ಶನಿವಾರ, ಏಪ್ರಿಲ್ 10, 2021
30 °C
ಮದ್ದು ಕಾಣದ ಮಂಗನ ಕಾಯಿಲೆ l ಸಂಶೋಧನೆಗೆ ಸವಾಲು

ತಗ್ಗಿದ ಪ್ರಕರಣ; ಜನರಲ್ಲಿ ನಿಟ್ಟುಸಿರು

ಶಿವಾನಂದ ಕರ್ಕಿ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ಮಲೆನಾಡಿನಲ್ಲಿ ಮಂಗನ ಕಾಯಿಲೆ ಪ್ರಕರಣ ಗಣನೀಯವಾಗಿ ತಗ್ಗಿರುವುದು ಜನರಲ್ಲಿ ಸಮಾಧಾನ ತಂದಿದೆ. ಕಳೆದ ವರ್ಷ ಮಂಗನ ಕಾಯಿಲೆಗೆ ತಾಲ್ಲೂಕಿನಲ್ಲಿ ಮೂರು ಮಂದಿ ಬಲಿಯಾಗಿದ್ದರು.

ತಾಲ್ಲೂಕು ವ್ಯಾಪ್ತಿಯಲ್ಲಿ ಎರಡು, ಮೂರು ಹಂತದಲ್ಲಿ ಶೇ 70ರಷ್ಟು ಮಂಗನ ಕಾಯಿಲೆ ತಡೆಗಟ್ಟುವ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಡಿಎಂಪಿ ತೈಲವನ್ನು ಹಂಚಲಾಗಿದೆ. ಕಾಡಿಗೆ ತೆರಳುವಾಗ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ.

ತಾಲ್ಲೂಕಿನ ಕಟಗಾರು, ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರ, ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮಂಗಗಳು ಸತ್ತ ಬಗ್ಗೆ ವರದಿಯಾಗಿದ್ದು, ರೋಗ ಹರಡುವ ಭೀತಿಯನ್ನು ಹೆಚ್ಚು ಮಾಡಿದೆ. ರೋಗ ನಿಯಂತ್ರಣದ ಸತತ ಪ್ರಯತ್ನದ ನಡುವೆ 4 ದಶಕಗಳಿಂದ ಕಾಡುತ್ತಿರುವ ಮಂಗನ ಕಾಯಿಲೆ ಚಿಕಿತ್ಸೆಗೆ ಈವರೆಗೂ ಶಾಶ್ವತ ಔಷಧ ಲಭ್ಯವಿಲ್ಲದಿರುವುದು ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ.

ಮಂಗನ ಮೃತ ದೇಹ ಪತ್ತೆಯಾದ ಜಾಗದಲ್ಲಿ ಉಣುಗು ಹರಡದಂತೆ 50 ಮೀಟರ್ ಸುತ್ತ ಔಷಧ ಸಿಂಪಡಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಮೃತ ಮಂಗಗಳ ಆಯ್ದ ಭಾಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಪಶು ವೈದ್ಯ ಇಲಾಖೆಯ ನೆರವು ಪಡೆಯಲಾಗುತ್ತಿದೆ. ಮಂಗಗಳನ್ನು ಸುಡಲು ಗ್ರಾಮ ಪಂಚಾಯಿತಿ ಜೊತೆಗೆ ಅರಣ್ಯ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ. ಆ ಭಾಗದಲ್ಲಿನ ಜನರಲ್ಲಿ ಜ್ವರ ಕಾಣಿಸಿಕೊಂಡಿದೆಯೇ ಎಂಬ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳದೇ ಇರುವವರಿಗೆ ಲಸಿಕೆ ನೀಡಲಾಗುತ್ತಿದೆ.

ಮಂಗನ ಕಾಯಿಲೆ ನಿಯಂತ್ರಣಕ್ಕೆ ಪರಿಣಾಮಕಾರಿ ಔಷಧ ಕಂಡುಹಿಡಿಯುವ, ರೋಗ ಪತ್ತೆ ಮಾಡುವ ಸಲುವಾಗಿ ಸರ್ಕಾರ ಶಿವಮೊಗ್ಗದಲ್ಲಿ ಪರಿಮಾಣು ಕ್ರಿಮಿ ಸಂಶೋಧನಾ ಕೇಂದ್ರವನ್ನು ಆರಂಭಿಸಿದೆ. ಮಂಗನ ಕಾಯಿಲೆ ಕುರಿತು ಅಧ್ಯಯನ ನಡೆಸಲು ಕಳೆದ ವರ್ಷ ಸ್ಕಾಟ್ಲೆಂಡ್ ದೇಶದಿಂದ ವಿಜ್ಞಾನಿಗಳು ಮಲೆನಾಡಿಗೆ ಬಂದು ರೋಗ ಹರಡುವ ಒಣಗಿನ ಮಾದರಿಯನ್ನು ಸಂಗ್ರಹಿಸಿ ಸಂಶೋಧನೆ ನಡೆಸುತ್ತಿದ್ದಾರೆ. ಮಂಗನ ಕಾಯಿಲೆಗೆ ತುತ್ತಾದವರ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ತಾಲ್ಲೂಕಿನ ದಬ್ಬಣಗದ್ದೆ, ಮಹಿಷಿ, ಮಾಳೂರು, ಬೆಟ್ಟಬಸರವಾನಿ, ಕುಡುಮಲ್ಲಿಗೆ, ಹಣಗೆರೆ, ಹೆಮ್ಮಕ್ಕಿ, ತೋಟದಕೊಪ್ಪ, ದೇಮ್ಲಾಪುರ, ಸಿಂಧುವಾಡಿ, ಸಾಲೇಜನಗಲ್ಲು, ತನಿಕಲ್, ಗುತ್ತಿಯಡೇಹಳ್ಳಿ, ಬಾವಿಕೈಸರು, ಕುಡುವಳ್ಳಿ, ಚಿಡುವ, ಮಂಡಗದ್ದೆ, ಯೋಗಿಮಳಲಿ, ಕಟಗಾರು, ಮೇಳಿಗೆ, ಕುಂಟುವಳ್ಳಿ,  ಕೋಣಂದೂರು, ಆರಗ, ಯೋಗಿಮಳಲಿ, ಗುಡ್ಡೇಕೊಪ್ಪ, ಹೆಮ್ಮಕ್ಕಿ ಮುಂತಾದ ಗ್ರಾಮಗಳ ಮೇಲೆ ಮಂಗನ ಕಾಯಿಲೆ ಕುರಿತು ತೀವ್ರ ನಿಗಾ ವಹಿಸಲಾಗಿದೆ.

‘ಅಲ್ಲಲ್ಲಿ ಮಂಗಗಳು ಸಾಯುತ್ತಿವೆ. ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಸರ ಗ್ರಾಮದ ಮಕ್ಕಿಕೊಪ್ಪ, ಕಲ್ಲತ್ತಿ ಬಳಿ ನಾಲ್ಕಾರು ಮಂಗಗಳ ಕಳೇಬರ ಪತ್ತೆಯಾಗಿವೆ. ಸುಮಾರು ದಿನಗಳ ಹಿಂದೆ ಈ ಭಾಗದಲ್ಲಿ ಮಂಗಗಳು ಸತ್ತಿರುವ ಶಂಕೆ ಇದೆ’ ಎನ್ನುತ್ತಾರೆ ಗ್ರಾಮದ ಉಮೇಶ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು