರು ಮತ್ತು ಮಣ್ಣು ಸಂಪೂರ್ಣ ಹಾಳಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಮನುಕುಲಕ್ಕೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಲೇ ಎಚ್ಚೆತ್ತುಕೊಳ್ಳುವುದು ಅನಿವಾರ್ಯವಿದೆ’ ಎಂದು ತಿಳಿಸಿದರು. 

‘ಗಾಂಧೀಜಿಯವರ ಸ್ವರಾಜ್ಯ ಕಲ್ಪನೆ ಶೋಷಣೆ ರಹಿತ ಸಮಾಜ ಕಟ್ಟಬೇಕು ಎಂಬುದಿತ್ತು. ಅವರ ಪ್ರಗತಿಯ ಕನಸು ಸಮಾನತೆ ಸಾರುತ್ತಿತ್ತು. ಪರಿಸರ, ಮಣ್ಣು, ನೀರು ಶುದ್ಧವಾಗಿ ಇರಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ, ಬದಲಾವಣೆ ಹೆಸರಿನಲ್ಲಿ ನಾವು ನೈಸರ್ಗಿಕ ಸಂಪನ್ಮೂಲವನ್ನು ಹಾಳು ಮಾಡುತ್ತಿದ್ದೇವೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಬೇಕಿದೆ’ ಎಂದು ಹೇಳಿದರು.

‘ಅಭಿವೃದ್ಧಿ ಹೊಂದುತ್ತಿರುವ ದೇಶದ ಜನತೆ ನೆಮ್ಮದಿಯಿಂದ ಜೀವಿಸುತ್ತಿಲ್ಲ. ಅಲ್ಲಿ ಮಾನವ ಸಂಬಂಧಗಳಿಗೆ ಬೆಲೆಯಿಲ್ಲ. ಮನುಷ್ಯ ಸಂಬಂಧಗಳಿಂದಲೇ ಶೇ 49ರಷ್ಟು ಸಂತೋಷ ಸಿಗುತ್ತದೆ. ಪ್ರಗತಿಪರ ದೇಶಗಳಲ್ಲಿ ಮಾನವ ಸಂಬಂಧಗಳು ಮಾಯವಾಗಿವೆ’ ಎಂದು ಹೇಳಿದರು.

ಎಟಿಎನ್‌ಸಿ ಕಾಲೇಜು ಪ್ರಾಚಾರ್ಯೆ ಮಮತಾ ಪಿ.ಆರ್‌, ಶಿಬಿರದ ಸಂಚಾಲಕ ಪ್ರೊ.ಕೆ.ಎಂ.ನಾಗರಾಜ, ಸೌಮ್ಯಾ, ಶಶಾಂಕ, ಪ್ರಶಾಂತ್ ಎ.ಜಿ, ರವಿಕುಮಾರ, ಶ್ರೀಲಲಿತಾ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT