ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಸಂಸ್ಕೃತಿಯ ಅಡಿಪಾಯ

ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಿವಾನಂದ ಕೆಳಗಿನಮನಿ
Last Updated 21 ಅಕ್ಟೋಬರ್ 2021, 7:56 IST
ಅಕ್ಷರ ಗಾತ್ರ

ಶಿವಮೊಗ್ಗ: ಭೂಮಿಯ ಮೇಲೆ ಬೆಟ್ಟಗಳೂ, ನದಿಗಳೂ ಇರುವವರೆಗೂ ರಾಮಾಯಣ ಪ್ರಚಾರಗೊಳ್ಳುತ್ತಲೇ ಇರುತ್ತದೆ. ರಾಮಾಯಣ ಇದುವವರೆಗೂ ವಾಲ್ಮೀಕಿಯ ಹೆಸರು ಇರುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯ ಕನ್ನಡ ಭಾರತಿಯ ಪ್ರಾಧ್ಯಾಪಕ ಡಾ. ಶಿವಾನಂದ ಕೆಳಗಿನಮನಿ ಹೇಳಿದರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಶಿಕ್ಷಣ ತಜ್ಞ, ಕವಿ, ತತ್ವಜ್ಞಾನಿ, ಸಮಾಜ ಶಾಸ್ತ್ರಜ್ಞ, ಮಹಾನ್ ಮಾನವತಾವಾದಿ ಮಹರ್ಷಿ ವಾಲ್ಮೀಕಿ ಸಂಸ್ಕೃತ ಸಾಹಿತ್ಯದ ಪ್ರಥಮ ಕವಿ. ಎಲ್ಲ ಶಾಸ್ತ್ರಗಳು, ಕಾವ್ಯಗಳಿಗೆ ಸ್ಫೂರ್ತಿಯ ಸೆಲೆ. ವೇದಗಳ ಅಂತರಾಳದ ತತ್ವ ಹೀರಿಕೊಂಡು, ಅನುಭಾವದಿಂದ ರಚಿಸಿರುವ ರಾಮಾಯಣ ಮನುಷ್ಯ ಸಕಲ ರಾಗಗಳ, ದುರಿತಗಳಿಗೆ ಪರಿಹಾರ ಒದಗಿಸುವ ಕೈಪಿಡಿ. ಇಡೀ ಮನುಕುಲದ ಸೌಖ್ಯ, ರಕ್ಷಣೆ, ಬೆಳವಣಿಗೆ ಬಗ್ಗೆ ಹೇಳುವ ಮಾರ್ಗದರ್ಶಿಕೆ ಎಂದು ಬಣ್ಣಿಸಿದರು.

ಬಿಯಾಸ್ ನದಿ ತಟದಲ್ಲಿ ವಾಸಿಸುತ್ತಿದ್ದ ರತ್ಮಾಕರ ಎಂಬ ವಲ್ಯ ಅಂದರೆ ಕಳ್ಳ ತನ್ನ ಧ್ಯಾನ, ತಪಸ್ಸಿನಿಂದ ಜ್ಞಾನೋದಯ ಹೊಂದಿದ ಉಪಕಥೆಗಳಿವೆ. ಕ್ರೌಂಚಪಕ್ಷಿ ವಧೆಯಿಂದ ಪ್ರೇರಿತರಾಗಿ ಹೆಣ್ಣು ಒಂದು ಸಂಸಾರಕ್ಕೆ ಎಷ್ಟು ಮುಖ್ಯ ಎಂದು ತಿಳಿಸಲು ಗೃಹಸ್ಥಾಶ್ರಮ ಧರ್ಮವನ್ನು ಇಡೀ ರಾಮಾಯಣದಲ್ಲಿ ಸಾರಿದ್ದಾರೆ ಎಂದರು.

ರಾಮ ಎಂದರೆ ಆನಂದ, ಸಮೃದ್ಧಿ. ರಾಮ ಪ್ರಜಾಪ್ರಭುತ್ವದ ಪ್ರತಿನಿಧಿ. ಆದರ್ಶ ಪುರುಷ. ರಾಜಕೀಯ ಸೂಕ್ಷ್ಮಗ್ರಾಹಿ. ರಾಮಾಯಣದಲ್ಲಿ ಏಕಪತ್ನಿ ತತ್ವ ಸಾರುವ ಮೂಲಕ ಇದು ಸಮಾಜದ ಸ್ವಾಸ್ಥ್ಯಕ್ಕೆ ಎಷ್ಟು ಮುಖ್ಯ ಎಂಬುದನ್ನು ತಿಳಿಸಿರುವ ವಾಲ್ಮೀಕಿಯಂತಹ ಮಹಾನ್ ಚೇತನರ ಜಯಂತಿ ಕೇವಲ ಒಂದು ದಿನಕ್ಕೆ ಸೀಮಿತ ಆಗಬಾರದು. ಭಾರತೀಯ ಸಂಸ್ಕೃತಿಯ ಅಡಿಪಾಯ ಆಗಿರುವ ವಾಲ್ಮೀಕಿ ಏಕೆ ಜನಪ್ರಿಯ ನಾಯಕನಾಗಲಿಲ್ಲ. ಅವರ ಅಧ್ಯಯನ ಕೇಂದ್ರಗಳು, ಭವನ, ಪೀಠಗಳಿಲ್ಲ ಎಂಬ ತೊಡಕಿನ ಪ್ರಶ್ನೆಗಳಿವೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ‘ವಾಲ್ಮೀಕಿ ರಚಿತ ರಾಮಾಯಣ ಕೇವಲ ಒಂದು ಪುಸ್ತಕ ಅಲ್ಲ. ಬದಲಾಗಿ ಎಲ್ಲರ ಇಡೀ ಬದುಕಿನ ಸಾರ. ಭಾರತೀಯ ಸಂಸ್ಕೃತಿಯ ಪ್ರತೀಕ ಹಾಗೂ ಜೀವನ ಮಾರ್ಗದರ್ಶಿಕೆ’ ಎಂದರು.

‘ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾದ ಮೌಲ್ಯಭರಿತ ಸಂಹಿತೆ ರಾಮಾಯಣ. ನಮ್ಮ ಸಂಸ್ಕೃತಿಯಲ್ಲಿ ಏಕಪತ್ನಿತ್ವ ಪ್ರತಿಪಾದಿಸಿದ ಸಂಹಿತೆ. ಸೀತೆಯ ಮೂಲಕ ಪಾವಿತ್ರ್ಯ, ಲಕ್ಷ್ಮಣ, ಭರತರ ಮೂಲಕ ಭ್ರಾತ್ವತ್ವ, ತಂದೆ-ತಾಯಿ ಗೌರವ ಸೇರಿ ಮಾದರಿ, ಆದರ್ಶ ಜೀವನ ನಡೆಸಲು ದಾರಿ ತೋರುವ ದೀಪಿಕೆ ಇದಾಗಿದ್ದು, ಇಡೀ ವಿಶ್ವವೇ ರಾಮಾಯಣವನ್ನು ಓದುತ್ತಿದೆ’ ಎಂದು ಹೇಳಿದರು.

‘ರಾಮ ಜನ್ಮಭೂಮಿ ಅಯೋಧ್ಯೆ ಎಂಬುದರಲ್ಲಿ ಅತಿ ಸಾಮಾನ್ಯರಿಂದ ಹಿಡಿದು ವಿದೇಶಿಗರಿಗೂ ಗೊಂದಲವಿಲ್ಲ. ಆದರೆ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಮ್ಮ ದೇಶದವರೇ ಈ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಯೋಧ್ಯೆ ರಾಮಜನ್ಮ ಭೂಮಿ ಎಂಬ ಬಗ್ಗೆ ರಾಮಾಯಣ ಮಹಾಕಾವ್ಯದಲ್ಲೂ ಉಲ್ಲೇಖವಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು. ಅಂತರ್ಜಾತಿ ವಿವಾಹಿತ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಶಾಸಕ ಆರ್. ಪ್ರಸನ್ನಕುಮಾರ್, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ದತ್ತಾತ್ರಿ, ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಪಾಲಿಕೆ ಸದಸ್ಯರಾದ ಶಿವಾಜಿ, ವಿಶ್ವಾಸ್,ವಾಲ್ಮೀಕಿ ಸಮಾಜದ ಮುಖಂಡರಾದ ಲಕ್ಷ್ಮಣಪ್ಪ, ರೂಪಾ ಲಕ್ಷ್ಮಣ, ನಾಗೇಶ್, ಸೀತಾರಾಂ, ನಾಗರಾಜ್, ವನಜಾಕ್ಷಿ, ಮೋಹನ, ಬಿ.ಎಸ್‌. ನಾಗರಾಜ್‌, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್‌. ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಅಜ್ಜಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT