ಗುರುವಾರ , ಮೇ 6, 2021
23 °C
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಮಾಹಿತಿ

ಜಿಲ್ಲೆಯ ರೌಡಿಶೀಟರ್‌ಗಳ ಪಟ್ಟಿ ಶೀಘ್ರ ಪರಿಷ್ಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಅನಗತ್ಯ ಹೆಸರುಗಳನ್ನು ತೆಗೆದುಹಾಕಿ ಜಿಲ್ಲೆಯ ರೌಡಿಶೀಟರ್‌ಗಳ ಪಟ್ಟಿ ಪರಿಷ್ಕರಿಸುವ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಸುಳಿವು ನೀಡಿದರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ರೌಡಿಶೀಟರ್‌ಗಳ ಪಟ್ಟಿ ದೊಡ್ಡದಿದೆ. ಅವರಲ್ಲಿ ಬಹುತೇಕರು ರೌಡಿಸಂ ತೊರೆದು ಸಹಜ ಜೀವನ ನಡೆಸುತ್ತಿದ್ದಾರೆ. ಈಗಲೂ ಸಕ್ರಿಯರಾಗಿರುವ ರೌಡಿಗಳು, ಧಾರ್ಮಿಕ ಮತಾಂಧರು, ಕೆಟ್ಟ ನಡವಳಿಕೆ ಇರುವವರನ್ನು ಗುರುತಿಸಿ ಹೊಸಪಟ್ಟಿ ಸಿದ್ಧಪಡಿಸಲಾಗುವುದು. ಕೋಮುಗಲಭೆ, ಪ್ರಚೋದನೆ ಎಂದಿಗೂ ಸಹಿಸುವುದಿಲ್ಲ. ಮಂಗಳೂರಿನ ಕೋಮು ವಾತಾವರಣಕ್ಕೂ ಶಿವಮೊಗ್ಗ ಜಿಲ್ಲೆಗೂ ವ್ಯತ್ಯಾಸವಿದೆ. ಶಿವಮೊಗ್ಗದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದರೂ ನಿಯಂತ್ರಿಸಲು ಸಾಧ್ಯವಾಗದ ಸ್ಥಿತಿ ಇಲ್ಲ. ಇಂತಹ ಸನ್ನಿವೇಶ ಎದುರಿಸಲು ಜಿಲ್ಲೆಯ ಪೊಲೀಸರು ಸಮರ್ಥರಿದ್ದಾರೆ. ಪೊಲೀಸ್‌ ಪಡೆಯನ್ನು ಸದಾ ಸನ್ನದ್ಧವಾಗಿಡಲಾಗುವುದು ಎಂದು ಮಾಹಿತಿ ನೀಡಿದರು.

ಜನಸ್ನೇಹಿ ಪೊಲೀಸ್‌ ವ್ಯವಸ್ಥೆ:

ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ನನ್ನ ಕಲ್ಪನೆ. ಪೊಲೀಸ್‌ ಸೇವೆಗೆ ಸೇರಲು ನಿವೃತ್ತ ಪೊಲೀಸ್‌ ಅಧಿಕಾರಿ ಅಜಯ್‌ಕುಮಾರ್ ಸಿಂಗ್ ಅವರು ಪ್ರೇರಣೆ. ಪೊಲೀಸ್ ಪರಿಕಲ್ಪನೆ ಬ್ರಿಟೀಷರದು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಬ್ರಿಟೀಷ್ ಕಾಯ್ದೆಗಳು ಹೋರಾಟಗಾರರನ್ನು ಬಗ್ಗುಬಡಿಯುತ್ತಿದ್ದವು. ಈಗಲೂ ಅದೇ ವ್ಯವಸ್ಥೆ ಇದೆ. ಜನರು ಪೊಲೀಸರನ್ನು ಭಯದಿಂದಲೇ ನೋಡುತ್ತಾರೆ. ಇಂತಹ ಮನೋಭಾವ ಬದಲಿಸಬೇಕಿದೆ. ಅದಕ್ಕೂ ಮೊದಲು ಪೊಲೀಸ್‌ ವ್ಯವಸ್ಥೆಯನ್ನು ಜನಸ್ನೇಹಿಗೊಳಿಸಬೇಕಿದೆ ಎಂದು ಪ್ರತಿಪಾದಿಸಿದರು.

ಸಾಕಷ್ಟು ಜನರು ಪೊಲೀಸರ ಕೆಲಸಗಳನ್ನೂ ಪ್ರಶ್ನಿಸುವ ಧೈರ್ಯ ತೋರುತ್ತಿದ್ದಾರೆ. ಕಾನೂನು ಪರಿಮಿತಿ ನೆನಪಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಇಂತಹ ಮನಸ್ಸುಗಳ ಸಂಖ್ಯೆ ಹೆಚ್ಚಾಗಬೇಕು. ಅದಕ್ಕಾಗಿ ಜನು ಹಾಗೂ ಕೆಳ ಹಂತದ ಸಿಬ್ಬಂದಿ ಜತೆ ಸಂವಾದ ಹಮ್ಮಿಕೊಳ್ಳಲಾಗುವುದು. ಪೊಲಿಸರು–ಸಾರ್ವಜನಿಕರ ಮಧ್ಯದ ಕಂದಕ ಕಡಿಮೆ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ಗಾಂಜಾ, ರೌಡಿಸಂ, ಸರಗಳ್ಳತನ ಮತ್ತಿತರ ಚಟುವಟಿಕೆಗಳು ವರದಿಯಾಗುತ್ತಿವೆ. ಯುವಪೀಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಯುವಕರು  ರೌಡಿಸಂ ಮೋಹಕ್ಕೆ ಒಳಗಾಗುತ್ತಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಬೇಕು. ಪೋಷಕರು ಎಚ್ಚರ ವಹಿಸಬೇಕು. ಉಪನ್ಯಾಸಕ ವರ್ಗ ಗಮನಹರಿಸಬೇಕು. ಆಗ ಮಾತ್ರ ಪಿಡುಗು ನಿವಾರಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಸಾಕಷ್ಟು ಕ್ಷೀಣಿಸಿದೆ. ಮೊದಲಿನ ಹಾಗೆ ಕಾಡಿನಲ್ಲಿ ನಕ್ಸಲರು ಇಲ್ಲ. 2015ರಲ್ಲಿ ದಾಖಲಾದ ಪ್ರಕರಣವೇ ಕೊನೆ. ನಕ್ಸಲ್‌ ನಾಯಕಿ ಹೊಸಗದ್ದೆ ಪ್ರಭಾ ಸಾವಿನ ಕುರಿತು ಇಲಾಖೆಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಟ್ರಸ್ಟ್‌ ಅಧ್ಯಕ್ಷ ಎನ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನಾಗರಾಜ್ ನೇರಿಗೆ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.