ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನವಟ್ಟಿ: ರಾಜ್ಯ ಮಟ್ಟದ ಹೋರಿ ಹಬ್ಬದಲ್ಲಿ ಜನಸಾಗರ

Published 26 ಡಿಸೆಂಬರ್ 2023, 16:24 IST
Last Updated 26 ಡಿಸೆಂಬರ್ 2023, 16:24 IST
ಅಕ್ಷರ ಗಾತ್ರ

ಆನವಟ್ಟಿ: ದುರ್ಗಾಂಬಾ ಗೆಳಯರ ಬಳಗವು ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಹೋರಿ ಹಬ್ಬ ಕಣ್‌ ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು.

ಆನವಟ್ಟಿಯ ಹಿರಿಯ ಮುಖಂಡರಾದ ಚೌಟಿ ಚಂದ್ರಶೇಖರ್ ಪಾಟೀಲ್, ಶ್ರೀನಾಥ ಮಡ್ಡಿ ಅವರು ರಾಜ್ಯ ಮಟ್ಟದ ಹೋರಿ ಹಬ್ಬಕ್ಕೆ ಭೂಮಿ ಪೂಜೆ, ಗ್ರಾಮ ದೇವತೆಗಳ ಪೂಜೆ, ಹೋರಿ ಅಖಾಡವನ್ನು ಪೂಜೆ ಮಾಡುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು.

ಆನವಟ್ಟಿ ಜನ ಜಂಗುಳಿಯಿಂದ ತುಂಬ ಹೋಗಿತ್ತು. ಪಟ್ಟಣದಲ್ಲಿ ಎಲ್ಲಿ ನೋಡಿದರೂ ಯುವಕರು ತಮ್ಮ ಇಷ್ಟದ ಹೋರಿ ಮತ್ತು ಹೋರಿ ನಂಬರ್ ಟೀ ಶರ್ಟ್ ಹಾಕಿಕೊಂಡವರು ಕಾಣುತ್ತಿದ್ದರು. ಸಂಚಾರ ನಿಯಂತ್ರಿಸಲು ಪೊಲೀಸರು ಹರಸಹಾಸ ಪಡಬೇಕಾಯಿತು.

ಹೋರಿ ಹಬ್ಬಕ್ಕೆಂದೇ ಸಜ್ಜುಗೊಳಿಸಿದ್ದ ಪಿಪಿ ಹೋರಿಗಳು ವಿವಿಧ ಹೂಗಳು, ಬಣ್ಣ-ಬಣ್ಣದ ಟೇಪ್, ಕೊಬ್ಬರಿ ಹಾರ, ಬಲೂನ್‌ಗಳಿಂದ ನೋಡುಗರನ್ನು ಸೆಳೆದವು. ಸ್ಥಳೀಯ ಹೋರಿಗಳನ್ನು ಆದ್ಯತೆ ಮೆರೆಗೆ ಅಖಾಡದಲ್ಲಿ ಬೆದರಿಸಲಾಯಿತು. ಅಭಿಮಾನಿಗಳು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ಶಿಕಾರಿಪುರ, ಬ್ಯಾಡಗಿ, ಹಾವೇರಿ, ಕೊಲಾರ, ಶಿವಮೊಗ್ಗ, ದಾವಣಗೆರೆ, ರಾಮನಗರ ಸೇರಿ ರಾಜ್ಯದ ವಿವಿಧೆಡೆಯಿಂದ ಹಿಂದೂ ಹುಲಿ, ಬೇಟೆಗಾರ, ಅಗಸ್ತ್ಯ, ದೊರೆ, ಕೊಲೆಗಾರ, ಹಿಟ್ಲರ್‌ ಸೇರಿ 300ಕ್ಕೂ ಹೆಚ್ಚು ಪಿಪಿ ಹೋರಿಗಳು ಹಬ್ಬಕ್ಕೆ ಆಗಮಿಸಿದ್ದವು.

ರಕ್ಷಣಾತ್ಮಕ ಅಖಾಡ: ದುರ್ಗಾಂಬಾ ಗೆಳಯರ ಬಗಳದ ಅಧ್ಯಕ್ಷ ಮಧುಕೇಶ್ವರ ಪಾಟೀಲ್, ಗೌರವಾಧ್ಯಕ್ಷ ಮಾಲತೇಶ್ ಬಡಗಿ, ಉಪಾಧ್ಯಕ್ಷ ಚಂದ್ರು ಮಸಾಲ್ತಿ, ಕಾರ್ಯದರ್ಶಿ ಅಶ್ವಿನಿ, ಸದಸ್ಯರಾದ ಎಂ.ಸಂದೀಪ್, ಬಸವರಾಜ, ಹರೀಶ್, ಕಾರಳ್ಳೇರ್ ಸತ್ಯಪ್ಪ, ಮಟ್ಟೇರ್ ಸುರೇಶ್, ಕುರುಬರ ಸುರೇಶ್, ಸುರೇಶ್ ಮಸಾಲ್ತಿ ಮುಂತಾದವರು ಹೆಚ್ಚಿನ ನಿಗಾ ವಹಿಸಿದ್ದರು. ಹೋರಿಗಳಿಗೆ ಹಾಗೂ ವೀಕ್ಷಕರಿಗೆ ಯಾವುದೇ ಅಪಾಯ ಸಂಭವಿಸದಂತೆ ಗಟ್ಟಿಮುಟ್ಟಾದ 800 ಮೀ ಉದ್ದದ ಬೆಲಿ ಜೊತೆಗೆ ಹೋರಿ ಬಿಡುವಲ್ಲಿ ಮೂರು ಹಂತದ ಗೇಟ್‌ಗಳನ್ನು ನಿರ್ಮಿಸಿದ್ದು, ಜನರ ಮೆಚ್ಚುಗೆಗೆ ಪಾತ್ರವಾಯಿತು.

‘ಸಂಪ್ರದಾಯಿಕ ಗ್ರಾಮೀಣ ಕ್ರೀಡೆಯನ್ನು ರೈತರು ಕೃಷಿ ಚಟಿವಟಿಕೆ ಮುಗಿಸಿದ ನಂತರ ಸ್ವಲ್ಪ ದಿನಗಳವರೆಗೆ ತಮ್ಮ ನೆಚ್ಚಿನ ಹೋರಿಗಳನ್ನು ಹೋರಿ ಹಬ್ಬಗಳಲ್ಲಿ ಬೆದರಿಸಿ ಸಂಭ್ರಮಿಸುತ್ತಾರೆ’ ಎಂದು ಗ್ರಾಮದ ಹಿರಿಯ ಮುಖಂಡ ಚೌಟಿ ಚಂದ್ರಶೇಖರ್ ಪಾಟೀಲ್ ತಿಳಿಸಿದರು.

‘ಪೂರ್ವಿಕರ ಕಾಲದಿಂದಲ್ಲೂ ಸಂಸ್ಕೃತಿಯ ಭಾಗವಾಗಿ ಹೋರಿ ಹಬ್ಬವನ್ನು ಅಚರಿಸುತ್ತಾ ಬಂದಿದ್ದೇವೆ. ರೈತರು ತಮ್ಮ ಕಷ್ಟ–ದುಮ್ಮಾನಗಳನ್ನು ಮರೆತು ಸಂತಸ ಪಡುವ ಈ ಗ್ರಾಮೀಣ ಕ್ರೀಡೆಗೆ ಸರ್ಕಾರ ಬೆಂಬಲ ನೀಡಬೇಕು’ ಎಂದು ಗ್ರಾಮದ ಹಿರಿಯ ಮುಖಂಡ ಶ್ರೀನಾಥ ಮಡ್ಡಿ ಮನವಿ ಮಾಡಿದರು.

ಹೋರಿ ಹಬ್ಬ ನೋಡಲು ಸಣ್ಣ ಗಿಡವನ್ನು ಏರಿ ಕುಳಿತಿದ್ದ ಅಭಿಮಾನಿ
ಹೋರಿ ಹಬ್ಬ ನೋಡಲು ಸಣ್ಣ ಗಿಡವನ್ನು ಏರಿ ಕುಳಿತಿದ್ದ ಅಭಿಮಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT