ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಚಳವಳಿಗೆ ಬೆಂಬಲ; ಮುಂದುವರಿದ ಧರಣಿ

Last Updated 7 ಜನವರಿ 2021, 3:56 IST
ಅಕ್ಷರ ಗಾತ್ರ

ಸಾಗರ: ದೆಹಲಿಯಲ್ಲಿ ರೈತರು ಕೇಂದ್ರ ಸರ್ಕಾರದ ಕಾಯ್ದೆಯನ್ನು ಖಂಡಿಸಿ ನಡೆಸುತ್ತಿರುವ ಚಳವಳಿಯನ್ನು ಬೆಂಬಲಿಸಿ ಇಲ್ಲಿನ ವಿವಿಧ ಸಂಘಟನೆಗಳು ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಬುಧವಾರ 13ನೇ ದಿನಕ್ಕೆ ಕಾಲಿಟ್ಟಿತು.

ರಾಜ್ಯ ಸರ್ಕಾರ ಭತ್ತ, ಜೋಳದ ಖರೀದಿ ಕೇಂದ್ರವನ್ನು ಆರಂಭಿಸುವಲ್ಲಿ ವಿಳಂಬ ಧೋರಣೆ ತೋರುತ್ತಿರುವುದನ್ನು ಖಂಡಿಸಿ ಜ.11ರಂದು ಎಪಿಎಂಸಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಚಳವಳಿಯ ಭಾಗವಾಗಿ ಹಮ್ಮಿಕೊಂಡಿದ್ದು, ಅದಕ್ಕೆ ಸಂಬಂಧಪಟ್ಟ ಕರಪತ್ರವನ್ನು ಅರಣ್ಯ ಮೂಲ ಬುಡಕಟ್ಟು ಒಕ್ಕೂಟದ ಜಿಲ್ಲಾಧ್ಯಕ್ಷೆ ಲಕ್ಷ್ಮಮ್ಮ ಹಿರೇಮನೆ ಬುಧವಾರ ಬಿಡುಗಡೆ ಮಾಡಿದರು.

ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ, ‘ದೆಹಲಿಯ ಕೊರೆಯುವ ಚಳಿಯಲ್ಲಿ ರೈತರು ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಕರಾಳ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಲಕ್ಷ ಸಂಖ್ಯೆಯಲ್ಲಿ ರೈತರು ದೆಹಲಿಗೆ ಮುತ್ತಿಗೆ ಹಾಕಿರುವುದು ಒಂದು ದಾಖಲೆ. ಆದರೂ ಕೇಂದ್ರ ಸರ್ಕಾರ ಹಟಮಾರಿ ಧೋರಣೆ ತೋರುತ್ತಿರುವುದು ಖಂಡನೀಯ’ ಎಂದು ದೂರಿದರು.

‘ಈಗ ಉದ್ದೇಶಿಸಿರುವಂತೆ ಕೇಂದ್ರ ಸರ್ಕಾರ ಕರಾಳ ಮಸೂದೆಗಳನ್ನು ಜಾರಿಗೊಳಿಸಿದ್ದರೆ ಗುತ್ತಿಗೆ ಆಧಾರಿತ ಕೃಷಿ ಪದ್ಧತಿ ಚಾಲ್ತಿಗೆ ಬರುತ್ತದೆ. ಆಗ ದೊಡ್ಡ ದೊಡ್ಡ ಕಂಪನಿಗಳು ಕೃಷಿಭೂಮಿಯನ್ನು ಖರೀದಿಸಿ ಆಹಾರ ಬೆಳೆ ಬದಲು ವಾಣಿಜ್ಯ ಬೆಳೆ ಬೆಳೆದರೆ ಆಹಾರ ಧಾನ್ಯಕ್ಕೆ ಹಾಹಾಕಾರ ಉಂಟಾಗುತ್ತದೆ. ಒಂದು ವೇಳೆ ಆಹಾರ ಧಾನ್ಯ ಬೆಳೆದರೂ ಕಂಪನಿ ನಿಗದಿ ಮಾಡುವ ಬೆಲೆಗೆ ಕೊಂಡುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ’ಎಂದು ಹೇಳಿದರು.

‘ಒಂದೆಡೆ ಕರಾಳ ಮಸೂದೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದರೆ, ಇತ್ತ ರಾಜ್ಯ ಸರ್ಕಾರ ಎಪಿಎಂಸಿಯಂತಹ ರೈತಸ್ನೇಹಿ ವ್ಯವಸ್ಥೆಯನ್ನೇ ಗೌಣ ಮಾಡಲು ಮುಂದಾಗಿದೆ. ರೈತರೇ ತಮ್ಮ ಉತ್ಪನ್ನಗಳಿಗೆ ಬೆಲೆ ನಿರ್ಧರಿಸುವ ವ್ಯವಸ್ಥೆ ಬರಲಿದೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ. ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೈತರಿಗೆ ಇಂತಹ ಸ್ವಾತಂತ್ರ್ಯ ಸಿಗಲು ಸಾಧ್ಯವೇ ಇಲ್ಲ’ ಎಂದರು.

‘ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಮೂಲಕ ವಿದ್ಯುತ್ ಉತ್ಪಾದನೆ ಹಾಗೂ ಪ್ರಸರಣದ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸುವ ಹುನ್ನಾರ ನಡೆಯುತ್ತಿದೆ. ಭಾಗ್ಯಜ್ಯೋತಿ, ಕುಟಿರ ಜ್ಯೋತಿ, ಕೃಷಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌ನಂತಹ ಯೋಜನೆಗಳು ನನೆಗುದಿಗೆ ಬೀಳಲಿವೆ’ ಎಂದರು.

ಪ್ರಮುಖರಾದ ಎನ್.ಡಿ. ವಸಂತಕುಮಾರ್, ರಾಮಣ್ಣ ಹಸಲರು, ವೈ.ಎನ್. ಹುಬ್ಬಳ್ಳಿ, ದಿನೇಶ್ ಶಿರವಾಳ, ಬಂಗಾರಪ್ಪ, ರಮೇಶ್ ಐಗಿನಬೈಲು, ಗಂಗಮ್ಮ, ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT