ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ವಿಮಾನ ನಿಲ್ದಾಣ | 3 ಕಿ.ಮೀ ರನ್‌ ವೇಗೆ ₹270 ಕೋಟಿ ವೆಚ್ಚ!

Published 12 ಜುಲೈ 2023, 23:30 IST
Last Updated 12 ಜುಲೈ 2023, 23:30 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ವಿಮಾನ ನಿಲ್ದಾಣದಲ್ಲಿ 3 ಕಿ.ಮೀ ಉದ್ದ, 45 ಮೀಟರ್‌ ಅಗಲದ ರನ್‌ ವೇ ನಿರ್ಮಾಣಕ್ಕೆ ₹270 ಕೋಟಿ ಖರ್ಚು ತೋರಿಸಲಾಗಿದೆ. ಪ್ರತೀ ಕಿ.ಮೀಗೆ ₹90 ಕೋಟಿ ವ್ಯಯಿಸಲಾಗಿದೆ.

ಹಳೆಯ ಮತ್ತು ಹೊಸ ರನ್‌ ವೇ ಕಾಮಗಾರಿ ಖರ್ಚಿಗೆ ₹270 ಕೋಟಿ ಖರ್ಚು ಮಾಡಲಾಗಿದೆ. ಅದರಲ್ಲಿ ಇನ್ನೂ ₹21.85 ಕೋಟಿ ಗುತ್ತಿಗೆದಾರರಿಗೆ ಬಾಕಿ ಪಾವತಿಸಬೇಕಿದೆ. ವಿಶೇಷವೆಂದರೆ ವಿಮಾನದ ನಿಲ್ದಾಣದ ಕಟ್ಟಡಕ್ಕೆ ₹140 ಕೋಟಿ ಖರ್ಚು ಮಾಡಲಾಗಿದೆ.

ಆರಂಭದಲ್ಲಿ ₹220 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಉದ್ದೇಶಿಸಿದ್ದ ಇಲ್ಲಿನ ಸೋಗಾನೆ ವಿಮಾನ ನಿಲ್ದಾಣದ ಅಂದಾಜು ಮೊತ್ತ ಅಂತಿಮವಾಗಿ ₹449.22 ಕೋಟಿಗೆ ಹೆಚ್ಚಳಗೊಂಡಿದೆ. ನಿಗದಿತ ವೆಚ್ಚಕ್ಕಿಂತ ದುಪ್ಪಟ್ಟು ವ್ಯಯಿಸಲಾಗಿದೆ ಎಂದು ಮಂಗಳವಾರ ವಿಧಾನಮಂಡಲದ ಅಧಿವೇಶನದಲ್ಲಿ ಪರಿಷತ್ ಸದಸ್ಯ, ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಪ್ರಸ್ತಾಪಿಸಿದ್ದಾರೆ. ಹೊಸ ರನ್‌ವೇಗೆ ಅತಿಹೆಚ್ಚು ಹಣ ಖರ್ಚು ಮಾಡಲಾಗಿದೆ. ಈ ಬಗ್ಗೆ ತನಿಖೆ ಆಗಬೇಕಿದೆ ಎಂದು ಆಗ್ರಹಿಸಿದ್ದಾರೆ.

ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಆಗಿರುವ ಖರ್ಚಿನ ಬಗ್ಗೆ ಮಂಜುನಾಥ ಭಂಡಾರಿ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ, ವೆಚ್ಚದ ಮಾಹಿತಿ ನೀಡಿದರು. ಶಾಸಕರು ಆರೋಪಿಸಿದಾಗ ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಅವ್ಯವಹಾರದ ತನಿಖೆ ನಡೆಸಲಾಗುವುದು ಎಂದರು.

ಶಿವಮೊಗ್ಗ ವಿಮಾನ ನಿಲ್ದಾಣದ ರನ್‌ ವೇ ನಿರ್ಮಾಣದಲ್ಲಿ ದೊಡ್ಡ ಅಕ್ರಮ ಆಗಿದೆ. ಅಷ್ಟು ಹಣದಲ್ಲಿ 3 ಕಿ.ಮೀ ಚಿನ್ನದ ರನ್‌ ವೇ ನಿರ್ಮಿಸಬಹುದಿತ್ತು. ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು.
ಮಂಜುನಾಥ ಭಂಡಾರಿ, ವಿಧಾನಪರಿಷತ್ ಸದಸ್ಯ

ವಿನ್ಯಾಸ ಬದಲಾವಣೆ: ಹಳೆಯ ರನ್ ವೇ ಎಟಿಆರ್-72 ಮಾದರಿ ವಿಮಾನಗಳ ಹಾರಾಟಕ್ಕೆ ಅನುವಾಗುವಂತೆ 2,050 ಮೀಟರ್‌ ಉದ್ದ, 30 ಮೀಟರ್ ಅಗಲಕ್ಕೆ ವಿನ್ಯಾಸಗೊಳಿಸಲಾಗಿತ್ತು. ನಂತರ ಅದನ್ನು ಬೋಯಿಂಗ್‌ ವಿಮಾನ ಇಳಿಯಲು ಅನುಕೂಲವಾಗುವಂತೆ 45 ಮೀಟರ್‌ ಅಗಲ ಹಾಗೂ 3,050 ಮೀಟರ್ ಉದ್ದಕ್ಕೆ ವಿನ್ಯಾಸ ಬದಲಾಯಿಸಿ ಕಾಮಗಾರಿ ಕೈಗೊಳ್ಳಲಾಗಿದೆ. ಹೀಗಾಗಿ ವೆಚ್ಚದಲ್ಲಿ ಏರಿಕೆಯಾಗಿದೆ ಎಂದು ಸಚಿವರು ತಿಳಿಸಿದರು.

ತೀರ್ಥಹಳ್ಳಿಯ ಪ್ರಥಮ ದರ್ಜೆ ಗುತ್ತಿಗೆದಾರ ಇಬ್ರಾಹಿಂ ಷರೀಫ್ ಅವರು ರನ್‌ ವೇ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, ಮರು ವಿನ್ಯಾಸದ ಕಾಮಗಾರಿ ಅವರೇ ಪೂರ್ಣಗೊಳಿಸಿದ್ದಾರೆ. ರನ್‌ ವೇ ನಿರ್ಮಾಣ ಮಾದರಿಯ ಕಾಮಗಾರಿ ಕೈಗೊಂಡ ಅನುಭವ ಇದ್ದ ಕಾರಣ ಅವರಿಗೆ ಗುತ್ತಿಗೆ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಯಾವುದೇ ತನಿಖೆ ಆಗಲಿ: ಬಿ.ವೈ.ರಾಘವೇಂದ್ರ ತಿರುಗೇಟು

‘ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದಾಗಿ ಆರೋಪಿಸಿರುವ ಕಾಂಗ್ರೆಸ್‌ ಸರ್ಕಾರ ಇದನ್ನು ತನಿಖೆಗೆ ಒಳಪಡಿಸುವುದಾಗಿ ಹೇಳುತ್ತಿದೆ. ಅವರು ತನಿಖೆ ಮಾಡಲಿ ಬೇಡ ಎಂದವರ‍್ಯಾರು. ಆದರೆ ಅದಕ್ಕೂ ಮೊದಲು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿ ಆಗಿರುವ ಕಾಮಗಾರಿಯನ್ನು ಕಣ್ಣಾರೆ ನೋಡಲಿ’ ಎಂದು ಸಂಸದ ಬಿ.ವೈ.ರಾಘವೇಂದ್ರ ತಿರುಗೇಟು ನೀಡಿದರು.

‘ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ಬಗ್ಗೆ ನನಗೆ ಗೌರವ ಇದೆ. ಆದರೆ ಅವರು ಒಮ್ಮೆಯೂ ವಿಮಾನ ನಿಲ್ದಾಣಕ್ಕೆ ಭೇಟಿ ನೀಡದೆ ಅಲ್ಲಿನ ವಾಸ್ತವವನ್ನು ಪರಿಶೀಲಿಸದೆಯೇ ಆರೋಪಿಸುತ್ತಿದ್ದಾರೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿರುವಂತಹ ಅತ್ಯುನ್ನತ ಗುಣಮಟ್ಟದ ವಿಮಾನ ನಿಲ್ದಾಣ ಇದಾಗಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ವಿಮಾನ ನಿಲ್ದಾಣದ ಅಂದಾಜು ವೆಚ್ಚ ಆರಂಭದಲ್ಲಿ ಕಡಿಮೆ ಇತ್ತು. ಆದರೆ ಬರಬರುತ್ತಾ ಅದರ ವಿನ್ಯಾಸ ಬದಲಾಯಿತು. ಅತ್ಯಾಧುನಿಕ ಸೌಕರ್ಯ ಕಲ್ಪಿಸಿ ಅದನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕನುಗುಣವಾಗಿ ನಿರ್ಮಿಸಲು ನಿರ್ಧರಿಸಲಾಯಿತು. ಆದ್ದರಿಂದ ಸಹಜವಾಗಿಯೇ ವೆಚ್ಚ ಹೆಚ್ಚಾಗಿದೆ. ಈ ಕುರಿತ ಯಾವ ಮಾಹಿತಿಯೂ ಇಲ್ಲದೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT