ಸೋಮವಾರ, ಜುಲೈ 4, 2022
20 °C
ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಶೆಟ್ಟಿ

ತೀರ್ಥಹಳ್ಳಿ ಮಾರಿಕಾಂಬ ಜಾತ್ರೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ ಮಾರ್ಚ್‌ 8ರಿಂದ 16ರ ವರೆಗೆ 9 ದಿನಗಳು ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಶೆಟ್ಟಿ ಹೇಳಿದರು.

ದೇವಸ್ಥಾನದ ಸಭಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘₹ 45 ಲಕ್ಷ ವೆಚ್ಚದಲ್ಲಿ 9 ದಿನಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಜಾತ್ರೆಯ ಅಂಗವಾಗಿ ಪ್ರತಿದಿನ ಮಧ್ಯಾಹ್ನ ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 6 ಗಂಟೆಯಿಂದ ಆಜಾದ್‌ ರಸ್ತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ’ ಎಂದರು.

ಜಾತ್ರಾ ಕಾರ್ಯಕ್ರಮಕ್ಕೆ ಧನ ಸಹಾಯ ಮಾಡುವ ಭಕ್ತರು ದೇವಸ್ಥಾನದ ಕಚೇರಿ ಸಂಪರ್ಕಿಸಬೇಕು. ಪ್ರತಿನಿತ್ಯ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಜನರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ನಾಗರಾಜ ಶೆಟ್ಟಿ ಕೋರಿದ್ದಾರೆ.

ಕಾರ್ಯದರ್ಶಿ ಅಲಿಗೆ ಧನಂಜಯ, ಸಹ ಕಾರ್ಯದರ್ಶಿ ಪ್ರಭಾಕರ್‌, ಖಜಾಂಚಿ ಮಂಜುನಾಥ ಶೆಟ್ಟಿ, ಮೊಕ್ತೇಸರ ಟಿ.ಕೆ. ಜಯರಾಮಶೆಟ್ಟಿ, ಧರ್ಮದರ್ಶಿಗಳಾದ ಕೆ.ಸಿ. ಚಂದ್ರಶೇಖರ್‌, ಜಯಪ್ರಕಾಶ್‌ ಶೆಟ್ಟಿ, ಕೆ.ಜಯರಾಮಶೆಟ್ಟಿ, ಸಂದೇಶ ಜವಳಿ, ಟಿ.ಎನ್.‌ ಅನಿಲ್‌ ಇದ್ದರು.

ಧಾರ್ಮಿಕ ಕಾರ್ಯಕ್ರಮಗಳು

ಮಾರ್ಚ್‌ 8ರಂದು ಜಾತ್ರೆ ಸಾರುವುದು. 9ರಂದು ಧಾರ್ಮಿಕ ಕಾರ್ಯಕ್ರಮ. ಸಂಜೆ ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿಯವರ ಸಾರಥ್ಯದಲ್ಲಿ ಪಾವಂಜೆ ಮೇಳದ ಪ್ರಖ್ಯಾತ ಕಲಾವಿದರಿಂದ ಕಾಲಮಿತಿ ಯಕ್ಷಗಾನ. 10ರಂದು ವಿಶೇಷ ಪೂಜೆ, ‘ಜಿ’ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಸುಹಾನ ಸೈಯದ್‌, ಖ್ಯಾತ ಸ್ಯಾಕ್ಸೋಫೋನ್‌ ವಾದಕ ಮಹೇಶ ಮೊಯ್ಲಿ ಅವರಿಂದ ಸಂಗೀತ ಸಂಜೆ. 11ರಂದು ಸರಿಗಮಪ ಖ್ಯಾತಿಯ ಸಾಧ್ವಿನಿ ಕೊಪ್ಪ, ಹರ್ಷ ಮೈಸೂರು ಇವರಿಂದ ಸಂಗೀತ ಸಂಭ್ರಮ. 12ರಂದು ಇಮ್ತಿಯಾಜ್‌ ಸುಲ್ತಾನ್‌, ರಶ್ಮಿ ಮೈಸೂರು ಮತ್ತು ತಂಡದಿಂದ ಭಾವ ಸಂಗೀತ ಹಾಗೂ ಸುಮುಖ ಸಂಗೀತ ನೃತ್ಯ ಶಾಲೆ ಕಲಾವಿದರಿಂದ ನೃತ್ಯ ವೈಭವ. 13ರಂದು ಚಂಡಿಕಾ ಹೋಮ ಸಂಜೆ ಶಶಿಕುಮಾರ್‌ ಕಾರಂತ್‌, ಅನ್ನಪೂರ್ಣ ಕಾರಂತ್‌ ಸಂಗಡಿಗರಿಂದ ಭಕ್ತಿ ಭಾವ ಸಂಗೀತ ಹಾಗೂ ರಾಜರಾಜೇಶ್ವರಿ ನೃತ್ಯ ಶಾಲೆ ಕಲಾವಿದರಿಂದ ನೃತ್ಯ ವೈಶಿಷ್ಟ್ಯ. 14ರಂದು ಕಲ್ಪೋಕ್ತ ಪೂಜೆ ಸಂಜೆ ವಿಠಲ ನಾಯಕ್‌ ಕಲ್ಲಡ್ಕ ಮತ್ತು ತಂಡದಿಂದ ಗೀತಾ–ಸಾಹಿತ್ಯ ಸಂಭ್ರಮ. 15ರಂದು ಎಣ್ಣೆ ಭಂಡಾರ ಪೂಜೆ, ಗದ್ದುಗೆಯಲ್ಲಿ ಗೊಂಬೆ ಪ್ರತಿಷ್ಠಾಪನೆ ನಡೆಯಲಿದೆ.

ಮಾರ್ಚ್‌ 16ರಂದು ಮಾರಿ ಗೊಂಬೆ ಪೂಜೆ ನಂತರ ರಾಜಬೀದಿ ಉತ್ಸವದೊಂದಿಗೆ ತುಂಗಾ ನದಿಯಲ್ಲಿ ಗೊಂಬೆ ವಿಸರ್ಜನೆ. ರಾತ್ರಿ ನಾಡ್ತಿಯಲ್ಲಿ ಭೋಜನ, ಪ್ರಸಾದ ಇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು