ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ 1.5 ಕಿ.ಮೀಗೆ ₹ 40 ದರ ನಿಗದಿ

ಡಿಸೆಂಬರ್‌ 15ರಿಂದ ಆಟೊಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ
Last Updated 15 ನವೆಂಬರ್ 2022, 5:56 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದಲ್ಲಿ ಡಿಸೆಂಬರ್‌ 15ರಿಂದ ಆಟೊಗಳಲ್ಲಿ ಮೀಟರ್‌ ಅಳವಡಿಕೆಕಡ್ಡಾಯ. ಮೀಟರ್ ಅಳವಡಿಕೆ ನಂತರ ಮೊದಲ ಒಂದೂವರೆ ಕಿ.ಮೀಗೆ ₹40 ದರ ನಿಗದಿಗೊಂಡಿದೆ. ನಂತರದ ಪ್ರತಿ ಕಿ.ಮೀಗೆಪ್ರಯಾಣಿಕರು ₹ 20 ಪಾವತಿಸಬೇಕಿದೆ.

ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಎಸ್ಪಿ ಜಿ.ಕೆ. ಮಿಥುನ್‌ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ ಹಾಗೂ ಆಟೊ ಚಾಲಕರು ಹಾಗೂ ಮಾಲೀಕರ ಸಂಘದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ರಾತ್ರಿ 10ರಿಂದ ಬೆಳಗಿನ ಜಾವ 5ರವರೆಗೆ ಮೀಟರ್‌ನ ಮೊತ್ತದ ಒಂದೂವರೆ ಪಟ್ಟು ಹಣವನ್ನೂ ಪ್ರಯಾಣಿಕರು ಪಾವತಿಸಬೇಕಿದೆ. ಜಿಲ್ಲಾಡಳಿತದ ನಿರ್ಧಾರಕ್ಕೆ ಆಟೊ ಚಾಲಕರ ಸಂಘದ ಪ್ರತಿನಿಧಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ತಿಂಗಳು ಗಡುವು: ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲ ಆಟೊಗಳಿಗೂ ಮೀಟರ್ ಅಳ
ವಡಿಕೆಗೆ ಒಂದು ತಿಂಗಳು (ಡಿಸೆಂಬರ್ 14) ಗಡುವು ನೀಡಿದ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಮೀಟರ್ ಅಳವಡಿಸದ ಆಟೊಗಳನ್ನು ಮುಟ್ಟುಗೋಲು (ಸೀಜ್) ಹಾಕುವಂತೆ ಸಭೆಯಲ್ಲಿ ಹಾಜರಿದ್ದ ಟ್ರಾಫಿಕ್ ಇನ್‌ಸ್ಪೆಕ್ಟರ್‌ಗೆ ಸೂಚನೆ ನೀಡಿದರು.

ಪ್ರಿಪೇಯ್ಡ್ ಕೌಂಟರ್: ಶಿವಮೊಗ್ಗದ ಬಸ್‌ ನಿಲ್ದಾಣ ಹಾಗೂ ರೈಲು ನಿಲ್ದಾಣದ ಬಳಿ ಪ್ರಿಪೇಯ್ಡ್ ಕೌಂಟರ್ ತೆರೆಯಲು ಡಿಸಿ ಸೂಚಿಸಿದರು. ಮೀಟರ್ ದರ ನಿಗದಿ ಆದರೆ ಪ್ರಿಪೇಯ್ಡ್ ಕೌಂಟರ್ ಅಗತ್ಯವಿಲ್ಲ ಎಂದು ಆಟೊ ಚಾಲಕರ ಸಂಘದ ಪದಾಧಿಕಾರಿಗಳು ಹೇಳಿದರೂ ಜಿಲ್ಲಾಡಳಿತ ಅದಕ್ಕೆ ಮನ್ನಣೆ ನೀಡಲಿಲ್ಲ.

‘ಸದ್ಯ ಕೌಂಟರ್ ತೆರೆಯೋಣ. ಪ್ರಯಾಣಿಕರ ಸ್ಪಂದನೆ ನೋಡಿಕೊಂಡು ಮತ್ತೊಂದು ಸಭೆ ನಡೆಸಿ ಆ ಬಗ್ಗೆ ನಿರ್ಧಾರ ಕೈಗೊಳ್ಳೋಣ’ ಎಂದು ಎಸ್ಪಿ ತಿಳಿಸಿದರು.

ಮತ್ತೆ ಪರ್ಮಿಟ್ ಬೇಡ: ಹೊಸದಾಗಿ ಆಟೊಗಳಿಗೆ ಪರ್ಮಿಟ್ ಕೊಡಬೇಡಿ. ಈಗಾಗಲೇ ನಗರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಆಟೊ ಪರ್ಮಿಟ್‌ ವಿತರಿಸಲಾಗಿದೆ. ಈಗ ಇರುವವರಿಗೇ ವ್ಯಾಪಾರ ಆಗುತ್ತಿಲ್ಲ ಎಂದು ಚಾಲಕರ ಸಂಘದವರು ಕೋರಿದರು. ಅದಕ್ಕೆ ಸಭೆ ಸಮ್ಮತಿಸಿತು.

ಸಮವಸ್ತ್ರ ಕಡ್ಡಾಯ: ಆಟೊ ಚಾಲಕರು ಚಾಲನೆ ವೇಳೆ ಸಮವಸ್ತ್ರ ಧರಿಸುವುದು ಕಡ್ಡಾಯ. ನಟ ರಜನಿಕಾಂತ್ ಸಿನಿಮಾಗಳ ರೀತಿ ಎರಡು ಅಂಗಿ ಹಾಕಿಕೊಂಡು ಸ್ಟೈಲ್ ಮಾಡುವುದು ಸಲ್ಲ ಎಂದು ಡಿಸಿ ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು. ಸಮವಸ್ತ್ರ ಧರಿಸದವರಿಗೆ ದಂಡ ವಿಧಿಸುವಂತೆ ಟ್ರಾಫಿಕ್‌ ಇನ್‌ಸ್ಪೆಕ್ಟರ್‌ಗೆ ಸೂಚಿಸಿದರು.

ಶೇರಿಂಗ್ ವ್ಯವಸ್ಥೆ ಇಲ್ಲ: ಮೀಟರ್ ಅಳವಡಿಕೆ ನಂತರ ಆಟೊಗಳಲ್ಲಿ ಶೇರಿಂಗ್ ವ್ಯವಸ್ಥೆ ಇರುವುದಿಲ್ಲ ಎಂದು ಹೇಳಿದ ಡಿಸಿ, ಆಟೊ ಚಾಲಕರ ಮನವಿ ಹಿನ್ನೆಲೆಯಲ್ಲಿ ಸೀಟ್‌ಗೆ ಇಷ್ಟು ಎಂದು ದರ ನಿಗದಿ ಮಾಡಿ ಕರೆದೊಯ್ಯುವುದನ್ನು ನಿಲ್ಲಿಸಲು ಆರ್‌ಟಿಒಗೆ ಸೂಚನೆ ನೀಡಿದರು. ಆಟೊದಲ್ಲಿ ನಿಗದಿಯಷ್ಟು ಪ್ರಯಾಣಿಕರು ಮಾತ್ರ ಇರಬೇಕು. ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಕಡ್ಡಾಯವಾಗಿ ಈ ನಿಯಮ ಪಾಲಿಸಿ ಎಂದು ಡಿಸಿ ಹೇಳಿದರು.

ಫ್ರೀಡಂ ಪಾರ್ಕ್‌ನಲ್ಲಿ ಮೀಟರ್ ಅಳವಡಿಕೆ

ಶಿವಮೊಗ್ಗದ ವಿನೋಬ ನಗರದಲ್ಲಿರುವ ಫ್ರೀಡಂ ಪಾರ್ಕ್‌ನಲ್ಲಿ ಆಟೊಗಳಿಗೆ ಮೀಟರ್ ಅಳವಡಿಕೆ ಕಾರ್ಯ ಮಂಗಳವಾರದಿಂದ ಆರಂಭವಾಗಲಿದೆ. ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿ ಮೇಲ್ವಿಚಾರಣೆಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ.

ದಿನಕ್ಕೆ ಕನಿಷ್ಠ 100 ಆಟೊಗಳಿಗೆ ಮೀಟರ್ ಅಳವಡಿಕೆ ಮಾಡುವಂತೆ ಸಭೆಯಲ್ಲಿದ್ದ ಅಧಿಕಾರಿಗೆ ಡಿಸಿ ಸೂಚಿಸಿದರು. ಆಟೊ ಮೀಟರ್ ಅಳವಡಿಕೆಗೆ ನೋಡಲ್ ಅಧಿಕಾರಿ ಆಗಿ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಅವರನ್ನು ನೇಮಿಸಲಾಯಿತು.

ಮೀಟರ್ ಅಳವಡಿಕೆಗೆ ಆಟೊ ಚಾಲಕರು ಚಾಲನಾ ಪರವಾನಗಿ ಪತ್ರ, ಆಟೊ ಪರ್ಮಿಟ್ ಸೇರಿದಂತೆ ಇತರೆ ದಾಖಲೆ ಕಡ್ಡಾಯವಾಗಿ ತರುವಂತೆ ಆರ್‌ಟಿಒ ಗಂಗಾಧರ್ ತಿಳಿಸಿದರು.

ದರ ನಿಗದಿ: ಹಗ್ಗ–ಜಗ್ಗಾಟ..

ಮೀಟರ್ ಅಳವಡಿಕೆ ನಂತರ ಮೊದಲ ಎರಡು ಕಿ.ಮೀಗೆ ₹ 40 ನಿಗದಿ ಮಾಡಲು ಡಿಸಿ ಮುಂದಾಗಿದ್ದರು. ದಕ್ಷಿಣ ಕನ್ನಡದಲ್ಲಿ ಮೊದಲ ಒಂದೂವರೆ ಕಿ.ಮೀಗೆ ₹ 35 ಇದೆ. ಚಿಲ್ಲರೆ ಸಮಸ್ಯೆ ಆಗದಿರಲಿ ಎಂದು ಇಲ್ಲಿ ₹ 40 ನಿಗದಿ ಮಾಡಿದ್ದೇವೆ ಎಂದು ಹೇಳಿದರು. ಅದಕ್ಕೆ ಆಟೊ ಚಾಲಕರು ಒಪ್ಪಲಿಲ್ಲ. ಶಿವಮೊಗ್ಗ ಸಣ್ಣ ನಗರ. ಈಗ ಇಂಧನ, ವಾಹನ, ತೆರಿಗೆ ಎಲ್ಲವೂ ಹೆಚ್ಚಳಗೊಂಡಿದೆ. ಹೀಗಾಗಿ ಒಂದೂವರೆ ಕಿ.ಮೀಗೆ ₹ 40 ನಿಗದಿ ಮಾಡಿ ಎಂದು ಪಟ್ಟುಹಿಡಿದರು. ಕೊನೆಗೆ ಸಭೆ ಅದಕ್ಕೆ ಸಮ್ಮತಿ ಸೂಚಿಸಿತು.

‘ಸಿಟಿ ಬಸ್‌ಗಳಲ್ಲಿ ನಿಂತು ಪ್ರಯಾಣಿಸಲು ಅವಕಾಶ ಕೊಡಬೇಡಿ. ಎಷ್ಟು ಆಸನಗಳಿವೆಯೋ ಅಷ್ಟು ಪ್ರಯಾಣಿಕರನ್ನು ಕರೆದೊಯ್ಯಲು ಅನುಮತಿ ಕೊಡಿ. ಆಗ ನಾವು ಆಟೊ ಚಾಲಕರು ಬದುಕಿಕೊಳ್ಳುತ್ತೇವೆ’ ಎಂದು ಸಂಘದವರು ಮನವಿ ಮಾಡಿದರು.

ಅದಕ್ಕೆ ಇನ್ನೊಂದು ಸಭೆ ಕರೆಯೋಣ ಎಂದು ಡಿಸಿ ತಿಳಿಸಿದರು.

ನನಗೂ ಬಿಸಿ ತಟ್ಟಿದೆ: ಡಿಸಿ

‘ಹಿಂದಿನ ಎಸ್ಪಿ (ಲಕ್ಷ್ಮೀಪ್ರಸಾದ್‌) ಜೊತೆ ಕೆಲಸಕ್ಕೆಂದು ಹೊರಗೆ ಹೋಗಿ ವಾಪಸ್ ಬರುವಾಗ ಆಟೊ ಹತ್ತಲು ಮುಂದಾದೆವು. ಮೀನಾಕ್ಷಿ ಭವನದಿಂದ ನಮ್ಮ ಕಚೇರಿಗೆ (ಡಿಸಿ ಕಚೇರಿ) ಬರಲು ಚಾಲಕ ₹ 200 ಕೇಳಿದರು. ಬೇಡ ಎಂದು ಹೇಳಿ ನಮ್ಮ ವಾಹನ ತರಿಸಿ ಕಚೇರಿಗೆ ಮರಳಿದೆವು’ ಎಂದು ಡಿಸಿ ಸಭೆಯಲ್ಲಿ ಹೇಳಿದರು.

‘ಸ್ವತಃ ನನಗೆ ಈ ಅನುಭವ ಆಗಿದೆ.ಇನ್ನು ಸಾರ್ವಜನಿಕರಿಗೆ ಎಷ್ಟು ತೊಂದರೆ ಆಗುತ್ತಿರಬಹುದು. ಹೀಗಾಗಿ ಮೀಟರ್ ಅಳವಡಿಕೆ ಕಡ್ಡಾಯ ಮಾಡಲು ಮುಂದಾಗಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT