ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಾಳಕೊಪ್ಪ: ಅತಿವೃಷ್ಟಿಗೆ ಮೆಕ್ಕೆಜೋಳ ಹಾಳು; ರೈತರು ಕಂಗಾಲು

Published : 8 ಆಗಸ್ಟ್ 2024, 6:32 IST
Last Updated : 8 ಆಗಸ್ಟ್ 2024, 6:32 IST
ಫಾಲೋ ಮಾಡಿ
Comments

ಶಿರಾಳಕೊಪ್ಪ: ಸತತ ಸುರಿಯುತ್ತಿರುವ ಮಳೆಯಿಂದಾಗಿ ತಾಳಗುಂದ ಮತ್ತು ಉಡುಗಣಿ ಹೋಬಳಿ ವ್ಯಾಪ್ತಿಯಲ್ಲಿ ಬೆಳೆಯಲಾಗಿರುವ ಮೆಕ್ಕೆಜೋಳ ಬೆಳೆ ಹಾಳಾಗಿದ್ದು, ರೈತರು ಕಂಗಲಾಗಿದ್ದಾರೆ.

ಈ ಭಾಗದಲ್ಲಿ ಪ್ರಸಕ್ತ ವರ್ಷ ವಾಡಿಕೆಗಿಂತ ಶೇ 33ರಷ್ಟು ಹೆಚ್ಚುವರಿ ಮಳೆ ಸುರಿದಿದೆ.

ಪ್ರಾಥಮಿಕ ವರದಿಯ ಪ್ರಕಾರ 1,350 ಹೆಕ್ಟೇರ್ ಮೆಕ್ಕೆಜೋಳದ ಬೆಳೆ ಹಾಳಾಗಿದ್ದು, ಅಂದಾಜು ₹ 4.23 ಕೋಟಿ ಮೊತ್ತದ ಬೆಳೆ ನಾಶವಾಗಿದೆ. ನಾಶವಾಗದೆ ಉಳಿದಿರುವ ಮೆಕ್ಕೆಜೋಳದ ಪೈರಿನ ಇಳುವರಿ ಕ್ಷೀಣಿಸುತ್ತಿದ್ದು, ಕೆಲವು ಕಡೆ ಕಂದು ಮತ್ತು ಕೆಂಪು ಬಣ್ಣಕ್ಕೆ ತಿರುಗಿದೆ. ಇನ್ನೂ ಸಾವಿರಾರು ಹೆಕ್ಟೇರ್ ಜೋಳದ ಬೆಳೆ ಕುಂಠಿತವಾಗಲಿದೆ ಎಂದು ರೈತರು ಚಿಂತಿತರಾಗಿದ್ದಾರೆ.

ತಾಳಗುಂದ 5,120 ಹೆಕ್ಟೇರ್, ಉಡುಗಣಿ 2,350 ಹೆಕ್ಟೇರ್, ಅಂಜನಾಪುರ 1,920 ಹೆಕ್ಟೇರ್, ಹೊಸೂರು 8,960 ಹೆಕ್ಟೇರ್, ಕಸಬಾ 1,150 ಹೆಕ್ಟೇರ್ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 19,500 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ.

‘ಉತ್ತಮ ಬೆಳೆ ಸುರಿದಲ್ಲಿ ಎಕರೆಗೆ 30ರಿಂದ 40 ಕ್ವಿಂಟಲ್ ಮೆಕ್ಕೆಜೋಳದ ಇಳುವರಿ ದೊರೆಯುತ್ತದೆ. ಆದರೆ ಈ ಬಾರಿ ಸುರಿದ ಧಾರಾಕಾರ ಮಳೆಯಿಂದ ಪ್ರತಿ ಎಕರೆಗೆ ಮೂರರಿಂದ ನಾಲ್ಕು ಕ್ವಿಂಟಲ್ ಇಳುವರಿ ಸಿಗುವುದೂ ದುಸ್ತರವಾಗಿದೆ.  ಸರ್ಕಾರ ತಕ್ಷಣ ಮೆಕ್ಕೆಜೋಳ ಬೆಳೆದವರಿಗೆ ಪರಿಹಾರ ನೀಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಪ್ಯಾಟಿ ಈರಪ್ಪ ಒತ್ತಾಯಿಸಿದರು.

‘ಈ ಹಿಂದೆ ಸರ್ಕಾರ ನೀಡುತ್ತಿದ್ದ ಗರಿಷ್ಠ ಪರಿಹಾರವನ್ನು ಈ ಬಾರಿಯೂ ನೀಡಬೇಕು. ರೈತರಿಗೆ ನೀಡುವ ಪರಿಹಾರವನ್ನು ಕಡಿತಗೊಳಿಸಿದರೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಪುಟ್ಟನಗೌಡ ಹೇಳಿದರು.

‘ಮೆಕ್ಕೆಜೋಳ ಬೆಳೆಗೆ ವಿಮೆ ಮಾಡಿಸಿರುವ ರೈತರು ಶೇ 50ಕ್ಕಿಂತ ಹೆಚ್ಚು ಹಾನಿಯಾಗಿದ್ದಲ್ಲಿ ತಕ್ಷಣ ವೈಯಕ್ತಿಕ ಪರಿಹಾರ ಪಡೆಯಲು ಅರ್ಹರಾಗಿದ್ದಾರೆ. ಮೆಕ್ಕೆಜೋಳದ ಬೆಳೆ ಹಾನಿಯಾಗಿರುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಪ್ರಕಾರ ತಾಲ್ಲೂಕಿಗೆ ಅಂದಾಜು ₹ 1.7 ಕೋಟಿ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕಿರಣ ಹರ್ತಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT