ಶನಿವಾರ, ಏಪ್ರಿಲ್ 1, 2023
23 °C
ಡಿ.ಆನಂದ್‌ ಪದಚ್ಯುತಿಗೆ ಸಭೆ ನಿಗದಿಪಡಿಸಲು ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದ 10 ನಿರ್ದೇಶಕರು

ಶಿಮುಲ್ ಅಧ್ಯಕ್ಷರ ಅವಿಶ್ವಾಸ ಮಂಡನೆಗೆ ಮುಹೂರ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಅಪೇಕ್ಷೆಯಂತೆ ಅಧ್ಯಕ್ಷರ ಅವಿಶ್ವಾಸ ಮಂಡನೆ ಸಭೆಗೆ ಜುಲೈ 15ರಂದು ಮುಹೂರ್ತ ನಿಗದಿಯಾಗಿದ್ದು, ನಾಗೇಶ್‌ ಡೋಂಗ್ರೆ ಅವರು ಸರ್ಕಾರದಿಂದ ಅಧಿಕೃತ ಪ್ರಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ.

ಅವಿಶ್ವಾಸ ಗೊತ್ತುವಳಿ ಪ್ರಕ್ರಿಯೆಯ ಮೂಲಕ ಒಕ್ಕೂಟದ ಅಧ್ಯಕ್ಷ ಡಿ.ಆನಂದ್‌ ಅವರನ್ನು ಪದಚ್ಯುತಿಗೊಳಿಸಲು ಸಭೆ ನಿಗದಿಪಡಿಸುವಂತೆ 14 ನಿರ್ದೇಶಕರ ಪೈಕಿ 10 ನಿರ್ದೇಶಕರು ಈಚೆಗೆ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು.

ಆದರೆ, ಕೊರೊನಾ ಕಾರಣ ಸಭೆ ಕರೆಯಲು ಸಾಧ್ಯವಾಗಿರಲಿಲ್ಲ. ಈಗ ಲಾಕ್‌ಡೌನ್‌ ಸಡಿಲಿಕೆ ಬೆನ್ನಲ್ಲೇ ನಾಗೇಶ್‌ ಡೋಂಗ್ರೆ ಅವರು ಸಭೆ ನಡೆಸಲು ದಿನ ನಿಗದಿ‍ಪಡಿಸಿ ಎಲ್ಲ ನಿರ್ದೇಶಕರಿಗೂ ನೋಟಿಸ್ ನೀಡಿದ್ದಾರೆ.

ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾದರೂ ರಾಜ್ಯ ಸರ್ಕಾರ 6 ತಿಂಗಳು ಚುನಾವಣೆ ನಡೆಸದಂತೆ ಆದೇಶಿಸಿರುವ ಕಾರಣ ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಅವಿಶ್ವಾಸಕ್ಕೆ ಗೆಲುವು ಸಿಕ್ಕರೆ ಉಪಾಧ್ಯಕ್ಷ ಬಸಪ್ಪ ಅವರು ಅಧ್ಯಕ್ಷರಾಗಿ 6 ತಿಂಗಳ ಕಾಲ ಮುಂದುವರಿಯುತ್ತಾರೆ. ಒಂದು ವೇಳೆ ಸರ್ಕಾರ ಚುನಾವಣೆಗೆ ಅವಕಾಶ ಮಾಡಿಕೊಟ್ಟರೆ ಚುನಾವಣೆ ನಡೆದು ಹೊಸ ಅಧ್ಯಕ್ಷರ ಆಯ್ಕೆ ಆಗಲಿದೆ.

ಜುಲೈ 15ರಂದು ಬೆಳಿಗ್ಗೆ 11ಕ್ಕೆ ಅವಿಶ್ವಾಸ ಮಂಡನೆ ಸಭೆ ನಡೆಯಲಿದೆ. ಅಂದು ಕೈ ಎತ್ತುವ ಮೂಲಕ ಮತದಾನ ನಡೆಯಲಿದೆ.
ನಾಗೇಶ್‌ ಡೋಂಗ್ರೆ, ಸಹಕಾರ ಸಂಘದ ನಿಬಂಧಕ

‘ಅಧ್ಯಕ್ಷರು ರಾಜೀನಾಮೆ ನೀಡಲಿ’

ಶಿರಾಳಕೊಪ್ಪ: ‘ಶಿಮುಲ್ ಹಾಲು ಒಕ್ಕೂಟದ ಅಧ್ಯಕ್ಷ ಆನಂದ ಅವರ ವಿರುದ್ಧ 14 ಜನರಲ್ಲಿ 10 ಜನರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ. 6 ತಿಂಗಳಿನಿಂದ ಸರಿಯಾಗಿ ಸಭೆಗಳು ನಡೆದಿಲ್ಲ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ. ಇವರ ಅಧಿಕಾರದ ದಾಹಕ್ಕೆ ಹಾಲು ಉತ್ಪಾದಕರನ್ನು ಬಲಿಪಶು ಮಾಡಿದ್ದಾರೆ’ ಎಂದು ಶಿಮುಲ್‌ ನಿರ್ದೇಶಕ ನಿಂಬೆಗುಂದಿ ಸಿದ್ದಲಿಂಗಪ್ಪ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಷ್ಟೆಲ್ಲ ವಿರೋಧದ ನಡುವೆ ಕೆಲಸ ಮಾಡುವುದಕ್ಕಿಂತ ಅಧ್ಯಕ್ಷರು ರಾಜೀನಾಮೆ ನೀಡುವುದೇ ಲೇಸು. ಅದನ್ನು ಬಿಟ್ಟು ಅವರು ಕೋರ್ಟ್‌ಗೆ ಹೋಗಿರುವುದು ವಿಪರ್ಯಾಸ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು