ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಣ್ಣು, ತರಕಾರಿ ವಹಿವಾಟಿಗೆ ರಸ್ತೆಗಳೇ ಮಾರುಕಟ್ಟೆ!

ಬೀದಿಬದಿ ವ್ಯಾಪಾರಿಗಳಿಗೆ ಸಿಗದ ಶಾಶ್ವತ ನೆಲೆ, ಸುಗಮ ಸಂಚಾರಕ್ಕೂ ಕಿರಿಕಿರಿ
Published : 15 ಮಾರ್ಚ್ 2021, 5:08 IST
ಫಾಲೋ ಮಾಡಿ
Comments

ಶಿವಮೊಗ್ಗ:ತರಕಾರಿ ಮತ್ತು ಹಣ್ಣು ಮಾರುಕಟ್ಟೆ ನಡೆಸಲು ಸೂಕ್ತ ಸ್ಥಳಾವಕಾಶವಿಲ್ಲದೇ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುವ ಸ್ಥಿತಿ ನಗರದಲ್ಲಿದೆ. ಇದರಿಂದ ವ್ಯಾಪಾರಿಗಳು, ಸಾರ್ವಜನಿಕರು ನಿತ್ಯವೂ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಶಿವಮೊಗ್ಗ ನಗರಸಭೆ2014ರಲ್ಲಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿತು. 7 ವರ್ಷ ಕಳೆದರೂತರಕಾರಿ ಮಾರುಕಟ್ಟೆ ಇಲ್ಲದಿರುವುದು ವ್ಯಾಪಾರಿಗಳಿಗೆ ಕಷ್ಟವಾಗಿದೆ. ನಗರದಲ್ಲಿ ಒಂದು ಕಡೆ ಸುಸಜ್ಜಿತವಾದ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ತಾಜಾ ತರಕಾರಿ ದೊರೆಯುತ್ತಿತ್ತು. ಸೌಲಭ್ಯ ಇಲ್ಲದ ಕಾರಣ ರಸ್ತೆ ಬದಿಯಲ್ಲಿ ತರಕಾರಿ ಮಾರಾಟ, ಖರೀದಿ ಮಾಡಬೇಕಿದೆ.

ಪಾಲಿಕೆ ಪಕ್ಕದಲ್ಲಿರುವ ವೀರಶೈವ ಕಲ್ಯಾಣ ಮಂದಿರದ ರಸ್ತೆ, ವಿನೋಬನಗರ ರಸ್ತೆ ಸೇರಿ ನಗರದ ಒಳ ರಸ್ತೆಗಳ ಬದಿಯೂ ತರಕಾರಿ ಮತ್ತು ಹಣ್ಣು ಮಾರಾಟ ಮಾಡುವುದರಿಂದ ತರಕಾರಿ ಖರೀದಿಗಾಗಿ ಜನರು ಗುಂಪು ಗುಂಪಾಗಿ ಬರುತ್ತಾರೆ. ಇದರಿಂದ ಆ ರಸ್ತೆ ಮಾರ್ಗದಲ್ಲಿ ವಾಹನಗಳ ಸುಗಮ ಸಂಚಾರಕ್ಕೂ ಅಡಚಣೆಯಾಗಿದೆ.

ವ್ಯಾಪಾರಿಗಳಿಗೆ ಸಂಕಷ್ಟ: ಪಾಲಿಕೆ ವ್ಯಾಪ್ತಿಯಲ್ಲಿ ತರಕಾರಿ, ಹಣ್ಣು ಮಾರಾಟಗಾರರು ಸೇರಿ 3,300 ಬೀದಿಬದಿ ವ್ಯಾಪಾರಿಗಳಿದ್ದಾರೆ. ಅವರಲ್ಲಿ 1,880 ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಗಿದೆ. ಎಲ್ಲ ಬೀದಿಬದಿ ವ್ಯಾಪಾರಿಗಳಿಗೆ ಕಾರ್ಡ್ ನೀಡುವ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆ ಎದುರಾದಾಗ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ರಸ್ತೆಗಳನ್ನು ಆಕ್ರಮಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಕಾರಣಕ್ಕೆ ತೆರವಿನ ನೆಪದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಅತ್ತಿಂದಿತ್ತ ಅಲೆದಾಡಿಸುತ್ತಿದ್ದಾರೆ. ಶಾಶ್ವತ ನೆಲೆ ಕಲ್ಪಿಸಲು ಪ್ರಯತ್ನಗಳೇ ನಡೆದಿಲ್ಲ. ಪ್ರಮುಖ ರಸ್ತೆಗಳ ಬದಿ, ಪಾದಚಾರಿಗಳ ಮಾರ್ಗ, ಪಾರ್ಕಿಂಗ್ ಜಾಗದಲ್ಲೇ ವ್ಯಾಪಾರ ಮಾಡುತ್ತಿದ್ದಾರೆ.

ಟೆಂಡರ್ ಕರೆಯಲಿಲ್ಲ, ಮಳಿಗೆ ಸಿಗಲಿಲ್ಲ:‌ ಬೀದಿಬದಿ ವ್ಯಾಪಾರಸ್ಥರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಕಾರಣ ಹಿಂದೆ ಪಾಲಿಕೆ ಆಯುಕ್ತರಾಗಿದ್ದ ಚಾರುಲತಾ ಸೋಮಲ್ ಅವರು ಸರ್ವೆ ಕಾರ್ಯ ನಡೆಸಿ, ಲಕ್ಷ್ಮಿ ಚಿತ್ರಮಂದಿರದಿಂದ ಪೊಲೀಸ್ ಚೌಕಿವರೆಗೆ 287 ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಿದ್ದರು. ಅವರನ್ನು ವಿನೋಬನಗರದ ಶಿವಾಲಯ ದೇವಸ್ಥಾನ ಬಳಿ ಸ್ಥಳಾಂತರಿಸುವ ವ್ಯವಸ್ಥೆ ಮಾಡಿದ್ದರು. ಅವರ ವರ್ಗಾವಣೆ ನಂತರ ಈ ಕಾರ್ಯ ಅರ್ಧಕ್ಕೆ ನಿಂತಿತ್ತು. ಈಗ 287 ವ್ಯಾಪಾರಿಗಳಲ್ಲಿ 73 ವ್ಯಾಪಾರಿಗಳನ್ನು ಆಯ್ಕೆ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಮಳಿಗೆ ನಿರ್ಮಾಣವಾಗಿದೆ. ಟೆಂಡರ್ ಕರೆಯಲು ಸರ್ಕಾರ ಅನುಮತಿ ನೀಡಿದೆ. ಆದರೆ, ಪಾಲಿಕೆ ಅಧಿಕಾರಿಗಳು ಟೆಂಡರ್ ಕರೆಯದೇ ವಿಳಂಬ ಮಾಡುತ್ತಿದ್ದಾರೆ.

ನನೆಗುದಿಗೆ ಬಿದ್ದ ಮಾರುಕಟ್ಟೆ ಕಾಮಗಾರಿ: ಖಾಸಗಿ ಬಸ್‌ ನಿಲ್ದಾಣದ ಹಿಂಭಾಗದ ಅಕ್ಕಪಕ್ಕ ರಸ್ತೆಯಲ್ಲಿ ಪ್ರತಿ ಮಂಗಳವಾರ ಸಂತೆ ನಡೆಯುತ್ತಿದೆ. ಇದರಿಂದ ಬಸ್ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ವ್ಯಾಪಾರಸ್ಥರಿಗೂ ತೊಂದರೆಯಾಗುತ್ತಿದೆ. ಶಿವಮೊಗ್ಗದ ಕೆಎಸ್ಆರ್‌ಟಿಸಿ ಡಿಪೊ ಬಳಿ 110 ಮಳಿಗೆಯುಳ್ಳ ಮಾರುಕಟ್ಟೆ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿತ್ತು. ಆದರೆ, ಈ ಕಾಮಗಾರಿಯೂ ನನೆಗುದಿಗೆ ಬಿದ್ದಿದೆ. ಹೀಗಾಗಿ, ತರಕಾರಿ ಹಾಗೂ ಹಣ್ಣು ವ್ಯಾಪಾರಸ್ಥರಿಗೆ ರಸ್ತೆ ಬದಿಗಳೇ ಮಾರುಕಟ್ಟೆ ಸ್ಥಳವಾಗಿವೆ.

‘ಉದ್ಯೋಗಕ್ಕಾಗಿ ಬೇರೆ ಜಿಲ್ಲೆಗಳಿಗೆ ವಲಸೆ ಹೋಗಿದ್ದವರು ಕೊರೊನಾ ಕಾರಣದಿಂದ ವಾಪಸ್‌ ಬಂದಿದ್ದಾರೆ. ಜೀವನ ರೂಪಿಸಿಕೊಳ್ಳಲು ತರಕಾರಿ ವ್ಯಾಪಾರ ಪ್ರಾರಂಭಿಸಿದ್ದೇವೆ. ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ತೆಗದುಕೊಂಡು ವ್ಯವಸ್ಥಿತವಾದ ತರಕಾರಿ ಮಾರುಕಟ್ಟೆ ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಹೊಸದಾಗಿ ತರಕಾರಿ ವ್ಯಾಪಾರ ಆರಂಭಿಸಿರುವ ವಿನಯ್.

ಮಾರಾಟ ಸಮುಚ್ಚಯ; ಸರ್ಕಾರಕ್ಕೆ ಪತ್ರ
ತರಕಾರಿ, ಹಣ್ಣು ಸೇರಿ ಎಲ್ಲ ಬಗೆಯ ಬೀದಿಬದಿ ವ್ಯಾಪಾರಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಶೀಘ್ರ ಎಲ್ಲ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಗುವುದು. ನಗರದಲ್ಲಿ ಫುಡ್‌ಕೋರ್ಟ್ ರೂಪದಲ್ಲಿ ತರಕಾರಿ ಮಾರುಕಟ್ಟೆ, ಮಹಿಳಾ ಬಜಾರ್ ನಿರ್ಮಾಣಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

***

ರಸ್ತೆ ಬದಿ ವ್ಯಾಪಾರಿಗಳಿಗೂ ಬೇಕಿದೆ ನೆಲೆ
-ರಿ.ರಾ.ರವಿಶಂಕರ್

ರಿಪ್ಪನ್‌ಪೇಟೆ: ಪಟ್ಟಣ ಬೆಳೆದಂತೆ ಬೀದಿಬದಿ ವ್ಯಾಪಾರಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಅಲ್ಲದೇ, ಕೊರೊನಾ ಲಾಕ್‌ಡೌನ್‌ನಲ್ಲಿ ಬದಲಾದ ವೃತ್ತಿಯಿಂದ ವ್ಯಾಪಾರ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಮಾಲ್‌ ಹಾಗೂ ಹೋಟೆಲ್‌ಗಳಲ್ಲಿ ದುಪ್ಪಟ್ಟು ಬೆಲೆಗೆ ಸಿಗುವ ಸಾಮಗ್ರಿಗಳು ಇಲ್ಲಿ ಅರ್ಧ ಬೆಲೆಗೆ ಸಿಗುತ್ತದೆ. ಸಂಜೆ ಹೊತ್ತಿನ ಪಾನಿಪೂರಿ, ಗೋಬಿ ಮಂಚೂರಿ, ಮಿರ್ಚಿ ಮಂಡಕ್ಕಿ, ಹೂವು, ಹಣ್ಣು ಮುಂತಾದ ಸಣ್ಣ ಪುಟ್ಟ ತರಕಾರಿ ವ್ಯಾಪಾರಸ್ಥರು, ಮಧ್ಯಮ ಹಾಗೂ ಬಡವರ ಪಾಲಿಗೆ ಇಂತಹ ತಾಣಗಳೇ ಅಚ್ಚುಮೆಚ್ಚು.

‘ಸಂಜೆಯಾಗುತ್ತಿದ್ದಂತೆ ಗಿಜಿಗುಡುವ ಜನಸಂದಣಿ, ಸಾಲದಕ್ಕೆ ವಾಹನಗಳ ಭರಾಟೆಯಿಂದ ಸಂಚಾರಕ್ಕೂ ಅಡಚಣೆ. ಕಿಷ್ಕಿಂಧೆಯಂತಹ ರಸ್ತೆಬದಿಯ ವ್ಯಾಪಾರಸ್ಥರಿಂದ ಪಾದಚಾರಿಗಳಿಗೂ ಕಿರಿಕಿರಿ ಆಗುತ್ತಿದೆ. ಸ್ಥಳೀಯ ಪಂಚಾಯಿತಿ ನಗರದ ಮಾದರಿಯಲ್ಲಿ ಬೆಳಿಗ್ಗೆ ತರಕಾರಿ ಮಾರ್ಕೆಟ್‌, ಸಂಜೆ ಫುಡ್‌ಕೋರ್ಟ್‌ ಮಾದರಿಯ ಸಂಕೀರ್ಣ ನಿರ್ಮಿಸಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕಿದೆ’ ಎನ್ನುತ್ತಾರೆ ಸ್ಥಳೀಯರಾದ ಶ್ರೀಹರ್ಷ.

‘ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗುವ ಅವಕಾಶವಿದೆ. ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಜೀವನೋಪಾಯಕ್ಕೆ ಸೂಕ್ತ ಸ್ಥಳಾವಕಾಶ ಕಲ್ಪಿಸುವ ಗುರುತರ ಜವಾಬ್ದಾರಿ ಇದೆ. ಸದಸ್ಯರೊಂದಿಗೆ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳುತ್ತೇವೆ’ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್‌.

***

ತರಕಾರಿ ಮಾರಾಟಗಾರರಲ್ಲಿ ಸ್ಪರ್ಧೆ
-ಎಚ್.ಎಸ್. ರಘು

ಶಿಕಾರಿಪುರ: ಕೊರೊನಾ ಕಾರಣದಿಂದ ತರಕಾರಿ ಮಾರಾಟಗಾರರಲ್ಲಿ ಸಂಖ್ಯೆ ಹೆಚ್ಚಾಗಿದ್ದು, ತರಕಾರಿ ಮಾರಾಟಗಾರರಲ್ಲಿ ಹೆಚ್ಚು ಸ್ಪರ್ಧೆ ನಡೆಯುತ್ತಿರುವುದು ಕಂಡುಬಂದಿದೆ. ಅಲ್ಲದೇ ಸೂಕ್ತ ಸ್ಥಳ ಇಲ್ಲದೇ ಪರದಾಡುವಂತಾಗಿದೆ.

ಕೊರೊನಾಕ್ಕಾಗಿ ಹೇರಿದ ಲಾಕ್‌ಡೌನ್‌ ಸಂದರ್ಭದಲ್ಲಿ ಇತರೆ ವ್ಯಾಪಾರ ವಹಿವಾಟಿಗೆ ಅವಕಾಶವಿರಲಿಲ್ಲ. ಆಗ ಪಟ್ಟಣದಲ್ಲಿ ಹಲವು ವೃತ್ತಿ ನಡೆಸುತ್ತಿದ್ದವರು ತರಕಾರಿ ಮಾರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಲಾಕ್‌ಡೌನ್‌ಗೂ ಮುಂಚೆ ತರಕಾರಿ ಮಾರುಕಟ್ಟೆಯಲ್ಲಿ ಕೇವಲ 7 ತರಕಾರಿ ಮಾರಾಟ ಮಳಿಗೆಗಳು ಮಾತ್ರ ಇದ್ದವು. ಈಗ 40 ತರಕಾರಿ ಮಾರಾಟ ಮಳಿಗೆಗಳು ದಿನದ ಮಾರುಕಟ್ಟೆಯಲ್ಲಿ ಕಂಡುಬರುತ್ತಿವೆ. ಪ್ರಸ್ತುತ ಹಳೇ ಸಂತೆ ಮೈದಾನದ ಪಕ್ಕದ ರಸ್ತೆಯಲ್ಲಿ ದಿನದ ತರಕಾರಿ ಮಾರುಕಟ್ಟೆ ಇದೆ. ಅಲ್ಲಿ ಜಾಗ ಸಾಲುತ್ತಿಲ್ಲ.

ವಾರದ ಸಂತೆಯಲ್ಲಿ ನೂರಾರು ತರಕಾರಿ ಮಾರಾಟ ಮಳಿಗೆಗಳು ಕಂಡುಬರುತ್ತವೆ. ವ್ಯಾಪಾರದಲ್ಲಿ ಹೆಚ್ಚು ಸ್ಪರ್ಧೆ ಕಂಡು ಬರುತ್ತಿವೆ. ಕೆಲವೊಮ್ಮೆ ವ್ಯಾಪಾರ ಉತ್ತಮವಾದರೆ ಕೆಲವೊಮ್ಮೆ ವ್ಯಾಪಾರವಿಲ್ಲದೇ ತರಕಾರಿ ಮಾರಾಟಗಾರರು ನಷ್ಟ ಅನುಭವಿಸುತ್ತಿದ್ದಾರೆ. ಬಹುತೇಕ ವ್ಯಾಪಾರಸ್ಥರು ತಾವು ಹಾಕಿದ ಬಂಡವಾಳ ಬಂದರೆ ಸಾಕು ಎಂಬ ನಿರೀಕ್ಷೆಯಲ್ಲಿರುತ್ತಾರೆ.

‘ತರಕಾರಿ ಮಾರಾಟಗಾರರ ಸಂಖ್ಯೆ ಹೆಚ್ಚಾಗಿದ್ದು, ಸ್ಪರ್ಧೆ ಇದೆ. ಕೆಲವೊಮ್ಮೆ ತರಕಾರಿ ಖರೀದಿಸಲು ಹಾಕಿದ ಬಂಡವಾಳ ಕೂಡ ವಾಪಸ್‌ ಬರುವುದಿಲ್ಲ’ ಎಂದು ವ್ಯಾಪಾರಿ ಸಂತೋಷ್ ಅಳಲು ತೋಡಿಕೊಂಡರು.

***

ವ್ಯಾಪಾರಿಗಳಿಗೆ ತಪ್ಪದ ತೊಂದರೆ
-
ಕೆ.ಎನ್.ಶ್ರೀಹರ್ಷ

ಭದ್ರಾವತಿ: ಇಲ್ಲಿನ ಹಳೇನಗರ ಬಸವೇಶ್ವರ ವೃತ್ತ ಸಮೀಪದ ಮಾರುಕಟ್ಟೆ, ಬಿ.ಎಚ್.ರಸ್ತೆ ರೈಲ್ವೆ ನಿಲ್ದಾಣ ಸಮೀಪದ ತರಕಾರಿ ಮಾರುಕಟ್ಟೆ ಜತೆ ಹಲವು ತರಕಾರಿ ಗಾಡಿ ಹಾಗೂ ಅಂಗಡಿಗಳು ನೆಲೆ ನಿಂತಿರುವುದು ಇಲ್ಲಿನ ವ್ಯಾಪಾರಿಗಳಿಗೆ ನೆರವಾಗಿದೆ.

ನಗರದ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಬಿ.ಎಚ್.ರಸ್ತೆಯಲ್ಲಿದ್ದ ತಿಮ್ಮಯ್ಯ ಮಾರುಕಟ್ಟೆ ನೆಲಸಮವಾಗಿ ಅಲ್ಲಿ ಸುಸಜ್ಜಿತ ಕಟ್ಟಡ ನೆಲೆ ನಿಂತ ನಂತರ ತರಿಕಾರಿ ವ್ಯಾಪಾರಿಗಳು ಒಂದಿಷ್ಟು ತೊಂದರೆ ಅನುಭವಿಸುವ ಜತೆಗೆ ಗಾಡಿ ಹಾಗೂ ರಸ್ತೆಬದಿ ವ್ಯಾಪಾರಕ್ಕೆ ಮುಂದಡಿ ಇಡುವ ಪರಿಸ್ಥಿತಿ ಸೃಷ್ಟಿಯಾಗಿದೆ.

‘ಬಸವೇಶ್ವರ ವೃತ್ತದ ಮಾರುಕಟ್ಟೆ ಮಳಿಗೆಯಲ್ಲಿ ತರಕಾರಿ ಮಾರಾಟಕ್ಕಿಂತ ಹೆಚ್ಚಾಗಿ ಹೂವು, ಹಣ್ಣು ವ್ಯಾಪಾರ ಹೆಚ್ಚಿದ್ದು, ಸಂಜೆ ವೇಳೆ ವೃತ್ತದಲ್ಲಿ ನಡೆಯುವ ಅದರಲ್ಲೂ ಭಾನುವಾರ ಸಂಜೆ ನಡೆಯುವ ರಸ್ತೆ ಬದಿ ತರಕಾರಿ ಮಾರಾಟಕ್ಕೆ ಶಾಶ್ವತ ಕಾಯಕಲ್ಪ ಮಾಡಿಕೊಡುವ ಅಗತ್ಯವಿದೆ’ ಎನ್ನುತ್ತಾರೆ ಹಳೇನಗರದ ನಿವಾಸಿ ಯಶವಂತ.

‘ಈ ಎರಡು ಜಾಗಗಳ ಹೊರತಾಗಿ ನಗರದ ಉಳಿದೆಡೆ ತರಕಾರಿ ಗಾಡಿ ವ್ಯಾಪಾರವೇ ಪ್ರಧಾನವಾಗಿದ್ದರೂ ದಿನಸಿ ಅಂಗಡಿಯಲ್ಲೂ ತರಕಾರಿ ಮಾರಾಟ ನಡೆಯುತ್ತಿರುವುದು ಜನರಿಗೆ ಹೆಚ್ಚಿನ ಅನುಕೂಲ ಉಂಟು ಮಾಡಿದೆ’ ಎನ್ನುತ್ತಾರೆ ನಾಗರಾಜ್.

‘ಕೋವಿಡ್ ಸಂಕಷ್ಟದಲ್ಲಿ ಬೇರೆ ಕಸುಬಿನಲ್ಲಿ ತೊಡಗಿದ್ದ ಅನೇಕ ಮಂದಿ ತಮ್ಮ ಬಳಿ ಇದ್ದ ಆಟೊ, ಓಮ್ನಿ ಮೂಲಕ ತರಕಾರಿ ಮಾರಾಟಕ್ಕೆ ಮುಂದಾಗಿದ್ದು ಸಹ ನಮ್ಮ ವ್ಯಾಪಾರಕ್ಕೆ ಅಡ್ಡಿಯಾಯಿತು. ನಗರಸಭೆ ಆತ್ಮನಿರ್ಭರ ಯೋಜನೆಯಲ್ಲಿ ಕೊಟ್ಟ ಐದು ಸಾವಿರ ನೆರವು ಬಿಟ್ಟರೆ ಬೇರೇನೂ ಸಿಕ್ಕಿಲ್ಲ’ ಎಂದು ಅಳಲು ತೋಡಿಕೊಳ್ಳುತ್ತಾರೆ ವ್ಯಾಪಾರಿ ಗೋವಿಂದ.

ಕೋರ್ಟ್ ರಸ್ತೆ, ತರೀಕೆರೆ ರಸ್ತೆ, ಚನ್ನಗಿರಿ ರಸ್ತೆ, ವಿಐಎಸ್ಎಲ್ ರಸ್ತೆ, ಜನ್ನಾಪುರ ಹೀಗೆ ಹಲವು ಭಾಗಗಳಲ್ಲಿ ಫುಟ್‌ಪಾತ್‌ ವ್ಯಾಪಾರದಿಂದ ಬದುಕು ನಡೆಸುವವರ ಸಂಖ್ಯೆ ಇದ್ದೇ ಇದೆ. ಆದರೆ, ಭಾನುವಾರ ಸಂತೆ ನಂತರ ನಡೆಯುವ ವಾರಪೂರ್ತಿ ತರಕಾರಿ ವಹಿವಾಟಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿದಲ್ಲಿ ಎಲ್ಲರಿಗೂ ಅನುಕೂಲ’ ಎಂಬ ಮಾತು ನಾಗರಿಕರದ್ದು.

***

ನಗರದಲ್ಲಿ ಎಲ್ಲೆಲ್ಲಿ ಮಾರುಕಟ್ಟೆಗೆ ಸೂಕ್ತ ಸ್ಥಳ ಸಿಗವುದೋ ಅಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಮೂಲಕ ಶಿವಮೊಗ್ಗವನ್ನು ಮಾದರಿ ನಗರವನ್ನಾಗಿಸಲು ಕ್ರಮ ಕೈಗೊಳ್ಳಲಾಗಿದೆ.
-ಚಿದಾನಂದ್ ವಟಾರೆ, ಪಾಲಿಕೆ ಆಯುಕ್

***

ಶಿವಮೊಗ್ಗ ನಗರದಲ್ಲಿ ಮಾರುಕಟ್ಟೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಇನ್ನಾದರೂ ಪಾಲಿಕೆ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳಿಗೆ ಶಾಶ್ವತ ಸೂರು ಕಲ್ಪಿಸಿಕೊಡಬೇಕು.
-ಎಚ್.ಸಿ.ಯೋಗೀಶ್, ಪಾಲಿಕೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT