ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದ ಎದುರು ಕರಗುತ್ತಿರುವ ಮಲೆನಾಡು

ಗುಡ್ಡೇಕೇರಿ: 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶರತ್ ಕಲ್ಕೋಡ್ ಆತಂಕ
Last Updated 7 ಫೆಬ್ರುವರಿ 2021, 1:19 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ಮಲೆನಾಡು ಮಲೆನಾಡಾಗಿ ಉಳಿದಿಲ್ಲ. ಸಹಜ ಸೌಂದರ್ಯದ ನೈಸರ್ಗಿಕ ಕಾಡಿನಲ್ಲಿ ಅಕೇಶಿಯಾ, ನೀಲಗಿರಿ ನೆಡುತೋಪುಗಳು ತಲೆ ಎತ್ತಿವೆ. ನದಿ ಹಳ್ಳಕೊಳ್ಳಗಳಲ್ಲಿ ಜೆಸಿಬಿ ಯಂತ್ರಗಳು ಮರಳು ದೋಚುತ್ತಿವೆ. ಬಂಡೆಗಳಲ್ಲಿ ಡೈನಾಮೈಟ್‌, ಜಿಲೆಟಿನ್ ಸ್ಫೋಟದ ಸದ್ದು ಕೇಳಿಸುತ್ತಿದೆ. ಮನುಷ್ಯನಿಗೆ ಹಣವೊಂದೇ ಮುಖ್ಯವೇ?’ ಎಂದು ಹಿರಿಯ ಸಾಹಿತಿ, ಲೇಖಕ, ಪತ್ರಕರ್ತ ಶರತ್ ಕಲ್ಕೋಡ್ ಬೇಸರ ವ್ಯಕ್ತಪಡಿಸಿದರು.

ಶನಿವಾರ ತಾಲ್ಲೂಕಿನ ಗುಡ್ಡೇಕೇರಿಯಲ್ಲಿ ನಡೆದ 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕನ್ನಡ ಶಾಲೆಗಳನ್ನು ಬದಿಗೊತ್ತಿ ಹಳ್ಳಿ–ಹಳ್ಳಿಗಳಿಂದ ಮಕ್ಕಳನ್ನು ತುಂಬಿಕೊಂಡು ಆಂಗ್ಲ ಮಾಧ್ಯಮ ಶಾಲೆಗೆ ತುರುಕಲಾಗುತ್ತಿದೆ. ತ್ಯಾಗ, ನಿಸ್ವಾರ್ಥ ಸೇವೆ ಕುವೆಂಪು ಕಾಲದ ಸಮಾಜದ ಆದರ್ಶ, ಮೌಲ್ಯಗಳಾಗಿದ್ದರೆ, ಸ್ವಾರ್ಥ, ಬಾಚಿಕೊಳ್ಳುವುದು, ಆಡಿದ ಮಾತಿಗೆ ತಪ್ಪುವುದು ಇವು ಈಗಿನ ಪರಮ ಧ್ಯೇಯೋದ್ದೇಶಗಳಾಗಿಬಿಟ್ಟಿವೆ. ಆ ಕಾಲದ ಬದಲಾವಣೆ ಸಮಾಜದ ಹಿತದೃಷ್ಟಿಯಿಂದಾದರೆ, ಈಗಿನ ಸ್ಥಿತ್ಯಂತರ ಪ್ರಕೃತಿಗೆ ಮಾತ್ರವಲ್ಲ ಮಾನವರಿಗೂ ಆತಂಕ, ತಲ್ಲಣ ಸೃಷ್ಟಿಸುತ್ತಿವೆ’ ಎಂದು ಶರತ್ ಕಲ್ಕೋಡ್ ಆತಂಕ ವ್ಯಕ್ತಪಡಿಸಿದರು.

‘ಕುವೆಂಪು ಆದರ್ಶಗಳನ್ನು ಪಾಲಿಸಿಕೊಂಡು ಬಂದವನು ನಾನು. ಕಲೆ, ಸಾಹಿತ್ಯ, ವೈಚಾರಿಕ ಚಿಂತನೆ ಮೈಗೂಡಿಸಿಕೊಂಡು ಮುನ್ನಡೆದರೆ ಚೈತನ್ಯಮುಖಿ ನವಸಮಾಜ ನಿರ್ಮಾಣ ಸಾಧ್ಯ. ಶಬ್ದ, ಲಯಗಳಲ್ಲಿ ಆವಿರ್ಭವಿಸಿ ಹೃದಯದಲ್ಲಿ ಪುನರ್ ಸೃಷ್ಟಿಯಾಗಿ ಪಡೆಯುವುದೇ ರಸಾನುಭವ. ಹಾಗೆ ಪಡೆದ ರಸಾನುಭವ ಒಳಿತು ಕೆಡಕು ವಿಶ್ಲೇಷಿಸಿ, ವೈಯಕ್ತಿಕ, ಸಮಾಜದ ಹಿತಕ್ಕಾಗಿ ಯಾವ ಯಾವ ಅಂಶಗಳನ್ನು ಪಾಲಿಸಬೇಕು. ನೀತಿ ಬೋಧಕವಾಗಿರಬೇಕೆಂಬ ಮಾರ್ಗದರ್ಶನ ನೀಡುವುದೇ ಸಾಹಿತ್ಯ’ ಎಂದರು.

‘ಪಠ್ಯ ಪುಸ್ತಕದಲ್ಲಿ ಗೋವಿನ ಹಾಡು, ಕಿಂದರಿಜೋಗಿಯಂಥ ಗೀತೆಗಳು ಅಡಕವಾಗಿಲ್ಲ ಎಂಬ ವಿಷಯ ಬೇಸರ ಮೂಡಿಸುತ್ತದೆ. ಲಯಬದ್ಧ ಕಾವ್ಯ ಎಂಥ ಮೋಡಿ ಮಾಡಬಲ್ಲದು ಎಂಬುದಕ್ಕೆ ಇಂಥ ಗೀತೆಗಳು ಸಾಕ್ಷಿಯಾಗಿವೆ. ನೀತಿ ಬೋಧನೆಯ ಶಿಶುಗೀತೆಗಳು ಮಕ್ಕಳ ಪಠ್ಯದಲ್ಲಿ ಅಡಕವಾಗುವಂತೆ ಎಚ್ಚರ ವಹಿಸುವ ಅಗತ್ಯವಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ, ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ, ‘ರಾಜ್ಯ, ರಾಷ್ಟ್ರಕ್ಕೆ ಸಾಹಿತ್ಯ ದಿಗ್ಗಜರನ್ನು ನೀಡಿದ್ದ ತೀರ್ಥಹಳ್ಳಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ದೊಡ್ಡ ನಿರೀಕ್ಷೆ ಹುಟ್ಟಿಸುತ್ತದೆ. ಸಾಹಿತ್ಯ ಸಮ್ಮೇಳನ ಕೇವಲ ವೇದಿಕೆ ಕಾರ್ಯಕ್ರಮ ಆಗದೇ ಚರ್ಚೆ, ಗೋಷ್ಠಿ, ಚಿಂತನೆಗೆ ಹಚ್ಚುವಂತಾಗಬೇಕು. ಸಾಹಿತ್ಯ ಮನಸ್ಸು, ಹೃದಯವನ್ನು ವಿಶಾಲ ಗೊಳಿಸುವಂತಾಗಬೇಕು’ ಎಂದರು.

‘ಕುವೆಂಪು ಅವರು ಮಲೆನಾಡನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಹಿಂದಿನ ಮಲೆನಾಡಿನ ಚಿತ್ರಣವನ್ನು ಇಂದಿನ ಪೀಳಿಗೆಗೆ ಒಪ್ಪಿಸಲು ಸಾಧ್ಯವಿಲ್ಲ. ಪುಸ್ತಕಗಳ ಓದು ನಮ್ಮ ಬದಕನ್ನು ಬದಲಾಯಿಸುವಂತಾಗಬೇಕು’ ಎಂದು ಹೇಳಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ, ಮಾಜಿ ಶಾಸಕ ಕಡಿದಾಳ್ ದಿವಾಕರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ. ಶಂಕರಪ್ಪ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಆಡಿನಸರ ಸತೀಶ್ ಕುಮಾರ್ ಮಾತನಾಡಿದರು.

ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಟಿ.ಎಲ್. ಸುಬ್ರಹ್ಮಣ್ಯ ಅಡಿಗ, ಬೆಂಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯೆ ಭಾರತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನವಮಣಿ, ಉಪಾಧ್ಯಕ್ಷೆ ಯಶೋದಾ, ಸದಸ್ಯೆ ವೀಣಾ ಗಿರೀಶ್, ತಹಶೀಲ್ದಾರ್ ಡಾ.ಎಸ್.ಬಿ. ಶ್ರೀಪಾದ್, ಬಿಇಒ ಆನಂದಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT