ಮಂಗಳವಾರ, ಡಿಸೆಂಬರ್ 6, 2022
20 °C
ಧರ್ಮ ಸಭೆಯಲ್ಲಿ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿ

ವ್ಯಕ್ತಿಯ ವ್ಯಕ್ತಿತ್ವ ಶ್ರೀಮಂತಿಕೆಯಿಂದ ಅಳೆಯಬೇಡಿ:ಶಿವಮೂರ್ತಿ ಶಿವಾಚಾರ್ಯ ಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳೆಹೊನ್ನೂರು: ‘ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಶ್ರೀಮಂತಿಕೆಯಿಂದ ಅಳೆಯುವುದು ತಪ್ಪಾಗುತ್ತದೆ’ ಎಂದು ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಸಮೀಪದ ಅರಕೆರೆ ಗ್ರಾಮದಲ್ಲಿ ಗುರುವಾರ ಬಸವೇಶ್ವರ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಪ್ರವೇಶದ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

‘ಪ್ರತಿಯೊಬ್ಬರೂ ಅಂತರಂಗದ ಧ್ವನಿಗೆ ಓಗೊಟ್ಟು ಧರ್ಮ ಮಾರ್ಗದಲ್ಲಿ ನಡೆದರೆ ನೆಮ್ಮದಿಯ ಬದುಕು ಸಾಗಿಸಬಹುದು. ಬೇರೊಬ್ಬರ ಜಗಳದಲ್ಲಿ ನ್ಯಾಯ ತೀರ್ಮಾನ ಮಾಡಿ ರಾಜಿ ಪಂಚಾಯಿತಿ ನಡೆಸುವ ನ್ಯಾಯಮೂರ್ತಿಗಳು ಅವರ ಮನೆಯಲ್ಲಿ ನಡೆಯುವ ಕಲಹಗಳ ಪಂಚಾಯಿತಿ ತೀರ್ಮಾನಗಳಿಗೆ ಮಾತ್ರ ಸುತಾರಾಂ ಒಪ್ಪುವುದಿಲ್ಲ. ಮನುಷ್ಯನಿಗೆ ಹಣದ ಮೇಲಿನ ವ್ಯಾಮೋಹ ಕಡಿಮೆಯಾಗಬೇಕು. ಗಳಿಸಿದ ಸಂಪತ್ತು ಧರ್ಮ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳುವ ವಿವೇಚನೆ ಮೈಗೂಡಿಸಿಕೊಳ್ಳಬೇಕು. ನಮ್ಮಲ್ಲಿರುವ ವಿವಿಧ ಮತ ಧರ್ಮಗಳು ಧರ್ಮವನ್ನೇ ಬೋಧಿಸುತ್ತವೆ’ ಎಂದರು.

‘ದ್ರವ್ಯ ಶ್ರೀಮಂತಿಕೆ ಹೊಂದುವುದನ್ನು ಸಿರಿತನ ಎಂದು ಭಾವಿಸುವುದು ತಪ್ಪಾಗುತ್ತದೆ. ಭಗವಂತನ ಮೇಲೆ ಅತೀವ ಭಕ್ತಿ ಹೊಂದಿದವರು ಶ್ರೀಮಂತರು. ಧರ್ಮವೆಂದರೆ ಬಾಯಿ ಮಾತಿನ ಉಪದೇಶದ ಆಡಂಬರತನವಲ್ಲ. ಧರ್ಮಪ್ರಜ್ಞೆ ಇರುವವರು ಪಾಪ ಕೃತ್ಯ ಮಾಡುವುದಿಲ್ಲ ಎನ್ನಲಾಗದು. ಧರ್ಮ– ಅಧರ್ಮ ಪ್ರಜ್ಞೆಗಳಿಗೆ ಮಹಾಭಾರತದಲ್ಲಿಯೇ ಉತ್ತರಗಳಿವೆ. ವ್ಯವಹಾರಗಳಲ್ಲಿ ಧರ್ಮ ನೆಲೆ ಕಳೆದುಕೊಂಡು ಅಧರ್ಮ ತಾಂಡವ ಆಡುತ್ತಿದೆ. ಪ್ರತಿಯೊಬ್ಬರೂ ಅವರವರ ಪರಿಶುದ್ಧ ಆತ್ಮ ಧ್ವನಿಗೆ ಓಗೊಡಬೇಕು. ಎಲ್ಲ ಸಮಯದಲ್ಲಿ ಸತ್ಯವನ್ನೇ ನುಡಿದು ಧರ್ಮ ಮಾರ್ಗದಲ್ಲಿ ನಡೆಯಬೇಕು’ ಎಂದರು.

ಸಂಸದ ಬಿ.ವೈ ರಾಘವೇಂದ್ರ, ‘ಸರ್ಕಾರಗಳು ಎಚ್ಚರ ತಪ್ಪಿದಾಗ ಜಾಗೃತಗೊಳಿಸುವಲ್ಲಿ ತರಳಬಾಳು ಶ್ರೀಗಳು ಅತ್ಯಂತ ಮಹತ್ವದ ಪಾತ್ರ ವಹಿಸಿದ್ದಾರೆ. ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಶ್ರಮ ವಹಿಸುತ್ತಿದೆ’ ಎಂದರು.

ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಜಯಣ್ಣ, ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಭದ್ರಾವತಿ ಶಾಸಕ ಸಂಗಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಡಿ.ಶೇಖರಪ್ಪ, ಡಾ.ಶ್ರೀನಿವಾಸ್ ಕರಿಯಣ್ಣ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್.ಷಡಾಕ್ಷರಿ, ಮುಖಂಡರಾದ ಹಾಲೇಂದ್ರ ಪಾಟೀಲ್, ಎಚ್.ಎಂ ಚಂದ್ರಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು