ಸಾಗರ: ಶರಾವತಿ ಮುಳುಗಡೆ ಪ್ರದೇಶದ ಜನರ ಹಲವು ದಶಕಗಳ ಕನಸು ಈಡೇರುವ ದಿನ ಹತ್ತಿರವಾಗುತ್ತಿದ್ದು ಸಿಗಂದೂರು ಸೇತುವೆ ಉದ್ಘಾಟನೆ 2025 ಏಪ್ರಿಲ್, ಮೇ ಹೊತ್ತಿಗೆ ನಡೆಯಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ ಸಿಗಂದೂರು ಸೇತುವೆ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.
₹ 423.15 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 2.25 ಕಿ.ಮೀ. ಉದ್ದದ ಸೇತುವೆ ವಿಶಿಷ್ಟ ವಿನ್ಯಾಸ ಹೊಂದಿದ್ದು ಕಾಮಗಾರಿ ಭರದಿಂದ ಸಾಗಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.
ನಾಡಿಗೆ ಬೆಳಕು ನೀಡಲು ಜಲ ವಿದ್ಯುತ್ ಯೋಜನೆಗಾಗಿ ಈ ಭಾಗದ ಜನ ತಮ್ಮ ಬದುಕನ್ನೆ ತ್ಯಾಗ ಮಾಡಿದ್ದಾರೆ. ಅವರಿಗಾಗಿ ಸೇತುವೆ ನಿರ್ಮಾಣಗೊಳ್ಳುತ್ತಿರುವುದು ಸಾರ್ಥಕ ಭಾವನೆ ಮೂಡಿಸಿದೆ. ಜೊತೆಗೆ ಸಿಗಂದೂರು ಕ್ಷೇತ್ರದ ದರ್ಶನಕ್ಕೆ ಬರುವ ಅಪಾರ ಸಂಖ್ಯೆಯ ಭಕ್ತರಿಗೂ ಸೇತುವೆಯಿಂದ ಅನುಕೂಲವಾಗಲಿದೆ ಎಂದರು.
ಸೇತುವೆ ಕಾಮಗಾರಿ ಪೂರ್ಣಗೊಂಡ ನಂತರ ಈ ಭಾಗದ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಗೊಳ್ಳುವ ನಿರೀಕ್ಷೆ ಇದೆ. ದಕ್ಷಿಣ ಕನ್ನಡ ಜಿಲ್ಲೆಗೆ ಈಗ ಇರುವ ಸಂಪರ್ಕದ ದೂರವನ್ನು ಸೇತುವೆ ಕಡಿಮೆ ಮಾಡುವುದು ಕೂಡ ಪ್ರಮುಖ ಸಂಗತಿಯಾಗಿದೆ ಎಂದು ಅವರು ಹೇಳಿದರು.