ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಬಹುಸಂಖ್ಯಾತರು ಸೌಹಾರ್ದತೆ ಒಪ್ಪುತ್ತಾರೆ

‘ಕನ್ನಡತನʼ ಪುಸ್ತಕ ಬಿಡುಗಡೆಗೊಳಿಸಿದ ಕೆ.ಆರ್.‌ ದುರ್ಗಾದಾಸ್‌
Published : 28 ಸೆಪ್ಟೆಂಬರ್ 2024, 15:39 IST
Last Updated : 28 ಸೆಪ್ಟೆಂಬರ್ 2024, 15:39 IST
ಫಾಲೋ ಮಾಡಿ
Comments

ತೀರ್ಥಹಳ್ಳಿ: ದೇಶದಲ್ಲಿ ಜಾತಿ, ಕೋಮು ಸಂಘರ್ಷ ನಡೆದಾಗ ಸಾಮೂಹಿಕ ಬೆಂಬಲ ಇರುವುದಿಲ್ಲ. ಸೌಹಾರ್ದ, ಪ್ರೀತಿ ಬಯಸುವ ಬಹುಸಂಖ್ಯಾತರು ದೇಶದಲ್ಲಿದ್ದಾರೆ. ಒಗ್ಗಟ್ಟಿನ ಧ್ವನಿಗೂಡಿಸುವಲ್ಲಿ ಹಿಂದೆ ಬಿದಿದ್ದಾರೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆರ್.ದುರ್ಗಾದಾಸ್‌ ಅಭಿಪ್ರಾಯಪಟ್ಟರು.

ಇಲ್ಲಿನ ಬಂಟರ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸರ್ಜಾಶಂಕರ್‌ ಹರಳಿಮಠ ಅವರ ಸಂಶೋಧನಾ ಕೃತಿ ‘ಕನ್ನಡತನ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಂಸ್ಕೃತ, ಹಿಂದಿ ಭಾಷಾ ಹೇರಿಕೆ ಭಿನ್ನವಾಗಿಲ್ಲ. ಕನ್ನಡದ ಯಜಮಾನಿಕೆಯ ಗಟ್ಟಿತನವನ್ನೇ ಕನ್ನಡದ ಕವಿಗಳು ಜಾಗೃತಗೊಳಿಸಿದ್ದಾರೆ. ಕುವೆಂಪು ಆ ಸಾಲಿನಲ್ಲಿ ಸೇರುವ ಅಗ್ರ ಗಣ್ಯರು. ಹಗೆತನ, ದ್ವೇಷ, ಅಸೂಯೆ ಬಿಟ್ಟು ಕನ್ನಡಿಗರು ಒಗ್ಗೂಡಬೇಕು. ಕನ್ನಡದ ಜೊತೆಗೆ ಬದುಕುವ ತುಳು, ಕೊಡವ, ಲಂಬಾಣಿ ಮುಂತಾದ ಭಾಷೆಗಳಿಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಸಾಮಾಜ್ಯಶಾಯಿ ವ್ಯವಸ್ಥೆಯಂತೆ ಪ್ರಜಾಪ್ರಭುತ್ವವು ಯುದ್ಧವನ್ನು ಪೋಷಿಸುತ್ತಿದೆ. ಯುದ್ಧದಲ್ಲಿ ಕೊನೆಗೆ ಗೆಲ್ಲುವುದು ಅಮಾಯಕರ, ಯುವಕರ ಸಾವು ಮಾತ್ರ. ಶ್ರೀರಾಮಚಂದ್ರನ ಕುರಿತ ಖಾಸಗಿ ಪಕ್ಷದ ಪ್ರಚಾರಕ್ಕೂ ರಾಮಾಯಣಕ್ಕೂ ಸಂಬಂಧ ಇಲ್ಲ. ರಾಮನ ಜೊತೆಗೆ ಸೀತೆ, ಲಕ್ಷ್ಮಣ, ಹನುಮಂತನ ಬಾಂಧವ್ಯ ಇದೆ. ಯುದ್ಧವನ್ನು ಪ್ರತಿಪಾದಿಸುವ ಮನಸ್ಥಿತಿಗೆ ತಕ್ಕಂತೆ ರಾಮನಿಗೆ ಬಿಲ್ಲುಬಾಣ ಹೊರಿಸಲಾಗಿದೆ. ಅಯೋಧ್ಯೆಯಲ್ಲಿ ಏಕಾಂಗಿ ರಾಮ ಮಾತ್ರ ಕಾಣಬಹುದು ಎಂದು ಟೀಕಿಸಿದರು.

ಭಾಷೆ ಸ್ವಾಯತ್ತ ಅಲ್ಲ. ಅದನ್ನು ನುಡಿಯುವ, ಆಡುವ ಮನುಜನ ಸ್ಥಾನಮಾನಕ್ಕೆ ಹೊಂದಿಕೊಂಡಿದೆ. ಸ್ವಾತಂತ್ರ ನಂತರದ ರಾಜಕಾರಣಿಗಳಲ್ಲಿ ಪ್ರಾಮಾಣಿಕತೆ ಇಲ್ಲ. ರಾಜಕಾರಣ ವ್ಯಾಪಾರಕ್ಕೆ ಬಳಕೆಯಾಗುತ್ತಿದೆ. ಕನ್ನಡಕ್ಕೆ ಅಂತವರಿಂದಲೇ ತೊಂದರೆಯಾಗುತ್ತಿದೆ. ಇವೆಲ್ಲವನ್ನು ಇಟ್ಟುಕೊಂಡ ಗುಣ ಗ್ರಾಹಿ ಕೃತಿ ‘ಕನ್ನಡತನ’ ಎಂದರು.

‘ಕನ್ನಡ ಧರ್ಮ, ವರ್ಗಕ್ಕೆ ಸೇರದೆ ಒಳಗೊಳ್ಳುವ ಭಾಷೆಯಾಗಬೇಕು. ಮಿತವಾದ ಶಕ್ತಿಗಳ ಅಡಿಯಾಳಾಗದೆ ಕೆಳವರ್ಗದ ಹಿತ ಕಾಯಬೇಕು. ಪೂರ್ವಗ್ರಹ, ವೈಯಕ್ತಿಕ ಭಾವನೆ ತುರುಕದೆ ನಿರ್ಲಿಪ್ತವಾಗಿ ಕೃತಿ ಮೂಡಿದೆ’ ಎಂದು ಸಾಹಿತಿ ಜೆ.ಕೆ. ರಮೇಶ್‌ ಅಭಿಪ್ರಾಯಪಟ್ಟರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ. ರಹಮತ್‌ ಉಲ್ಲಾ ಅಸಾದಿ, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಕೆ. ರಮೇಶ್‌ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ ಹೆಗಡೆ, ಲೇಖಕ ಸರ್ಜಾಶಂಕರ ಹರಳಿಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT