ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಗೇರು ಸಂರಕ್ಷಣೆಗಾಗಿ ಅರಣ್ಯಕ್ಕೆ ಕೊಡಲಿ

ನೆಡುತೋಪಿನಲ್ಲಿ ಯಂತ್ರಗಳ ಬಳಕೆಗೆ ಸ್ಥಳೀಯರ ಆಕ್ಷೇಪ l ಭೂಕುಸಿತ ಸಂಭವಿಸುವ ಆತಂಕ
Last Updated 2 ಆಗಸ್ಟ್ 2020, 23:59 IST
ಅಕ್ಷರ ಗಾತ್ರ

ಶಿವಮೊಗ್ಗ: ಪಶ್ಚಿಮಘಟ್ಟದಪಾಳು ಬಿದ್ದಿರುವ ಪ್ರದೇಶಗಳಲ್ಲಿ ಗೇರು ನೆಡುತೋಪುಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಗೇರು ಅಭಿವೃದ್ಧಿ ನಿಗಮವು ವೈವಿಧ್ಯಮಯ ಜೀವ ಸಂಕುಲ ಒಳಗೊಂಡ ಸ್ವಾಭಾವಿಕ ಅರಣ್ಯವನ್ನೇ ತೆರವುಗೊಳಿಸಲು ಮುಂದಾಗಿದೆ.

ಗೇರು ಅಭಿವೃದ್ಧಿ ನಿಗಮಕ್ಕೆ ಕಚ್ಚಾ ಸಾಮಗ್ರಿ ಪೂರೈಸಲು ಅಗತ್ಯವಿರುವ ಗೇರು ಮರಗಳನ್ನು ಬೆಳೆಸಿಕೊಳ್ಳಲು ಅರಣ್ಯ ಇಲಾಖೆ ಎರಡು ದಶಕಗಳ ಹಿಂದೆ ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಭೂಮಿ ನೀಡಿತ್ತು.

ಕರಾವಳಿ, ಮಲೆನಾಡಿನ ಇಳಿಜಾರು ಪ್ರದೇಶಗಳು, ಗುಡ್ಡ ನದಿ ಕಣಿವೆ ಪ್ರದೇಶಗಳಲ್ಲಿ ಗೇರು ಸಸಿಗಳನ್ನು ನೆಟ್ಟು ಪೋಷಿಸಲಾಗಿತ್ತು. ಹೊನ್ನಾವರ ತಾಲ್ಲೂಕಿನ ಕರಿಕಾನ ಪರಮೇಶ್ವರಿ ಬೆಟ್ಟ, ಶರಾವತಿ ನದಿ ಕಣಿವೆಯ ಖಾರ್ವಾ ಬೆಟ್ಟ, ಸಿದ್ದಾಪುರದ ಅಘನಾಶಿನಿ ಕಣಿವೆ, ಹೊಸನಗರ ತಾಲ್ಲೂಕಿನ ಹನಿಯಾ ಗುಡ್ಡ, ಕುಂದಾಪುರದ ವರಾಹಿ ಪ್ರದೇಶಗಳಲ್ಲಿ ನೆಡುತೋಪುಗಳು ಹರಡಿಕೊಂಡಿವೆ.

ದಶಕಗಳ ಹಿಂದೆಯೇ ನಿಗಮ ನಷ್ಟದ ಹಾದಿಯಲ್ಲಿ ಸಾಗಿತ್ತು. ಗೇರು ಮರಗಳು ಕಸುವಿಲ್ಲದೆ ಕುಂದಿದ್ದವು. ಅಂತಹ ನೆಡುತೋಪುಗಳಲ್ಲಿ ಕಾಲಾನಂತರ ವಿವಿಧ ಜಾತಿಯ ಅಮೂಲ್ಯ ಸಸ್ಯಸಂಪತ್ತು ಒಳಗೊಂಡ ಸ್ವಾಭಾವಿಕ ಅರಣ್ಯ, ಜೀವ ವೈವಿಧ್ಯಗಳ ಸಸ್ಯ ಸಂಕುಲ ತಲೆ ಎತ್ತಿದೆ. ಔಷಧೀಯ ಸಸ್ಯಗಳೂ ಹೇರಳವಾಗಿವೆ.

ಇಂತಹ ನೆಡುತೋಪುಗಳಲ್ಲಿ ಕಮರಿ ಹೋಗಿರುವ ಗೇರು ಮರಗಳಿಗೆ ಕಸುವು ನೀಡಲು, ನೆಡುತೋಪುಗಳನ್ನು ಸಂರಕ್ಷಿಸಲು ಮುಂದಾಗಿರುವ ನಿಗಮದ ಅಧಿಕಾರಿಗಳು ಜೆಸಿಬಿ, ಇಟಾಚಿ ಮತ್ತಿತರ ದೊಡ್ಡದೊಡ್ಡ ಯಂತ್ರಗಳನ್ನು ನೆಡುತೋಪುಗಳ ಒಳಗೆ ಇಳಿಸಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನ ಭಾರತೀಪುರ ಬಳಿ ಎಡಗುಡ್ಡೆಯ 380 ಎಕರೆ ಪ್ರದೇಶದಲ್ಲಿ ಇರುವ ನೆಡುತೋಪು ಸ್ವಚ್ಛಗೊಳಿಸಲು ಹಲವು ಯಂತ್ರಗಳು ಇಳಿದಿವೆ. ಅಲ್ಲಿ 135 ಜಾತಿಯ ಸಸ್ಯಪ್ರಭೇದಗಳ 1.20 ಲಕ್ಷ ಮರಗಳಿವೆ. ಹೀಗಾಗಿ ತಕ್ಷಣ ಯಂತ್ರಗಳ ಕಾರ್ಯಾಚರಣೆ ಸ್ಥಗಿತಗೊಳಿಸಬೇಕು ಎನ್ನುವುದು ಕಿಸಾನ್ ಸಂಘದ ಕಾರ್ಯಕರ್ತರ ಒತ್ತಾಯ.

ಗುಡ್ಡೆಕೊಪ್ಪ, ಜಯನಗರ ಸೇರಿ ಸುತ್ತಮುತ್ತಲ ಗ್ರಾಮಗಳ ಜನರು ಯಂತ್ರಗಳ ಕಾರ್ಯಾಚರಣೆಗೆ ತಡೆಒಡ್ಡಿದ್ದಾರೆ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಶಾಸಕ ಆರಗ ಜ್ಞಾನೇಂದ್ರ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತಕ್ಷಣವೇ ಯಂತ್ರಗಳ ಬಳಕೆ ಸ್ಥಗಿತಗೊಳಿಸಬೇಕು ಎಂದು ಸೂಚಿಸಿದ್ದಾರೆ.

‘ಮಲೆನಾಡಿನ ಯಾವ ಭಾಗದಲ್ಲೂ ಯಂತ್ರಗಳನ್ನು ಬಳಸಬಾರದು. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕು’ ಎನ್ನುವುದು ಪರಿಸರವಾದಿ ವೈ.ಡಿ.ಶ್ರೀವಾತ್ಸವ ಅವರ ಆಗ್ರಹ.

* ಯಂತ್ರಗಳ ಮೂಲಕ ನೆಡುತೋಪುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಅಪಾಯಕಾರಿ. ಇದು ಭೂಕುಸಿತಕ್ಕೆ ಕಾರಣವಾಗಬಹುದು.

- ಅನಂತ ಹೆಗಡೆ ಅಶೀಸರ, ಅಧ್ಯಕ್ಷರು, ಜೀವ ವೈವಿಧ್ಯ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT